ಸಾರಾಂಶ
ಕನ್ನಡಪ್ರಭವಾರ್ತೆ ತುರುವೇಕೆರೆ
ಕಾಂತರಾಜ್ ಹಾಗೂ ಕುಲ್ದೀಪ್ ಸಿಂಗ್ ಆಯೋಗದ ಶಿಫಾರಸ್ಸನ್ನು ಕೂಡಲೇ ಜಾರಿಗೊಳಿಸಬೇಕೆಂದು ಕೇಂದ್ರ ತೆಂಗು ಮತ್ತು ನಾರು ಅಭಿವೃದ್ಧಿ ಮಂಡಲಿಯ ನಿರ್ದೇಶಕ ಹಾಗೂ ಹಿಂದುಳಿದ ವರ್ಗಗಳ ಮುಖಂಡ ಎಂ.ಟಿ.ಕೃಷ್ಣಮೂರ್ತಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.ಪತ್ರಕರ್ತರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಸಾಕಷ್ಟು ಹಿಂದುಳಿದ ಜನಾಂಗಗಳಿವೆ. ಅವುಗಳನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಮೇಲೆತ್ತುವ ಸಲುವಾಗಿ ಕಾಂತರಾಜ್ ಮತ್ತು ಕುಲ್ದೀಪ್ ಸಿಂಗ್ ಆಯೋಗವನ್ನು ಸರ್ಕಾರಗಳು ರಚನೆ ಮಾಡಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದವು. ಇದಕ್ಕಾಗಿ ನೂರಾರು ಕೋಟಿಗಳನ್ನು ವ್ಯಯಮಾಡಲಾಗಿದೆ. ರಚನೆಯಾಗಿರುವ ಆಯೋಗಗಳು ತಮ್ಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರೂ ಸಹ ಇದುವರೆಗೂ ಸದನದಲ್ಲಿ ಚರ್ಚಿಸದೇ ಇರುವುದು ಖಂಡನೀಯ ಎಂದರು.
ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂಧರ್ಭದಲ್ಲೇ ಸುಮರು ೧೮೦ ಕೋಟಿ ವೆಚ್ಚ ಮಾಡಿ ಕಾಂತರಾಜ್ ಆಯೋಗ ರಚಿಸಿದ್ದರು. ಇದುವರೆಗೂ ಆ ಆಯೋಗದ ಶಿಫಾರಸ್ಸು ಏನು ಎಂಬುದು ತಿಳಿಯದಾಗಿದೆ. ಹಿಂದುಳಿದ ವರ್ಗಗಳ ಸರ್ವತೋಮುಖ ಅಭಿವೃದ್ಧಿಗೆ ಬೇಕಾಗುವ ಸಲಹೆಗಳನ್ನು ಈ ಆಯೋಗ ನೀಡಿದೆ. ಆದರೆ ಅದನ್ನು ಸದನದನ್ನು ಬಹಿರಂಗಪಡಿಸುವ ಗೋಜಿಗೇ ಹೋಗದಿರುವುದು ದುರಂತವೇ ಸರಿ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮಗೆ ಅಧಿಕಾರಕ್ಕಿಂತ ಹಿಂದುಗಳಿದ ವರ್ಗಗಳ ಹಿತಕಾಯುವುದು ಮುಖ್ಯ ಎಂಬುದನ್ನು ಮನಗಾಣಬೇಕು. ಕೊಟ್ಟ ಭರವಸೆಯನ್ನು ಈಡೇರಿಸದಿದ್ದಲ್ಲಿ ಮುಂಬರುವ ದಿನಗಳಲ್ಲಿ ತೀವ್ರ ಪಶ್ಚಾತ್ತಾಪವನ್ನು ಪಡಬೇಕಾದೀತು ಎಂದು ಎಚ್ಚರಿಸಿದರು.ಮುಂಬರುವ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮುಯ್ಯನವರು ಸೂಕ್ತ ಕ್ರಮಕೈಗೊಂಡು ಕಾಂತರಾಜ್ ಮತ್ತು ಕುಲ್ದೀಪ್ ಸಿಂಗ್ ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸದಿದ್ದಲ್ಲಿ ಜಿಲ್ಲಾ, ತಾಲೂಕು ಮಟ್ಟದಲ್ಲಿ ಹಿಂದುಗಳಿದ ವರ್ಗಗಳ ಜನರು ಸರ್ಕಾರದ ವಿರುದ್ಧ ಸಿಡಿದೇಳುವ ದಿನ ದೂರವಿಲ್ಲ ಎಂದು ಭವಿಷ್ಯ ನುಡಿದರು. ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಮುಖಂಡರಾದ ಅರೇಮಲ್ಲೆನಹಳ್ಳಿ ಜಯರಾಮ್, ಚಿಕ್ಕಮಲ್ಲಿಗೆರೆ ಕರಿಯಪ್ಪ, ತಾಲೂಕು ಅಲೆಮಾರಿ ಸಮಿತಿಯ ಸದಸ್ಯ ಅಶೋಕ್ ಉಪಸ್ಥಿತರಿದ್ದರು.