ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಮಹೋತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಭಾನುವಾರ ತಡರಾತ್ರಿ ಸಂಪಂಗಿರಾಮ ನಗರದ ಕಲ್ಯಾಣಿನಿಂದ ಶ್ರೀ ಧರ್ಮರಾಯ ಸ್ವಾಮೀ ದೇವಸ್ಥಾನದವರೆಗೆ ಹಸಿ ಕರಗ ಉತ್ಸವ ವಿಜೃಂಭಣೆಯಿಂದ ಜರುಗಿತು.ಕಳೆದ ಒಂದು ವಾರದಿಂದ ಕರಗ ಮಹೋತ್ಸವದ ಅಂಗವಾಗಿ ಧರ್ಮರಾಯ ಸ್ವಾಮೀ ದೇವಸ್ಥಾನ ಸೇರಿದಂತೆ ವಿವಿಧ ಕಡೆ ವಿವಿಧ ಪೂಜೆ ಹಾಗೂ ಧಾರ್ಮಿಕ ಕೈಂಕರ್ಯಗಳು ಶುರುವಾಗಿವೆ.
ಭಾನುವಾರ ಕಬ್ಬನ್‌ಪಾರ್ಕ್ ನಲ್ಲಿ ಕರಗದ ಕುಂಟೆ ಪೂಜೆ ನಡೆಸಲಾಯಿತು. ಬಳಿಕ ಭಾನುವಾರ ತಡರಾತ್ರಿ ನಡೆಯುವ ಹಸಿ ಕರಗ ಉತ್ಸವಕ್ಕೆ ಸಂಬಂಧಿಸಿದಂತೆ ಸಿದ್ಧತೆಯನ್ನು ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ಮಾಡಿಕೊಳ್ಳಲಾಯಿತು.ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ಧರ್ಮರಾಯ ಸ್ವಾಮಿ ದೇವಾಲಯದಲ್ಲಿ ದೊಡ್ಡ ರಥಕ್ಕೆ ಕಳಸ ಇಡುವ ಮೂಲಕ ವಿಧಿ ವಿಧಾನಗಳು ಆರಂಭವಾಯಿತು. ನಂತರ ದೇಗುಲದ ದೇವರ ಮೂರ್ತಿಗಳಿಗೆ ಅಲಂಕಾರ, ಸಾಂಪ್ರದಾಯಿಕ ಪದ್ಧತಿಯಂತೆ ಪೂಜೆ (ಗಾವನ್) ನೆರವೇರಿಸಿ ದೇವಾಲಯದ ಒಂದು ಮೂಲೆಯಲ್ಲಿ ದವನವನ್ನು ಇರಿಸಿ ಕೆಡುಕುಗಳು ಸಂಭವಿಸದಂತೆ ಪ್ರಾರ್ಥನೆ ಮಾಡಲಾಗುತ್ತದೆ. ಇದಾದ ನಂತರ ತಡ ರಾತ್ರಿ 12 ಗಂಟೆ ಸುಮಾರಿಗೆ ಕಬ್ಬನ್ ಉದ್ಯಾನದಲ್ಲಿನ ಸಂಪಂಗಿ ಅಂಗಳ ಶಕ್ತಿ ಪೀಠಕ್ಕೆ ತೆರಳಿದರು.
ಸಂಪಂಗಿ ಅಂಗಳ ಶಕ್ತಿ ಪೀಠದಿಂದ ತಡರಾತ್ರಿ 4 ಗಂಟೆಗೆ ದ್ರೌಪದಮ್ಮನ ಮೂರ್ತಿ ಕಂಕುಳಲ್ಲಿ ಇಟ್ಟುಕೊಂಡ ಮೆರವಣಿಗೆಯು ನೇರವಾಗಿ ಸಾಗಿ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿರುವ ಆದಿಶಕ್ತಿ ದೇವಸ್ಥಾನ ತಲುಪಿತು. ಅಲ್ಲಿಂದ ಪ್ರಮುಖ ರಸ್ತೆಗಳ ಮೂಲಕ ಹಾದು ಧರ್ಮರಾಸ್ವಾಮಿ ದೇವಸ್ಥಾನ ಮೂರ್ತಿ ತರಲಾಯಿತು.ದ್ರೌಪದಮ್ಮ ದೇವಸ್ಥಾನದ ಒಳಾಂಗಣ (ಗರ್ಭಗುಡಿ) ಮತ್ತು ಹೊರಾಂಗಣವನ್ನು ಒಂದು ಗಂಟೆಗೂ ಅಧಿಕ ಕಾಲ ಅಂದರೆ ಸುಮಾರು 10-12 ಸುತ್ತು ಸುತ್ತುವರಿಯಿತು. ಈ ವೇಳೆ ಸಾವಿರಾರು ಭಕ್ತರು ತಾಯಿ ದರ್ಶನ ಪಡೆದರು, ಪ್ರಾರ್ಥನೆ ಸಲ್ಲಿಸಿದರು. ಅಲ್ಲಿಗೆ ''''''''ಹಸೀ ಕರಗ'''''''' ಆಚರಣೆ ಸಂಪನ್ನಗೊಂಡಿತು.ನಾಳೆ ಕರಗ ಉತ್ಸವ:
ಹಸಿ ಕರಗ ಉತ್ಸವ ಮುಕ್ತಾಯಗೊಳ್ಳುತ್ತಿದಂತೆ ದೇವಸ್ಥಾನದಲ್ಲಿ ಸೋಮವಾರ ವಿವಿಧ ಪೂಜಾ ಕಾರ್ಯಗಳು ಮುಂದುವರೆಯಲಿವೆ. ಸೋಮವಾರ ರಾತ್ರಿ ಪೊಂಗಲ್ ಸೇವೆ ನಡೆಯಲಿದೆ. ಏ.23ರ ಮಂಗಳವಾರ ರಾತ್ರಿ ಚೈತ್ರ ಪೂರ್ಣಿಮೆಯಂದು ಕರಗ ಮಹೋತ್ಸವ ನಡೆಯಲಿದೆ.