ಮಧುರ ಚೆನ್ನರು ನಡೆದ ದಾರಿಯಲ್ಲಿ ಸಾಗಿದ ಕಾಪಸೆ

| Published : Mar 30 2024, 12:45 AM IST

ಸಾರಾಂಶ

ಜೀವನ ಹೇಗೆ ನಡೆಸಬೇಕು ಎಂಬುದಕ್ಕೆ ನಿದರ್ಶನವಾಗುವಂತೆ ದೇವರು ಕಾಪಸೆ ಅವರನ್ನು ಇಟ್ಟಿದ್ದರು. ಹೊರಗಿನಿಂದ ಅಪಾರ ಪಾಂಡಿತ್ಯ, ಒಳಗಿನಿಂದ ಅಪಾರ ಜ್ಞಾನ ಪಡೆದವರಾಗಿದ್ದರು.

ಧಾರವಾಡ:

ಜೀವನ ಹೇಗೆ ನಡೆಸಬೇಕು ಎಂಬುದಕ್ಕೆ ನಿದರ್ಶನವಾಗುವಂತೆ ದೇವರು ಕಾಪಸೆ ಅವರನ್ನು ಇಟ್ಟಿದ್ದರು. ಹೊರಗಿನಿಂದ ಅಪಾರ ಪಾಂಡಿತ್ಯ, ಒಳಗಿನಿಂದ ಅಪಾರ ಜ್ಞಾನ ಪಡೆದವರಾಗಿದ್ದರು. ಸಿದ್ಧವಂತರು, ತತ್ಪರರಾಗಿದ್ದರು, ಜ್ಞಾನವಂತಾರಾಗಿದ್ದರು ಎಂದು ಕರ್ನಾಟಕ ಸರ್ಕಾರದ ನಿವೃತ್ತ ಕಾರ್ಯದರ್ಶಿ ಜಿ.ಸಿ. ತಲ್ಲೂರ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಈಚೆಗೆ ನಿಧನರಾದ ಹಿರಿಯ ಸಾಹಿತಿ ಡಾ. ಗುರುಲಿಂಗ ಕಾಪಸೆ ಅವರಿಗೆ ಹಮ್ಮಿಕೊಂಡಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲ ದೈವಿ ಸಂಪತ್ತು, ಗುಣ ಹೊಂದಿದವರು. ಜ್ಞಾನಿಗಳು, ಅನುಭಾವಿಗಳು, ಪಂಡಿತರಾಗಿ ನಮ್ಮ ನಡುವೆ ಇದ್ದರು ಎಂಬುದೇ ನಮ್ಮ ಸುದೈವ ಎಂದರು.

ಅರಿವು ಅರಳಿ ಬಿಟ್ಟಿತ್ತು, ಸರಳ ಸಜ್ಜನಿಕೆಯ ಮೂರ್ತಿಯಾಗಿದ್ದ ಇವರು ಶಿಷ್ಯರಿಗೆ ಅಮೃತವನ್ನು ಉಣಿಸಿದ ಗುರುವಾಗಿದ್ದರು. ಅವರಿಗೆ ಅವರೇ ಪ್ರತಿಮೆಯಾಗಿದ್ದರು. ಜ್ಞಾನ ತೀರ್ಥ ಚಿಲುಮೆಯಾಗಿದ್ದರು ಎಂದು ನರಸಿಂಹ ಪರಾಂಜಪೆ ಸ್ಮರಿಸಿದರು.

ಶಾಮಸುಂದರ ಬಿದರಕುಂದಿ ಮಾತನಾಡಿ, ಕಾಪಸೆಯವರ ಜೀವನ ಸಂಕಲ್ಪದ ಜೀವನ. ಮಧುರ ಚೆನ್ನರು ಅವರ ಗುರುಗಳು. ನಲವತ್ತು ವರ್ಷಗಳ ಕಾಲ ಧಾರವಾಡದಲ್ಲಿ ನಮ್ಮ ನಡುವೆ ಇದ್ದುಕೊಂಡು ಪಾಂಡಿತ್ಯದ ಆಗರವಾಗಿದ್ದರು. ಅವರ ಮಾರ್ಗದರ್ಶನದಲ್ಲಿ ಪಿಎಚ್‌ಡಿ ಮಾಡಿದೆ. ಅವರ ಮಾರ್ಗ ಅಲೌಕಿಕ ಮಾರ್ಗವಾಗಿತ್ತು. ಕನ್ನಡ ಅಧ್ಯಯನಕ್ಕೆ ಬಹುದೊಡ್ಡ ಕೊಡುಗೆ ನೀಡಿದರು. ವಿದ್ಯಾರ್ಥಿಗಳಿಗೆ ಹೇಗೆ ಪಾಠ ಮಾಡಬೇಕುಂಬುದರ ಬಗ್ಗೆ ಪ್ರಬಂಧಗಳನ್ನು ಬರೆದರು. ಮಧುರ ಚೆನ್ನರು ಇಟ್ಟ ಹೆಜ್ಜೆಯಲ್ಲಿಯೇ ಕಾಪಸೆ ನಡೆದರು ಎಂದರು.

ಮಕ್ಕಳ ಕವಿ ನಿಂಗಣ್ಣ ಕುಂಟಿ, ಎಸ್.ಜಿ. ಪಾಟೀಲ, ಸಿ.ಯು. ಬೆಳ್ಳಕ್ಕಿ, ಮೋಹನ ಲಿಂಬಿಕಾಯಿ, ಸಿ. ಚನ್ನಬಸಪ್ಪ, ವೆಂಕಟೇಶ ಮಾಚಕನೂರ, ಪ್ರೊ. ಮಾಲತಿ ಪಟ್ಟಣಶೆಟ್ಟಿ, ಶ್ರೀನಿವಾಸ ವಾಡಪ್ಪಿ, ಡಾ. ಶಾಮಸುಂದರ ಕೋಚಿ ನುಡಿನಮನ ಸಲ್ಲಿಸಿದರು. ಕಾಪಸೆಯವರ ದೇಹವನ್ನು ದಾನವಾಗಿ ಸ್ವೀಕರಿಸಿದ ವೈದ್ಯ ಡಾ. ಮಹಾಂತೇಶ ರಾಮಣ್ಣವರ ಕಾಪಸೆ ಅವರಿಗೆ ನುಡಿನಮನ ಸಲ್ಲಿಸಿ, ದೇಹದಾನ ಕುರಿತು ಜಾಗೃತಿ ಮೂಡಿಸಿದರು. ಚಂದ್ರಕಾಂತ ಬೆಲ್ಲದ, ಬಸವಪ್ರಭು ಹೊಸಕೇರಿ, ಶಂಕರ ಹಲಗತ್ತಿ, ಶಂಕರ ಕುಂಬಿ, ಡಾ. ಶೈಲಜಾ ಅಮರಶೆಟ್ಟಿ, ಡಾ. ಜಿನದತ್ತ ಹಡಗಲಿ. ಡಾ. ಮಹೇಶ ಹೊರಕೇರಿ, ಡಾ. ಧನವಂತ ಹಾಜವಗೋಳ, ಶಿವಾನಂದ ಭಾವಿಕಟ್ಟಿ, ಕೆ.ಎಚ್. ನಾಯಕ, ಅರವಿಂದ ಯಾಳಗಿ, ಬಿ.ಕೆ. ಹೊಂಗಲ, ಪ್ರಿಯದರ್ಶ ಕಣವಿ ಇದ್ದರು.