ಕರಡಿ ಸಂಗಣ್ಣನನ್ನು ಗುಜರಿ ಲೀಡರ್ ಮಾಡ್ಯಾರ

| Published : Mar 17 2024, 01:46 AM IST

ಸಾರಾಂಶ

ಸಂಗಣ್ಣ ಕರಡಿಯನ್ನು ಒಬ್ಬ ಗುಜರಿ ಲೀಡರ್ ಮಾಡ್ಯಾರ, ಇದಕ್ಕಿಂತ ನಾನೇನು ಹೇಳುವುದಿಲ್ಲ.

- ಕೊನೆಗೂ ಸಿಡಿದೆದ್ದ ಸಂಸದ ಕರಡಿ ಸಂಗಣ್ಣ

- ನನ್ನ ಮೂರು ಪ್ರಶ್ನೆಗಳಿಗೆ ನಾಯಕರು ಉತ್ತರಿಸಬೇಕಾಗಿದೆ

- ಈಗಲೇ ನಾನು ಏನು ಹೇಳುವುದಿಲ್ಲ

- ಹೈಕಮಾಂಡ್‌ಗೆ ಮೂರು ಪ್ರಶ್ನೆ ಹಾಕಿದ ಸಂಗಣ್ಣ ಕನ್ನಡಪ್ರಭ ವಾರ್ತೆ ಕೊಪ್ಪಳ

ಸಂಗಣ್ಣ ಕರಡಿಯನ್ನು ಒಬ್ಬ ಗುಜರಿ ಲೀಡರ್ ಮಾಡ್ಯಾರ, ಇದಕ್ಕಿಂತ ನಾನೇನು ಹೇಳುವುದಿಲ್ಲ...

ಟಿಕೆಟ್‌ ಕೈ ತಪ್ಪಿದ್ದರಿಂದ ವ್ಯಘ್ರರಾಗಿರುವ ಸಂಸದ ಸಂಗಣ್ಣ ಕರಡಿ ಅವರ ಆಕ್ರೋಶದ ನುಡಿ ಇದು.

ಗಿಣಿಗೇರಿಯಲ್ಲಿ ಮೇಲ್ಸೇತುವೆ ಉದ್ಘಾಟನೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಭಾವುಕರಾಗಿಯೇ ಮಾತನಾಡಿದ ಅವರು, ನಾನು ಪಕ್ಷದಲ್ಲಿಯೇ ಮುಂದುವರಿಯುತ್ತೇನೆ ಅಥವಾ ಬೇರೆ ಪಕ್ಷಕ್ಕೆ ಹೋಗುತ್ತೇನೆ ಎನ್ನುವುದಕ್ಕೆ ಈಗಲೇ ಉತ್ತರ ನೀಡುವುದಿಲ್ಲ. ಅದಕ್ಕಿಂತ ಮೊದಲು ನನಗೆ ಪಕ್ಷದ ರಾಜ್ಯ ನಾಯಕರು ಮೂರು ಪ್ರಶ್ನೆಗಳಿಗೆ ಉತ್ತರ ನೀಡಬೇಕು. ಅವರು ಉತ್ತರ ನೀಡಿದ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.

ಏನೇನು ಪ್ರಶ್ನೆಗಳು?

1. ಟಿಕೆಟ್ ನಿರಾಕರಣೆ ಬಳಿಕವೂ ಇದುವರೆಗೂ ರಾಜ್ಯ ನಾಯಕರು ನನಗೆ ಯಾಕೆ ಕರೆ ಮಾಡಿಲ್ಲ?

2. ನನಗೆ ಟಿಕೆಟ್ ತಪ್ಪಿಸಲು ಕಾರಣವೇನು?

3. ನನಗೆ ಟಿಕೆಟ್ ತಪ್ಪಿಸಲು ಕಾರಣ ಯಾರು?

ಈ ಮೂರು ಪ್ರಶ್ನೆಗಳಿಗೆ ಉತ್ತರ ಬೇಕಾಗಿದೆ. ಇದಕ್ಕೆ ಅವರು ಯಾವ ರೀತಿಯ ಉತ್ತರ ನೀಡುತ್ತಾರೆ ಎನ್ನುವುದರ ಆಧಾರದ ಮೇಲೆ ನಾನು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದರು.

ರಾಜಕೀಯ ನಿವೃತ್ತಿಯಾಗುವುದಿಲ್ಲ. ನಾನು ರಾಜಕೀಯವಾಗಿ ಮಾಡಬೇಕಾದ ಕಾರ್ಯಗಳು ಸಾಕಷ್ಟು ಇವೆ. ಟಿಕೆಟ್ ತಪ್ಪಿದ್ದಕ್ಕೆ ನನಗೆ ನೋವಾಗಿದೆ. ಅದಾದ ಮೇಲೆಯೂ ರಾಜ್ಯ ನಾಯಕರು ನನಗೆ ಕನಿಷ್ಠ ಸೌಜನ್ಯಕ್ಕೂ ಕರೆ ಮಾಡಿ ಮಾತನಾಡಿಲ್ಲ ಎನ್ನುವುದು. ಇನ್ನು ಈಗ ನನಗೆ ರಾಜ್ಯ ನಾಯಕರು ಕರೆ ಮಾಡುತ್ತಿದ್ದಾರೆ. ಆದರೆ, ನಾನು ಕರೆ ಸ್ವೀಕಾರ ಮಾಡಿಲ್ಲ. ನೋವಾಗಿರುವುದರಿಂದ ಕರೆ ಸ್ವೀಕಾರ ಮಾಡುತ್ತಿಲ್ಲ. ನನ್ನ ಬಳಿ ಬಂದಿದ್ದ ವಿರೋಧಪಕ್ಷದ ಮುಖ್ಯಸಚೇತಕ ದೊಡ್ಡನಗೌಡ ಅವರನ್ನು ಈ ಪ್ರಶ್ನೆ ಕೇಳಿದ್ದೇನೆ, ಉತ್ತರ ನೀಡಿಲ್ಲ ಎಂದು ಕಣ್ಣೀರು ಹಾಕಿದರು.

ಎಲ್ಲಿಯೂ ಹೋಗುವುದಿಲ್ಲ, ಆದರೆ, ನನ್ನ ಪ್ರಶ್ನೆಗಳಿಗೆ ಉತ್ತರ ದೊರೆತರೆ ಪಕ್ಷ ಘೋಷಣೆ ಮಾಡಿರುವ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡುತ್ತೇನೆ. ಇನ್ನು ಕಾರ್ಯಕರ್ತರು ಈಗ ಸಿಟ್ಟಾಗಿದ್ದಾರೆ. ಅದೆಲ್ಲವನ್ನು ಸರಿಮಾಡಬೇಕಾಗುತ್ತದೆ ಎಂದರು.

ಪ್ರಧಾನಿ ಹಾಡಿಹೊಗಳಿದ ಸಂಗಣ್ಣ:

ತಮಗೆ ಟಿಕೆಟ್ ತಪ್ಪಿದ ನೋವಿನಲ್ಲಿದ್ದರೂ ಸಂಸದ ಸಂಗಣ್ಣ ಕರಡಿ ಗಿಣಿಗೇರಿಯ ರೈಲ್ವೆ ಮೇಲ್ಸೇತುವೆ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ ಮತ್ತು ಕಾಂಗ್ರೆಸ್‌ನ್ನು ಟೀಕಿಸಿದ್ದಾರೆ.

ದೇಶದಲ್ಲಿ 65 ವರ್ಷ ಆಳ್ವಿಕೆ ನಡೆಸಿದ ಕಾಂಗ್ರೆಸ್ ಸರ್ಕಾರ ಮಾಡಬೇಕಾದ ಅಭಿವೃದ್ಧಿ ಮಾಡಲೇ ಇಲ್ಲ. ಹೀಗಾಗಿ, ಭಾರತವನ್ನು ಹಾವಾಡಿಗರ ದೇಶ ಎಂದು ಕರೆಯುತ್ತಿದ್ದರು. ಆದರೆ, ನರೇಂದ್ರ ಮೋದಿ ಅವರು 10 ವರ್ಷಗಳ ಕಾಲ ಪ್ರಧಾನಮಂತ್ರಿಯಾದ ಮೇಲೆ ಇಡೀ ವಿಶ್ವವೇ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸುತ್ತಿದೆ ಎಂದರು.

ಭಾರತದಲ್ಲಿನ ವಿಮಾನ ನಿಲ್ದಾಣಗಳ ಕುರಿತು ಅಮೇರಿಕದಲ್ಲಿ ಬಣ್ಣಿಸುವಂತೆ ಆಗಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಸೇರಿದಂತೆ ಹತ್ತು ಹಲವರು ಅಭಿವೃದ್ಧಿ ಮಾಡುವ ಮೂಲಕ ಇಡೀ ಜಗತ್ತಿನಲ್ಲಿಯೇ ಭಾರತದ ಗೌರವ ಹೆಚ್ಚಳವಾಗುವಂತೆ ಮಾಡಿದ್ದಾರೆ ಎಂದು ಗುಣಗಾನ ಮಾಡಿದರು.

ಅಷ್ಟೇ ಅಲ್ಲ, ಒಂದೇ ಹೆಜ್ಜೆ ಮುಂದೆ, ವೇದಿಕೆಯ ಮೇಲೆ ಇದ್ದ ಕಾಂಗ್ರೆಸ್ ಮುಖಂಡರನ್ನು ಕೋಟ್ ಮಾಡಿ, ಇದು ರಾಜಕೀಯ ಆದರೂ ನಾನು ಮಾತನಾಡಲೇಬೇಕಾಗುತ್ತದೆ ಎಂದು ಮತ್ತೊಮ್ಮೆ ದೇಶದಲ್ಲಿ ಮೋದಿ ಸರ್ಕಾರ ಬರಬೇಕಾಗುತ್ತದೆ ಎಂದು ಹೇಳಿದರು.

ದೇಶ ಮತ್ತು ಪ್ರಧಾನಿಯನ್ನು ಗುಣಗಾನ ಮಾಡುತ್ತಿದ್ದ ವೇಳೆಯಲ್ಲಿ ಚಪ್ಪಾಳೆ ತಟ್ಟದ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಂಸದ ಸಂಗಣ್ಣ ಕರಡಿ ಜನರನ್ನು ಸಹ ತರಾಟೆಗೆ ತೆಗೆದುಕೊಂಡರು. ಇಂಥದ್ದಕ್ಕೆ ಉತ್ತೇಜನ ನೀಡದ ನೀವು ಮತ್ಯಾವುದಕ್ಕೆ ಉತ್ತೇಜನ ನೀಡುತ್ತೀರಿ ಎಂದು ಸಿಡಿಮಿಡಿಗೊಂಡರಲ್ಲದೆ ಕೇಳಿ ಚಪ್ಪಾಳಿ ತಟ್ಟಿಸಿಕೊಂಡರು. ಅಷ್ಟೇ ಅಲ್ಲ, ಕುಡಿದುಬಂದು ಮಾತನಾಡಿದರೆ ಚಪ್ಪಾಳೆ ತಟ್ಟುತ್ತೀರಾ ಎಂದು ಪ್ರಶ್ನೆ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಸರ್ವಜನಾಂಗದ ಅಭಿವೃದ್ಧಿ ಮಾಡುತ್ತಾರೆ. ದೇಶವನ್ನು ಇಡೀ ಜಗತ್ತಿನಲ್ಲಿಯೇ ಶ್ರೇಷ್ಠ ದೇಶವನ್ನಾಗಿ ಮಾಡುತ್ತಿದ್ದಾರೆ. ಅಂಥವರು ಮತ್ತೆ ಪ್ರಧಾನಿಯಾಗಬೇಕು ಎನ್ನುವ ಮೂಲಕ ತಾವು ಕಾಂಗ್ರೆಸ್ ಪಕ್ಷದತ್ತ ಮುಖವನ್ನು ಸಹ ಮಾಡುವುದಿಲ್ಲ ಎನ್ನುವುದನ್ನು ಪರೋಕ್ಷವಾಗಿ ಹೇಳಿದರು.