ಸಾರಾಂಶ
ಕನ್ನಡಪ್ರಭ ವಾರ್ತೆ ಕಾಪುಕಾಪು ಲೈಟ್ ಹೌಸ್ ಬೀಚ್‌ನಲ್ಲಿ ಕೇಂದ್ರ ಸರ್ಕಾರ, ಕೇಂದ್ರ ಬಂದರು, ಹಡಗು ಮತ್ತು ಜಲ ಸಾರಿಗೆ ಹಾಗೂ ದೀಪಸ್ತಂಭಗಳ ನಿರ್ದೇಶನಾಲಯದ ವತಿಯಿಂದ 1.40 ಕೋಟಿ ರು. ವೆಚ್ಚದಲ್ಲಿ ಪ್ರವಾಸೋದ್ಯಮ ಸೌಲಭ್ಯಗಳನ್ನು ಕೈಗೊಳ್ಳಲಾಗಿದೆ. ಕಾಪು ಸೇರಿದಂತೆ ದೇಶದ ಇಂತಹ ಅಭಿವೃದ್ಧಿಪಡಿಸಲಾದ 75 ದೀಪಸ್ತಂಭಗಳನ್ನು ಏಕಕಾಲದಲ್ಲಿ ತಮಿಳುನಾಡಿನ ಟ್ಯುಟಿಕೋರಿನ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ಉದ್ಘಾಟಿಸಿದರು.ಈ ಕಾರ್ಯಕ್ರಮದ ನೇರಪ್ರಸಾರವನ್ನು ಮಂಗಳವಾರ ಉಡುಪಿ ಜಿಲ್ಲೆಯ ಕಾಪು ದೀಪಸ್ತಂಭದ ಪರಿಸರದಲ್ಲಿ ಆಯೋಜಿಸಲಾಗಿದ್ದು, ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಭಾಗವಹಿಸಿದ್ದರು.ಈ ಕಾಮಗಾರಿಗಳನ್ನು ಶಿಲಾನ್ಯಾಸ ಮಾಡಿದ ಮೋದಿಯವರೇ ಉದ್ಘಾಟಿಸುತ್ತಿರುವುದು ಅವರ ಹೆಗ್ಗಳಿಕೆ. ಹಿಂದಿನ ಸರ್ಕಾರಗಳಲ್ಲಿ ಈ ರೀತಿ ಆಗುತ್ತಿರಲಿಲ್ಲ. ಭಾರತದ ಅಭಿವೃದ್ಧಿಯನ್ನು ಈ ವೇಗಕ್ಕೆ ತೆಗೆದುಕೊಂಡು ಹೋದ ಕೀರ್ತಿ ಪ್ರಧಾನಿ ಮೋದಿಯವರಿಗೆ ಸಲ್ಲುತ್ತದೆ ಎಂದು ಸಂಸದೆ ಶೋಭಾ ಹೇಳಿದರು.ದೇಶಾದ್ಯಂತ ಕಾಪು ಸೇರಿ 75 ದೀಪಸ್ತಂಭಗಳನ್ನು ಪುನರ್ಜೀವನ ಮಾಡಿದ್ದಾರೆ. ಇದು ವಿಫುಲ ಪ್ರವಾಸೋದ್ಯಮಕ್ಕೆ ಅವಕಾಶವಾಗಲಿದೆ. ಕರಾವಳಿ ಭಾಗದ ಅಭಿವೃದ್ಧಿ ಕಾರ್ಯಗಳ ಕುರಿತು ದೇಶದ ಪಶ್ಚಿಮ ಮತ್ತು ಪೂರ್ವ ಕರಾವಳಿಯ ಎಲ್ಲಾ ರಾಜ್ಯಗಳ ಸಂಸದರು ಮತ್ತು ಶಾಸಕರ ಸಭೆಯನ್ನು ನಡೆಸಿ, ಈ ಸಭೆಯಲ್ಲಿ ನಮ್ಮ ಬಂದರುಗಳ ಅಭಿವೃದ್ಧಿಯ ಸಲುವಾಗಿ ಬೇಡಿಕೆ ಇಟ್ಟಿದ್ದೆವು. ನಮ್ಮ ದೀಪಸ್ತಂಭಗಳ ಅಭಿವೃದ್ಧಿ, ಬ್ಲೂ ಫ್ಲಾಗ್ ಬೀಚ್‌ಗೆ ಬೇಡಿಕೆ ಇಟ್ಟಿದ್ದೆವು. ಆದೀಗ ಒಂದೊಂದೇ ಈಡೇರುತ್ತಿದೆ. ಇದರಿಂದ ವಿದೇಶಿಯರು ಬಂದು ಪ್ರವಾಸೋದ್ಯಮಕ್ಕೆ ಅನುಕೂಲವಾಗುತ್ತದೆ ಎಂದರು.ಹೆಜಮಾಡಿಯಲ್ಲಿ ಹೊಸದಾಗಿ ಬಂದರು ನಿರ್ಮಾಣಕ್ಕೆ 180 ಕೋಟಿ ರು. ಅನುದಾನ ನೀಡಿದ್ದೇವೆ. ಹಂಗಾರಕಟ್ಟೆ ಬಂದರಿನಲ್ಲಿ ಕಳೆದ ಬಾರಿ ಹೂಳೆತ್ತಲಾಗಿದ್ದು, ಬಂದರು ಅಭಿವೃದ್ಧಿಗೆ 70 ಕೋಟಿ ರು. ಹಣ ಇರಿಸಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಎಡಿಸಿ ಮಮತಾ ದೇವಿ, ಕೇಂದ್ರ ಬಂದರು, ಹಡಗು ಮತ್ತು ಜಲ ಸಾರಿಗೆ ಇಲಾಖೆಯ ಉಪನಿರ್ದೇಶಕ ಪ್ರಸಾದ್ ನಿಮಾರೆ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.