ಕನ್ಯಾಕೋಳುರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರಿ ಬಿಜೆಪಿ ತೆಕ್ಕೆಗೆ

| Published : Feb 22 2025, 12:45 AM IST

ಸಾರಾಂಶ

Kanyakolur Village Panchayat President Giri is under BJP support

-ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಹಾದೇವಿ ಆಯ್ಕೆ

---

ಕನ್ನಡಪ್ರಭ ವಾರ್ತೆ ಶಹಾಪುರ

ತೀವ್ರ ಕುತೂಹಲ ಮೂಡಿಸಿದ್ದ ತಾಲೂಕಿನ ಕನ್ಯಾಕೋಳುರು ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಹಾದೇವಿ ಭೀಮರಾಯ ಆಯ್ಕೆಯಾದರು.

ಕನ್ಯಾಕೋಳುರು ಗ್ರಾಮ ಪಂಚಾಯಿತಿಯಲ್ಲಿ 19 ಸ್ಥಾನಗಳ ಸಂಖ್ಯಾ ಬಲ ಹೊಂದಿದ್ದು, 19 ಜನ ಸದಸ್ಯರು ಭಾಗವಹಿಸಿದ್ದರು. ಕಾಂಗ್ರೆಸ್ ಬೆಂಬಲಿತ ಸದಸ್ಯರು 10 ಜನ ಮತ್ತು ಬಿಜೆಪಿ ಬೆಂಬಲಿತ ಸದಸ್ಯರು 9 ಜನ ಇದ್ದರು. ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗಿ ಚುನಾವಣಾಧಿಕಾರಿಯಾದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶರಭೈ ಅವರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಹಾದೇವಿ ಗಂಡ ಭೀಮರಾಯ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುನೀತಾ ಗಂಡ ಲಿಂಬ್ಯಾ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ಅಧ್ಯಕ್ಷೆ ಸ್ಥಾನಕ್ಕೆ ಅಭ್ಯರ್ಥಿ ಮಹಾದೇವಿ 13 ಮತಗಳನ್ನು ಪಡೆಯುವ ಮೂಲಕ ಆಯ್ಕೆಯಾದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಇನ್ನೊರ್ವ ಅಭ್ಯರ್ಥಿ ಸುನೀತಾ 5 ಮತಗಳನ್ನು ಪಡೆದರು. 1 ಮತ ಅಸಿಂಧು ಆಗಿದೆ. 13 ಮತಗಳನ್ನು ಪಡೆದ ಮಹಾದೇವಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಚುನಾವಣೆ ಅಧಿಕಾರಿ ಬಸವರಾಜ ಶರಭೈ ಘೋಷಣೆ ಮಾಡಿದರು.

ಈ ಗ್ರಾಮ ಪಂಚಾಯಿತಿಯಲ್ಲಿ 10 ಸದಸ್ಯರ ಬಲವುಳ್ಳ ಕಾಂಗ್ರೆಸ್ ಗೆಲುವು ನಮ್ಮದೇ ಎನ್ನುವ ಹುಮ್ಮಸಿನಲ್ಲಿ ಪಂಚಾಯಿತಿ ಕಚೇರಿ ಹೊರಗಡೆ ಪಟಾಕಿ ಗುಲಾಲ್ ಹಾರದೊಂದಿಗೆ ಸಜ್ಜಾಗಿ ಕುಳಿತಿದ್ದರು. ಸ್ವ-ಪಕ್ಷಿಯವರ ತಿಕ್ಕಾಟದ ಬೆಹಗುದಿಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಮತ ಹಾಕುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಮುಖಂಡರು ಭಾಗವಹಿಸಿದ್ದರು.

-----

21ವೈಡಿಆರ್6: ಶಹಾಪುರ ತಾಲೂಕಿನ ಕನ್ಯಾಕೋಳೂರು ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಮಹಾದೇವಿ ಅವರು ಮಂಗಳವಾರ ಆಯ್ಕೆಯಾದರು.