ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನಮ್ ನಿತ್ಯಾನಂದ ನಗರ ಶ್ರೀ ಭಗವಾನ್ ನಿತ್ಯಾನಂದ ದೇವಸ್ಥಾನದಲ್ಲಿ 64ನೇ ವರ್ಷದ ಶ್ರೀ ರಾಮ ತಾರಕ ಮಂತ್ರ ಸಪ್ತಾಹ, ಪ್ರತಿಷ್ಠಾ ಜಾತ್ರಾ ಮಹೋತ್ಸವ ಮತ್ತು ಮಹಾ ಬ್ರಹ್ಮರಥೋತ್ಸವ ಏ.10ರಿಂದ 17ರ ವರೆಗೆ ಕ್ಷೇತ್ರದ ನಿರ್ಮಾತೃ ಜಗದ್ಗುರು ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಸ್ಮರಣೆಯೊಂದಿಗೆ ನಡೆಯಲಿದೆ ಎಂದು ದೇವರಗುಡ್ಡೆ ಶ್ರೀ ಗುರುದೇವ ಪೀಠಾಧೀಶ, ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಹೇಳಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿವರ ನೀಡಿದರು. ದಕ್ಷಿಣದ ಅಯೋಧ್ಯೆ ಎಂದೆನಿಸಿದ ಶ್ರೀರಾಮ ಕ್ಷೇತ್ರದಲ್ಲಿ 64 ವರ್ಷಗಳ ಹಿಂದೆ ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರು ಶ್ರೀ ರಾಮ ಜಯ ರಾಮ ಜಯ ಜಯ ರಾಮ ಎಂಬ ತಾರಕ ಮಂತ್ರ 7 ದಿನಗಳ ಭಜನಾ ಸಪ್ತಾಹವನ್ನು ಪ್ರಾರಂಭಿಸಿದರು. ನಂತರ ಭವ್ಯ ಶ್ರೀ ರಾಮ ಮಂದಿರ ನಿರ್ಮಾಣ ಮಾಡಿ ಪ್ರತಿ ವರ್ಷ ಪ್ರತಿಷ್ಠಾ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಈ ವರ್ಷ ಏ.10ರಂದು ಶ್ರೀ ರಾಮ ನಾಮ ಸಪ್ತಾಹದ ಅಖಂಡ ನಂದಾದೀಪ ಬೆಳಗಿಸುವ ಮೂಲಕ ರಾಮತಾರಕ ಮಂತ್ರೋಚ್ಛಾರಣೆ ಪ್ರಾರಂಭವಾಗಲಿದೆ. ಅಂದು ಬೆಳಗ್ಗೆ ವಿವಿಧ ವೈದಿಕ ಕಾರ್ಯಕ್ರಮಗಳು, ಸಂಜೆ ಬಲಿ ಉತ್ಸವ ನಡೆಯಲಿದೆ.
ಏ.11ರಂದು ಮಧ್ಯಾಹ್ನ ನಿತ್ಯಾನಂದ ಸ್ವಾಮಿ, ಬ್ರಹ್ಮಶ್ರೀ ನಾರಾಯಣ ಗುರು, ಶಿರ್ಡಿ ಸಾಯಿ ಬಾಬಾ ಗುರುಗಳಿಗೆ ಪೂಜೆ, ಸಂಜೆ ಶ್ರೀ ಗುರುದೇವರ ಉತ್ಸವ ಮೂರ್ತಿಗಳ ಬಲಿ ಉತ್ಸವ, ಏ.12ರಂದು ಬೆಳಗ್ಗೆ ನವಗ್ರಹ ಶಾಂತಿ ಹೋಮ, ನವ ಗ್ರಹಗಳಿಗೆ ವಿಶೇಷ ಪೂಜೆ, ಸಂಜೆ ಶ್ರೀ ರಾಮ ದೇವರ ರಜತ ಪಾಲಕಿ ಉತ್ಸವ, ಏ.13ರಂದು ಬೆಳಗ್ಗೆ ಮಹಾ ಮೃತ್ಯುಂಜಯ ಹೋಮ, ಅನ್ನಪೂರ್ಣೇಶ್ವರಿ ದೇವಿಗೆ ಮಹಾಪೂಜೆ, ನಾಗದೇವರಿಗೆ ಪಂಚಾಮೃತ ಅಭಿಷೇಕ, ರಾತ್ರಿ ಶ್ರೀ ಅನ್ನಪೂರ್ಣೇಶ್ವರಿ ದೇವಿಯ ಬಲಿ ಉತ್ಸವ, ಪುಷ್ಪ ರಥೋತ್ಸವ ನಡೆಯಲಿದೆ.ಏ.14ರಂದು ಬೆಳಗ್ಗೆ ನವ ದುರ್ಗಾ ಹೋಮ, ನವ ದುರ್ಗೆಯರಿಗೆ ವಿಶೇಷ ಪೂಜೆ, ಸಂಜೆ ಶ್ರೀ ದುರ್ಗಾಪರಮೇಶ್ವರಿ ದೇವಿ ಮೂರ್ತಿ ಬಲಿ ಉತ್ಸವ, ಚಂದ್ರಮಂಡಲ ರಥೋತ್ಸವ, ಏ.15 ರಂದು ಶ್ರೀ ಗೋಪಾಲಕೃಷ್ಣ ದೇವರಿಗೆ ವಿಶೇಷ ಪೂಜೆ, ರಾತ್ರಿ ಬಲಿ ಉತ್ಸವ, ಬೆಳ್ಳಿ ರಥೋತ್ಸವ, ಏ.16ರಂದು ದತ್ತಯಾಗ, ಆಂಜನೇಯ ದೇವರಿಗೆ ಮತ್ತು ದತ್ತಾತ್ರೇಯ ಗುರುಗಳಿಗೆ ವಿಶೇಷ ಪೂಜೆ, ಸಂಜೆ ವಿವಿಧ ಪ್ರಧಾನ ಹೋಮಗಳು ರಾತ್ರಿ ಬಲಿ ಉತ್ಸವ ಶ್ರೀ ಹನುಮಾನ್ ರಥೋತ್ಸವ, ಕಟ್ಟೆ ಪೂಜೆ, ಕೆರೆ ದೀಪೋತ್ಸವ, ಏ.17ರಂದು ವಿಷ್ಣು ಸಹಸ್ರನಾಮ ಹೋಮ, ಶ್ರೀ ರಾಮ ತಾರಕ ಮಂತ್ರ ಯಜ್ಞ ಮಂಗಳಂ, ಹಗಲು ಉತ್ಸವ, ಸಂಜೆ ಬಲಿ ಉತ್ಸವ, ಭೂತ ಬಲಿ ಶ್ರೀ ದೇವರ ಪಾಲಕಿ ಬಲಿ, ಕ್ಷೇತ್ರದ ರಕ್ತೇಶ್ವರಿ ಮತ್ತು ಗುಳಿಗ ದೈವಗಳ ನೇಮೋತ್ಸವ, ಮಹಾ ಬ್ರಹ್ಮ ರಥೋತ್ಸವ, ಅವೆಭೃತ ಓಕುಳಿ, ಏ.19ರಂದು ದೇವರ ಗುಡ್ಡೆ ಆದಿ ಪಜಿರಡ್ಕ ಶ್ರೀ ದೇವಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ, ಸನ್ಯಾಸಿ ಪಂಜುರ್ಲಿ ಮತ್ತು ಕಲ್ಲುರ್ಟಿ, ಪಂಜುರ್ಲಿ ದೈವದ ನೇಮೋತ್ಸವ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶ್ರೀ ರಾಮ ಕ್ಷೇತ್ರ ಸಮಿತಿ ಸಂಚಾಲಕ ಜಯಂತ ಕೋಟ್ಯಾನ್, ಧರ್ಮಸ್ಥಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶ್ರೀನಿವಾಸ ರಾವ್ ಧರ್ಮಸ್ಥಳ, ಟ್ರಸ್ಟಿ ತುಕಾರಾಮ ಸಾಲಿಯಾನ್, ನಿವೃತ್ತ ಎಸ್.ಪಿ. ಪೀತಾಂಬರ ಹೇರಾಜೆ, ಯಕ್ಷಗಾನ ಅಕಾಡೆಮಿ ಸದಸ್ಯ ರಾಘವ ಎಚ್. ಗೇರುಕಟ್ಟೆ, ಪ್ರಶಾಂತ್ ಪಾರೆಂಕಿ, ರಾಘವ ಕಲ್ಮಂಜ, ಪ್ರೀತಮ್ ಡಿ., ಭಾಸ್ಕರ ಧರ್ಮಸ್ಥಳ, ಅಣ್ಣಿ ಪೂಜಾರಿ ಉಜಿರೆ, ರವೀಂದ್ರ ಪೂಜಾರಿ, ಪುರುಷೋತ್ತಮ ಧರ್ಮಸ್ಥಳ, ಸುದರ್ಶನ್ ಕನ್ಯಾಡಿ, ಅನಿಲ್ ಕಲ್ಮಂಜ, ಪ್ರವೀಣ್ ಕುಮಾರ್, ಸುಂದರ ಗೌಡ ಪುಡಿಕೆತ್ತು, ತೇಜೋಮಯ ಮಂಗಳೂರು ಹಾಜರಿದ್ದರು.