ಸಾರಾಂಶ
ಶೇ 80 ರಷ್ಟು ಅಹಿಂದ ಜನರಿಗೆ ಉಪಯೋಗವಾಗುವ ಕಾಂತರಾಜ್ ಆಯೋಗದ ವರದಿಯನ್ನು ಕೂಡಲೇ ಮಂಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಸಾಬ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು.
ಶೇ.80ರಷ್ಟು ಅಹಿಂದ ಜನರಿಗೆ ಅನುಕೂಲ । ಸಿಎಂ ಸಿದ್ದರಾಮಯ್ಯಗೆ ಮನವಿ
ಕನ್ನಡ ಪ್ರಭ ವಾರ್ತೆ ಹೊನ್ನಾಳಿಶೇ 80 ರಷ್ಟು ಅಹಿಂದ ಜನರಿಗೆ ಉಪಯೋಗವಾಗುವ ಕಾಂತರಾಜ್ ಆಯೋಗದ ವರದಿಯನ್ನು ಕೂಡಲೇ ಮಂಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಸಾಬ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು.
ನಗರದಲ್ಲಿ ಅವಳಿ ತಾಲೂಕು ಅಹಿಂದ ಹಾಗೂ ಶೋಷಿತ ಸಮುದಾಯಗಳ ವೇದಿಕೆಯಡಿ ಗುರುಭವನದಲ್ಲಿ ಆಯೋಜಿಸಿದ್ದ ಅಹಿಂದ ಹಾಗೂ ಶೋಷಿತ ವರ್ಗಗಳ ಸಭೆಯಲ್ಲಿ ಮಾತನಾಡಿದರು. ಈಗಾಗಲೇ ಹಲವಾರು ಬಾರಿ ಮುಖ್ಯಮಂತ್ರಿಗಳನ್ನು ಭೇಟಿಯಾದಗಲೆಲ್ಲಾ ಅವರ ಬಳಿ ಚರ್ಚಿಸಿ ಈ ವರದಿಯನ್ನು ಮಂಡಿಸಿದ್ದು ಎಲ್ಲಾ ಶೋಷಿತ ವರ್ಗಗಳಿಗೆ ನ್ಯಾಯ ಸಿಗುತ್ತದೆ. ಈಗಲೂ ಸಹ ಬೆಂಗಳೂರಿಗೆ ಹೋದ ಕೂಡಲೇ ಈ ಬಗ್ಗೆ ಮತ್ತೆ ಚರ್ಚಿಸಿ ವರದಿಯನ್ನು ಮಂಡಿಸುವಂತೆ ಮನವಿ ಮಾಡುತ್ತೇನೆ ಎಂದರು.ವರದಿಯನ್ನು ಮಂಡಿಸುವ ಮುಂಚೆಯೇ ವಿರೋಧ ಮಾಡುವುದು ಪೂರ್ವಾಗ್ರಹ ಪೀಡಿತ, ವರದಿ ಮಂಡಿಸಲಿ, ಅದರಲ್ಲೇನಾದರೂ ಲೋಪ ಇದ್ದರೆ ಅದನ್ನು ಸಿಎಂ ಬಳಿ ಚರ್ಚಿಸಿ ಅದಕ್ಕೆ ಸೂಕ್ತವಾದ ಪರಿಹಾರದ ಮಾರ್ಗವನ್ನು ಹುಡುಕಿಕೊಳ್ಳಬಹುದು ಅದನ್ನು ಬಿಟ್ಟು ವರದಿ ಮಂಡನೆಗೆ ಮುಂಚೆಯೇ ವಿರೋಧ ಮಾಡುವುದು ತರವಲ್ಲ ಎಂದರು.
ತಾಲೂಕು ಅಹಿಂದ ಮುಖಂಡ ಹಾಗೂ ಕಾಂಗ್ರೆಸ್ ಮುಖಂಡ ಬಿ.ಸಿದ್ದಪ್ಪ ಮಾತನಾಡಿ, ಈ ಹಿಂದೆ ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಕಾಂತರಾಜ್ ಅವರನ್ನು ಹಿಂದುಳಿದ ಆಯೋಗದ ಅಧ್ಯಕ್ಷರನ್ನಾಗಿ ಮಾಡಿದ್ದರು, ಈಗ ಸಿಎಂ ಆದ ಕೂಡಲೇ ವರದಿಯನ್ನು ಸ್ವೀಕರಿಸಿದ್ದಾರೆ, ಆದರೆ ಅದನ್ನು ಸಚಿವ ಸಂಪುಟದಲ್ಲಿ ಮಂಡಿಸಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಬಿಡುತ್ತಿಲ್ಲ, ವರದಿ ಮಂಡಿಸಿದರೆ ಶೇ80 ರಷ್ಟು ಇರುವ ಹಿಂದುಳಿದ ಎಲ್ಲಾ ವರ್ಗಗಳಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ನ್ಯಾಯ ಸಿಗುತ್ತದೆ ಎಂದರು.ಅಹಿಂದ ವರ್ಗದ ಮುಖಂಡ ಎ.ಬಿ.ರಾಮಚಂದ್ರಪ್ಪ ಮಾತನಾಡಿ, ಆಯೋಗದ ಅಧ್ಯಕ್ಷ ವರದಿಯನ್ನು ಸಿಎಂಗೆ ಹಸ್ತಾಂತರ ಮಾಡಿದಾಗಲೇ ಎಲ್ಲರೂ ಅದನ್ನು ಶೀಘ್ರವೇ ಸಚಿವ ಸಂಪುಟದಲ್ಲಿ ಮಂಡಿಸಿ, ಜಾರಿ ಮಾಡಿ ಎಂದು ಒತ್ತಾಯ ಮಾಡಬೇಕಿತ್ತು, ಅದನ್ನು ಯಾರೂ ಸಹ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಡಾ.ಅಲಸಂಗಿ, ಅಹಿಂದ ಸಮುದಾಯದ ತಾಲೂಕು ಅಧ್ಯಕ್ಷ ಡಾ.ಈಶ್ವರನಾಯ್ಕ್, ದಾದಪೀರ್ ಮಾತನಾಡಿದರು, ಅಹಿಂದ ಜಿಲ್ಲಾ ಹಾಗೂ ತಾಲೂಕು ಮುಖಂಡರಾದ ಹೊದಿಗೆರೆ ರಮೇಶ್, ವೀರೇಶ್, ರುದ್ರಮುನಿ, ರವಿನಾರಾಯಣ್, ಲೋಕಿಕೆರೆ ಸಿದ್ದಪ್ಪ, ಸಿರಾಜ್, ಎಚ್.ಬಿ.ಶಿವಯೋಗಿ, ಕರವೇ ಶ್ರೀನಿವಾಸ್, ವಾಜಿದ್, ಶಿವಾನಂದ್ ಬೇಲಿಮಲ್ಲೂರು, ದಿಡಗೂರು ಪಾಲಾಕ್ಷಪ್ಪ,ಎಂ.ಎಸ್.ಪಾಲಕ್ಷಪ್ಪ, ಬಾಬು ಹೋಬಳದಾರ್, ಎಂ.ಸುರೇಶ್.ಶೇಖರಪ್ಪ, ಡಿ.ಸಿ.ತಮ್ಮಣ್ಣ, ಮಂಜುನಾಥ್, ಇತರರು ಇದ್ದರು,