ಸಾರಾಂಶ
ಬೈಂದೂರು ತಾಲೂಕಿನ ಪ್ರಗತಿಪರ ಕೃಷಿಕ ಬೊಳಂಬಳ್ಳಿ ಪರಮೇಶ್ವರ ಭಟ್ ಅವರು ಸಾಕಿದ್ದ ಅಪ್ಪು ಮತ್ತು ಕಿಟ್ಟು ಕೋಣಗಳನ್ನು ಕಾಂತಾರ ಸಿನಿಮಾದ ನಾಯಕ ರಿಷಬ್ ಶೆಟ್ಟಿ, ಕಂಬಳದ ದೃಶ್ಯದಲ್ಲಿ ಓಡಿಸಿದ್ದರು. ಈ ಕೋಣಗಳನ್ನು ಭಟ್ ಅವರ ಮಗಳು ಚೈತ್ರಾ ಪರಮೇಶ್ವರ ಭಟ್ ಬಹಳ ಪ್ರೀತಿಯಿಂದ ಸಾಕುತ್ತಿದ್ದರು.
ಕನ್ನಡಪ್ರಭ ವಾರ್ತೆ ಕುಂದಾಪುರಸೂಪರ್ ಹಿಟ್ ಸಿನಿಮಾ ಕಾಂತಾರದ ಕಂಬಳದ ದೃಶ್ಯದಲ್ಲಿ ಕಾಣಿಸಿಕೊಂಡಿದ್ದ 2 ಕೋಣಗಳಲ್ಲೊಂದಾದ ಅಪ್ಪು (16 ವರ್ಷ) ವಯೋಸಹಜ ಅನಾರೋಗ್ಯದಿಂದ ಸಾವನ್ನಪ್ಪಿದೆ.ಇಲ್ಲಿನ ಬೈಂದೂರು ತಾಲೂಕಿನ ಪ್ರಗತಿಪರ ಕೃಷಿಕ ಬೊಳಂಬಳ್ಳಿ ಪರಮೇಶ್ವರ ಭಟ್ ಅವರು ಸಾಕಿದ್ದ ಅಪ್ಪು ಮತ್ತು ಕಿಟ್ಟು ಕೋಣಗಳನ್ನು ಕಾಂತಾರ ಸಿನಿಮಾದ ನಾಯಕ ರಿಷಬ್ ಶೆಟ್ಟಿ, ಕಂಬಳದ ದೃಶ್ಯದಲ್ಲಿ ಓಡಿಸಿದ್ದರು. ಈ ಕೋಣಗಳನ್ನು ಭಟ್ ಅವರ ಮಗಳು ಚೈತ್ರಾ ಪರಮೇಶ್ವರ ಭಟ್ ಬಹಳ ಪ್ರೀತಿಯಿಂದ ಸಾಕುತ್ತಿದ್ದರು.
ಮೃತ ಕೋಣವನ್ನು ಶನಿವಾರ ಮನೆಯ ಸಮೀಪವೇ ಎಲ್ಲ ರೀತಿಯ ಸಾಂಪ್ರದಾಯಿಕ ಗೌರವಗಳೊಂದಿಗೆ ಮಣ್ಣು ಮಾಡಲಾಯಿತು. ನೂರಾರು ಮಂದಿ ಕಂಬಳ ಪ್ರೇಮಿಗಳು ಅಪ್ಪುವಿನ ಅಂತಿಮ ದರ್ಶನ ಪಡೆದರು.ಕರಾವಳಿಯ ಸಾಂಪ್ರದಾಯಿತ ಮತ್ತು ಆಧುನಿಕ ಕಂಬಳ ಸ್ಪರ್ಧೆಗಳೆರಡರಲ್ಲೂ ಈ ಅಪ್ಪು - ಕಿಟ್ಟು ಜೋಡಿ ನೂರಾರು ಪದಕಗಳನ್ನು ಮಾಲಿಕರಿಗೆ ಗೆದ್ದುಕೊಟ್ಟಿದ್ದವು. ನೇಗಿಲು ಜೂನಿಯರ್ ವಿಭಾಗದಲ್ಲಿ ಎರಡು ಬಾರಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದವು. ಕುಂದಾಪುರ ಭಾಗದಲ್ಲಿ ನಡೆಯುವ ಕಂಬಳದಲ್ಲಿ 5 ವರ್ಷಗಳಿಂದ ಚಾಂಪಿಯನ್ ಆಗಿದ್ದವು. ಬೆಂಗಳೂರಲ್ಲಿ ನಡೆದ ಪ್ರಥಮ ಕಂಬಳದ ಕನೆಹಲಗೆ ವಿಭಾಗದಲ್ಲಿ 6.50 ಮೀಟರ್ ಎತ್ತರಕ್ಕೆ ನೀರು ಚಿಮ್ಮಿಸಿ ಪ್ರಥಮ ಪ್ರಶಸ್ತಿ ಪಡೆದಿದ್ದವು.