ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಹೆಸರು ಪ್ರಸ್ತಾಪವಾಗಿದ್ದು, ಅವರು ಸ್ಪರ್ಧಿಸಲು ನಿರಾಕರಿಸಿದ್ದಾರೆ. ಬುಧವಾರ ಪ್ರಕಟಗೊಂಡ ಅಭ್ಯರ್ಥಿಗಳ ಪಟ್ಟಿಯಲ್ಲಿ ಚಿತ್ರದುರ್ಗ ಕ್ಷೇತ್ರ ಇರಲಿಲ್ಲ.
ಹೀಗಾಗಿ, ಗುರುವಾರ ಕಾರಜೋಳ ಮತ್ತಿತರ ನಾಯಕರು ಕ್ಷೇತ್ರದ ಹಾಲಿ ಸಂಸದರಾಗಿರುವ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರನ್ನು ಕರೆದುಕೊಂಡು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ತೆರಳಿದ್ದರು.
ನಾರಾಯಣಸ್ವಾಮಿ ಅವರಿಗೆ ಟಿಕೆಟ್ ಕೊಡಿ ಎಂದು ಕಾರಜೋಳ ಅವರು ಹೇಳುತ್ತಿದ್ದಂತೆಯೇ ನೀವೇ ಅಭ್ಯರ್ಥಿಯಾಗಿ. ಪಕ್ಷಕ್ಕೆ ಅನುಕೂಲವಾಗುತ್ತದೆ ಎಂದು ಯಡಿಯೂರಪ್ಪ ಅವರು ಸಲಹೆ ನೀಡಿದರು.
ಆದರೆ, ಇದನ್ನು ಕಾರಜೋಳ ಅವರು ನಯವಾಗಿಯೇ ತಿರಸ್ಕರಿಸಿದರು ಎನ್ನಲಾಗಿದೆ.ಚಿತ್ರದುರ್ಗ ಕ್ಷೇತ್ರದಿಂದ ನಾರಾಯಣಸ್ವಾಮಿ ಅವರಿಗೆ ನೀಡದಿದ್ದರೆ ಮಾದಿಗ ಸಮುದಾಯದ ಬೇರೊಬ್ಬರಿಗೆ ಟಿಕೆಟ್ ನೀಡಬೇಕು.
ಅದನ್ನು ಬಿಟ್ಟು ಬೇರೊಂದು ಸಮುದಾಯಕ್ಕೆ ಮಣೆ ಹಾಕಿದಲ್ಲಿ ಸುತ್ತಲಿನ ನಾಲ್ಕೈದು ಲೋಕಸಭಾ ಕ್ಷೇತ್ರಗಳಲ್ಲಿ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ ಎಂದು ಕಾರಜೋಳ ಅವರು ಎಚ್ಚರಿಸಿದರು ಎಂದು ತಿಳಿದು ಬಂದಿದೆ.
ಮಾದಾರ ಚನ್ನಯ್ಯ ಸ್ವಾಮೀಜಿ ಅವರನ್ನು ರಾಜಕಾರಣಕ್ಕೆ ಕರೆತರಲು ಪ್ರಯತ್ನ ನಡೆದಿದ್ದರೂ ಅದು ಇನ್ನೂ ಫಲ ನೀಡಿಲ್ಲ. ಹೀಗಾಗಿ, ನಾರಾಯಣಸ್ವಾಮಿ ಅವರಿಗೇ ನೀಡಿ ಎಂದರು ಎನ್ನಲಾಗಿದೆ.