ಮೂಡುಬಿದಿರೆ: ಸುವರ್ಣ ಸಂಭ್ರಮದಲ್ಲಿರುವ ಕಾಂತಾವರ ಕನ್ನಡ ಸಂಘದ ಮುದ್ದಣ ಸಾಹಿತ್ಯೋತ್ಸವ, 2026 ಪ್ರಶಸ್ತಿ ಪ್ರದಾನ, ವಾರ್ಷಿಕ ದತ್ತಿ ಪ್ರಶಸ್ತಿಗಳ ಪ್ರದಾನ, ನಾಡಿಗೆ ನಮಸ್ಕಾರ ಮಾಲಿಕೆಯ 9 ಕೃತಿಗಳ ಲೋಕಾರ್ಪಣೆ ಕನ್ನಡ ಭವನದಲ್ಲಿ ಭಾನುವಾರ ಬೆಳಗ್ಗೆ 10 ರಿಂದ ನಡೆಯಲಿದೆ. ಮುದ್ದಣ ಕಾವ್ಯ ಪ್ರಶಸ್ತಿ ಪ್ರದಾನ: ಹಿರಿಯ ಲೇಖಕ, ಕವಿ ಪ್ರೊ. ಡಿ.ಎ. ಶಂಕರ್ ಮೈಸೂರು ಅವರ ಇವರುವೆಯಂತೆ ನನ್ನೊಡನೆ (2025ರ) ಹಸ್ತಪ್ರತಿಗೆ ಮುದ್ದಣ ಕಾವ್ಯ ಪ್ರಶಸ್ತಿ ಪ್ರದಾನ ಮಾಡಲಾಗುವುದು. ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರುಅಧ್ಯಕ್ಷತೆ ವಹಿಸಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕವಿ, ಪ್ರಾಧ್ಯಾಪಕ ಪ್ರೊ. ಟಿ. ಯಲ್ಲಪ್ಪ, ಬೆಂಗಳೂರು ಸಮಾರಂಭವನ್ನು ಉದ್ಘಾಟಿಸಲಿದ್ಧಾರೆ.

ಕನ್ನಡ ವಿ.ವಿ. ಹಂಪಿ ವಿಶ್ರಾಂತ ಪ್ರಾಧ್ಯಾಪಕ ಡಾ. ಎ. ಸುಬ್ಬಣ್ಣ ರೈ ನಾಡಿಗೆ ನಮಸ್ಕಾರ ಗ್ರಂಥಮಾಲೆಯ ನೂತನ ಕೃತಿಗಳ ಬಿಡುಗಡೆ ಮಾಡಲಿದ್ದಾರೆ. ಗ್ರಂಥಮಾಲೆಯ ಪ್ರಧಾನ ಸಂಪಾದಕ ಡಾ. ಬಿ. ಜನಾರ್ದನ ಭಟ್, ಸಂಘದ ಸುವರ್ಣ ಸಂಭ್ರಮ ಸಮಿತಿಯ ಗೌರವಾಧ್ಯಕ್ಷ ಸಂಸ್ಕೃತಿ ವಿಶ್ವಪ್ರತಿಷ್ಠಾನ ಉಡುಪಿಯ ಯು. ವಿಶ್ವನಾಥ ಶೆಣೈ, ಗೌರವ ಕಾರ್ಯಾಧ್ಯಕ್ಷ ಕೆ. ಶ್ರೀಪತಿ ಭಟ್, ಗೌರವವ ಕಾರ್ಯದರ್ಶಿ ಕೆ. ಕಮಲಾಕ್ಷ ಕಾಮತ್ ಅವರ ಗೌರವ ಉಪಸ್ಥಿತಿಯಲ್ಲಿ ಸಮಾರಂಭ ನಡೆಯಲಿದೆ. ವಾರ್ಷಿಕ ದತ್ತಿ ಪ್ರಶಸ್ತಿ ಪ್ರದಾನ: ಕಾಂತಾವರ ಕನ್ನಡ ಸಂಘದಲ್ಲಿ ಗಮಕಿ ಸತೀಶ್ ಕುಮಾರ್ ಕೆಮ್ಮಣ್ಣು ಅವರು ಸ್ಥಾಪಿಸಿರುವ ದತ್ತಿನಿಧಿಯ ‘ಗಮಕಕಲಾ ಪ್ರವಚನ’ ಪ್ರಶಸ್ತಿಯನ್ನು ಮುಳಿಯ ಶಂಕರ ಭಟ್ಟ, ಗಮಕಿ ಶ್ರೀಮತಿ ಯಾಮಿನಿ ಭಟ್ ಉಡುಪಿ ಅವರ ದತ್ತಿನಿಧಿಯ ‘ಗಮಕಕಲಾ ವಾಚನ’ ಪ್ರಶಸ್ತಿಯನ್ನು ಪದ್ಯಾಣ ಗಣಪತಿ ಭಟ್, ಕಾರ್ಕಳದ ಶಿಲ್ಪಿ ದಿ . ಕೆ.ಶಾಮರಾಯ ಆಚಾರ್ಯ ಅವರ ದತ್ತಿನಿಧಿಯ ಶಿಲ್ಪಕಲಾ ಪ್ರಶಸ್ತಿಯನ್ನು ಪಿ. ದಾಮೋದರ ಆಚಾರ್ಯ ಕಾರ್ಕಳ , ಕನ್ನಡ ಸಂಘದ ಸುವರ್ಣ ಸಂಭ್ರಮದ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರದ ಜೀವಮಾನದ ಸಾಧನೆಗಾಗಿ ಕೊಡಮಾಡುತ್ತಿರುವ ವಾರ್ಷಿಕ ಗೌರವ ಪ್ರಶಸ್ತಿಯನ್ನು ಶ್ರೀಮತಿ ಶಕುಂತಳಾ ಭಟ್ ಹಳೆಯಂಗಡಿ ಅವರಿಗೆ ಪ್ರದಾನ ಮಾಡಲಾಗುತ್ತದೆ. ಎಂದು ಸಂಘದ ಅಧ್ಯಕ್ಷ ಡಾ. ನಾ. ಮೊಗಸಾಲೆ ತಿಳಿಸಿದ್ದಾರೆ.