ಸಾರಾಂಶ
ಮಹಿಳೆಯರಿಂದ ಕಾಲಿ ಕೊಡ ಹಿಡಿದು ಪ್ರತಿಭಟನೆ । ಸರ್ಕಾರಕ್ಕೆ ಧಿಕ್ಕಾರ
ಕನ್ನಡಪ್ರಭ ವಾರ್ತೆ ಹಿರಿಯೂರು:ತಾಲೂಕಿನ ಕರಿಯಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕುಡಿವ ನೀರಿಗೆ ಹಾಹಾಕಾರ ಉಂಟಾಗಿದ್ದು ಕುಡಿವ ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಗ್ರಾಮ ಪಂಚಾಯಿತಿ ಬಳಿ ಖಾಲಿ ಕೊಡ ಹಿಡಿದು ಪ್ರತಿಭಟಿಸಿದ ಮಹಿಳೆಯರು, ಕುಡಿವ ನೀರು ಕೊಡದ ಸರ್ಕಾರ, ಸಮರ್ಪಕ ಕುಡಿಯುವ ನೀರು ಕೊಡದ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಕರಿಯಾಲ ಗ್ರಾಪಂ ವ್ಯಾಪ್ತಿಯ ಕರಿಯಾಲ, ಬೆಣ್ಣೆ ಈರಪ್ಪನಹಟ್ಟಿ, ಓಣಿಹಟ್ಟಿ, ಗಾಯತ್ರಿಪುರ ಸೇರಿದಂತೆ ಇತರೆ ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ನಿತ್ಯವು ಕುಡಿವ ನೀರಿಗಾಗಿ ಖಾಸಗಿ ತೋಟ, ಜಮೀನುಗಳಿಗೆ ಅಲೆದಾಡುವ ಪರಿಸ್ಥಿತಿ ಉದ್ಭವಿಸಿದೆ. ಬಿಲ್ ನೀಡದ್ದಕ್ಕೆ ಟ್ಯಾಂಕರ್ ನೀರು ಪೂರೈಕೆ ನಿಲ್ಲಿಸಿದ್ದು ನೀರಿನ ಭಾರಿ ತೊಂದರೆ ಉಂಟಾಗಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಪಿಡಿಒ, ತಾಪಂ ಇಒ ಹಾಗೂ ಸಚಿವರ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಬಂದ ತಾಲೂಕು ಪಂಚಾಯಿತಿ ಇಒ ಅವರನ್ನು ಮಹಿಳೆಯರು ತರಾಟೆಗೆ ತೆಗೆದುಕೊಂಡು ಕೂಡಲೇ ಗ್ರಾಮದಲ್ಲಿ ಕೊಳವೆ ಬಾವಿ ಕೊರೆಸಿ ಕುಡಿವ ನೀರು ಕೊಡುವಂತೆ ಆಗ್ರಹಿಸಿದರು.ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಈರಣ್ಣ, ಲಕ್ಷ್ಮೀದೇವಿ, ಸುಶೀಲಮ್ಮ, ಭಾಗ್ಯಮ್ಮ, ಮಾರಣ್ಣ, ರಮೇಶ್, ಪ್ರಸನ್ನ ಕುಮಾರ್ ಮುಂತಾದವರು ಹಾಜರಿದ್ದರು.------
ಚಿತ್ರ 1,2: