ಸಮಾಜಕ್ಕೆ ಕಾರಂಜಿಮಠದ ಗುರುಸಿದ್ಧ ಶ್ರೀ ಕೊಡುಗೆ ಅನನ್ಯ: ಪ್ರೊ.ಶ್ರೀಕಾಂತ ಶಾನವಾಡ

| Published : Dec 03 2024, 12:30 AM IST

ಸಾರಾಂಶ

ನಮ್ಮ ನಾಡಿನ ಸಾಂಸ್ಕೃತಿಕ ಕ್ಷೇತ್ರಕ್ಕೆ ಬೆಳಗಾವಿ ಕಾರಂಜಿಮಠದ ಕೊಡುಗೆ ಅನನ್ಯವಾಗಿದ್ದು, ಲಿಂ.ಬಸವಲಿಂಗ ಸ್ವಾಮೀಜಿಯವರ ಸಮರ್ಥ ಉತ್ತರಾಧಿಕಾರಿಯಾಗಿ ಗುರುಸಿದ್ಧ ಸ್ವಾಮೀಜಿ ಅವರು ಸಲ್ಲಿಸಿದ ಸೇವೆ ಅನುಪಮ ಮತ್ತು ಚಿರಸ್ಮರಣೀಯವೆನಿಸಿದೆ ಎಂದು ಸಾಹಿತಿ, ಪ್ರೊ. ಶ್ರೀಕಾಂತ ಶಾನವಾಡ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ನಮ್ಮ ನಾಡಿನ ಸಾಂಸ್ಕೃತಿಕ ಕ್ಷೇತ್ರಕ್ಕೆ ಬೆಳಗಾವಿ ಕಾರಂಜಿಮಠದ ಕೊಡುಗೆ ಅನನ್ಯವಾಗಿದ್ದು, ಲಿಂ.ಬಸವಲಿಂಗ ಸ್ವಾಮೀಜಿಯವರ ಸಮರ್ಥ ಉತ್ತರಾಧಿಕಾರಿಯಾಗಿ ಗುರುಸಿದ್ಧ ಸ್ವಾಮೀಜಿ ಅವರು ಸಲ್ಲಿಸಿದ ಸೇವೆ ಅನುಪಮ ಮತ್ತು ಚಿರಸ್ಮರಣೀಯವೆನಿಸಿದೆ ಎಂದು ಸಾಹಿತಿ, ಪ್ರೊ. ಶ್ರೀಕಾಂತ ಶಾನವಾಡ ಹೇಳಿದರು.

ನಗರದ ಲಿಂಗಾಯತ ಭವನದಲ್ಲಿ ಅಮಾವಾಸ್ಯೆ ನಿಮಿತ್ತ ಆಯೋಜಿಸಿದ್ದ ಅನುಭಾವ ಗೋಷ್ಠಿ ಹಾಗೂ ಗುರುಸಿದ್ಧ ಸ್ವಾಮೀಜಿಯವರ ಸತ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ಜಿಲ್ಲೆಯ ಹಿರಿಯ ಪೂಜ್ಯರಾಗಿ ವೈವಿಧ್ಯಮಯ ಸೇವೆಗಳಿಂದ ಸಮಾಜಮುಖಿ ಸ್ವಾಮೀಜಿ ಎಂಬ ಅಭಿದಾನದ ಮೂಲಕ ಭಕ್ತಜನರ ಹೃದಯದಲ್ಲಿ ನೆಲೆಸಿದ್ದಾರೆ ಎಂದು ಹೇಳಿದರು.

ನಾಡಿನಲ್ಲಿ ಸಾವಿರರಾರು ಗುರು ಮತ್ತು ವಿರಕ್ತ ಮಠಗಳಿವೆ. ಅವುಗಳಲ್ಲಿ ಹಲವು ಶ್ರೀಮಠಗಳು ತಮ್ಮ ಸಾಮಾಜಿಕ ಕೈಂಕರ್ಯದಿಂದ ಭಕ್ತರಲ್ಲಿ ಸ್ಥಾಯಿಯಾಗಿ ನೆಲೆಸಿವೆ. ಅವುಗಳಲ್ಲಿ ಕಾರಂಜಿಮಠ ಒಂದೆಂಬುದು ಅಭಿಮಾನದ ಸಂಗತಿ. ಸಮಾಜಮುಖಿ ವಿಚಾರಧಾರೆಗೆ ಯಾವತ್ತೂ ಮೇಲ್ಪಂಕ್ತಿಯಲ್ಲಿ ನಿಂತು ಸಮರ್ಪಣಾಭಾವದಿಂದ ತಮ್ಮ ಬದುಕನ್ನು ಪ್ರಸಾದಮಯವನ್ನಾಗಿ ಮಾಡಿಕೊಂಡವರು ಗುರುಸಿದ್ಧ ಶ್ರೀಗಳು. ಶ್ರೀಮಠಗಳು ಸಮಾಜಮುಖಿಯಾಗಿ ದುಡಿಯಬೇಕು. ಸಮಾಜದ ಅನಿಷ್ಠ ತೊಡೆದುಹಾಕಬೇಕು. ತಮ್ಮ ರಚನಾತ್ಮಕ ಹಾಗೂ ಸೃಜನಶೀಲ ಕಾರ್ಯಗಳಿಂದ ಲೋಕಮುಖಿಯಾಗಿರಬೇಕೆಂಬ ಮಾತಿಗೆ ಬದ್ಧರಾಗಿಯೇ ಗುರುಸಿದ್ಧ ಸ್ವಾಮೀಜಿ ನಡೆದವರು. ಇಂದು ಮಠಗಳು ತಮ್ಮ ಪಾವಿತ್ರ್ಯತೆ ಕಳೆದುಕೊಳ್ಳುತ್ತಿರುವ ಸಮಯದಲ್ಲಿ ಒಂದಿಷ್ಟು ಮಠಗಳು ಹೂವಾಗಿ ಅರಳಿನಿಲ್ಲುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ. ಜಂಗಮ ತತ್ವಕ್ಕೆ ನಿಜಾರ್ಥವನ್ನು ತಂದು ಅದನ್ನು ಅನುಷ್ಠಾನಗೊಳಿಸಿದ್ದಾರೆ ಎಂದು ತಿಳಿಸಿದರು.

ದೇಹದಾನದಂತಹ ಜಾಗೃತಿಗೆ ಕರೆ ನೀಡಿರುವ ಶ್ರೀಗಳು ಅದನ್ನು ಮರಣದ ನಂತರ ಅರ್ಪಿಸುವ ದೃಢ ನಿರ್ಧಾರ ಕೈಗೊಂಡು ಸಮಾಜಕ್ಕೆ ಮಾದರಿಯಾದವರು. ಕೈದಿಗಳ ಮನಪರಿವರ್ತನೆ, ಪುಸ್ತಕ ಪ್ರಕಟಣೆ, ಸಾಮಾಜಿಕ ಅನಿಷ್ಟಗಳ ಕುರಿತು ಜಾಗೃತಿ ಆಂದೋಲನ ಕೈಗೊಂಡಿರುವ ಶ್ರೀಗಳ ನಡೆ ಸಮಾಜಮುಖಿಯಾಗಿ ಬೆಳಗಿದೆ. ಇಂತಹ ಪೂಜ್ಯರು ನಮ್ಮ ಮಧ್ಯೆದಲ್ಲಿರುವುದು ನಮ್ಮ ಪುಣ್ಯವೆಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಮಾತನಾಡಿ, 75 ವಸಂತ ಪೂರೈಸಿದ, ಬದುಕನ್ನ ಅರ್ಥಪೂರ್ಣವನ್ನಾಗಿಸಿಕೊಂಡವರು ಕಾರಂಜಿ ಶ್ರೀಗಳು. ಅವರ ಚಿಂತನೆ ಬಸವ ತತ್ವಗಳ ಕುರಿತು ಇರುವ ಜ್ಞಾನ ಅಪಾರ. ನಿಜವಾದ ಅನುಭಾವ ಕಾರಂಜಿ ಎಣಿಸಿಕೊಂಡವರೇ ಶ್ರೀಗಳು ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ, ಹಿಂದಿನ ನಾಗನೂರು ರುದ್ರಾಕ್ಷಿಮಠದ ಡಾ.ಶಿವಬಸವ ಸ್ವಾಮೀಜಿಯವರ ಕೃಪಾಶೀರ್ವಾದದಿಂದ ನಾನು ಸಾಮಾಜಿಕ ಸೇವೆಗೆ ತೊಡಗಲು ಸಾಧ್ಯವಾಯಿತು. ಈ ಸುದೀರ್ಘ ಬದುಕಿನಲ್ಲಿ ಸಮಾಜ ನೀಡಿದ ಜವಾಬ್ದಾರಿಗಳನ್ನು ನಿಷ್ಠೆಯಿಂದ ನಿರ್ವಹಿಸಿದ್ದೇನೆ. ಮುಂದೆಯೂ ಬಸವಾದಿ ಶರಣರ ಕೃಪೆಯಿಂದ ಸೇವೆ ಸಲ್ಲಿಸುತ್ತೇನೆ. ಶ್ರೀಮಠವನ್ನು ಅಸಂಖ್ಯ ಭಕ್ತರು ಕಟ್ಟಿ ಬೆಳೆಸಿದ್ದಾರೆ ಎಂದು ಹೇಳಿದರು.

ಸರಳಾ ಗುಮಾಜಿ ವಚನ ಪ್ರಾರ್ಥಿಸಿದರು. ಅನುಪಮಾ ದೊಡವಾಡ, ಶೈಲಜಾ ಸಂಸುದ್ದಿ ಮಾತನಾಡಿದರು. ಸುಮಾ ಬೇವಿನಕೊಪ್ಪಮಠ, ಆಶಾ ಯಮಕನಮರಡಿ ಸ್ವಾಗತಿಸಿದರು. ಶೈಲಾ ಪ್ರಸಾದಿ ವಂದಿಸಿದರು. ಗಿರಿಜಾ ಮುಳಗುಂದ ನಿರೂಪಿಸಿದರು. ಗೀತಾ ಗುಂಡಕಲ್ಲ ದಾಸೋಹ ಸೇವೆ ನೀಡಿದರು. ಡಾ.ಎಫ್.ವಿ.ಮಾನ್ವಿ, ರಮೇಶ ಕಳಸಣ್ಣವರ, ಪ್ರಸಾದ ಹೀರೆಮಠ, ಡಾ.ಗುರುದೇವಿ ಹುಲೆಪ್ಪನವರಮಠ, ಜ್ಯೋತಿ ಬಾದಾಮಿ, ಜಯಶೀಲಾ ಬ್ಯಾಕೋಡ, ವಿ.ಕೆ. ಪಾಟೀಲ, ಬಾಲಚಂದ್ರ ಬಾಗಿ, ಗುರುದೇವ ಪಾಟೀಲ, ಮಹಾಸಭೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.