ಸಾರಾಂಶ
ಅಕ್ಟೋಬರ್ ೧೦ರಂದು ಮಂಗಳೂರಿನಲ್ಲಿ ನಡೆಯಲಿರುವ ಕೋಟ ಶಿವರಾಮ ಕಾರಂತರ ಹುಟ್ಟುಹಬ್ಬದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಎಸ್. ಪ್ರದೀಪಕುಮಾರ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರಿನ ಕಲ್ಕೂರ ಪ್ರತಿಷ್ಠಾನ ಮತ್ತು ಕಾರಂತ ಹುಟ್ಟುಹಬ್ಬ ಆಚರಣಾ ಸಮಿತಿಯು ಈ ವರ್ಷದ ‘ಕಾರಂತ ಪ್ರಶಸ್ತಿ’ಯನ್ನು ಖ್ಯಾತ ಅರ್ಥಧಾರಿ, ಶ್ರೇಷ್ಠ ವಿಮರ್ಶಕ, ಸಂಶೋಧಕ, ಬಹುಶ್ರುತ ವಿದ್ವಾಂಸರೆಂದೇ ಖ್ಯಾತರಾದ ಡಾ. ಎಂ. ಪ್ರಭಾಕರ ಜೋಶಿಯವರಿಗೆ ಪ್ರದಾನ ಮಾಡುವುದೆಂದು ನಿರ್ಧರಿಸಿದೆ. ಅಕ್ಟೋಬರ್ ೧೦ರಂದು ಮಂಗಳೂರಿನಲ್ಲಿ ನಡೆಯಲಿರುವ ಕೋಟ ಶಿವರಾಮ ಕಾರಂತರ ಹುಟ್ಟುಹಬ್ಬದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಎಸ್. ಪ್ರದೀಪಕುಮಾರ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಾಮಗ, ಶೇಣಿಯವರಿಂದ ಮೊದಲ್ಗೊಂಡು ಹಿರಿಯ, ಕಿರಿಯ ಅರ್ಥಧಾರಿಗಳ ಜೊತೆ ಅರ್ಥ ಹೇಳಿದ ಖ್ಯಾತಿ ಇವರದ್ದು. ಚಿಂತನಶೀಲ ಸರಸ ಸಂಭಾಷಣೆ, ನವಿರಾದ ಹಾಸ್ಯ ಪ್ರವೃತ್ತಿ, ಪುರಾಣ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ಪಾತ್ರಗಳನ್ನು ವೈಚಾರಿಕವಾಗಿ ಚಿತ್ರಿಸುವ ರೀತಿ, ದುಷ್ಟಶಿಷ್ಟ ಎರಡೂ ಸ್ವಭಾವದ ಪಾತ್ರಗಳನ್ನು ವಿಭಿನ್ನ ರೀತಿಯಲ್ಲಿ ಚಿತ್ರಿಸುವ ಸಾಮರ್ಥ್ಯ ಬೆರಗನ್ನು ಹುಟ್ಟಿಸುವಂತಹದ್ದು. ಯಕ್ಷಗಾನ ಪ್ರಸಂಗ, ಶಾಸ್ತ್ರಜ್ಞಾನ ಜೋಶಿಯವರಿಗೆ ಕರತಲಾಮಲಕ. ಪಾದರಸದಂತಹ ಕ್ರಿಯಾಶೀಲ ವ್ಯಕ್ತಿತ್ವದ ಇವರಿಗೆ ಅರ್ಹತೆಯ ಮೇಲೆ ಪ್ರಾಪ್ತವಾದ ಗೌರವಗಳಿಗೆ ಲೆಕ್ಕಮಿತಿಯಿಲ್ಲ. ರಾಜ್ಯ ಯಕ್ಷಗಾನ ಅಕಾಡೆಮಿಯ ಪಾರ್ತಿಸುಬ್ಬ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ಕುಕ್ಕಿಲ ಪ್ರಶಸ್ತಿ, ಪೇಜಾವರ ರಾಮ ವಿಠಲ ಪ್ರಶಸ್ತಿ, ಕು.ಶಿ. ಪ್ರಶಸ್ತಿ, ಮರಿಯಪ್ಪ ಭಟ್ಟ ಪ್ರಶಸ್ತಿ, ಮುಳಿಯ ಪ್ರಶಸ್ತಿ, ಮಂಗಳೂರು ವಿಶ್ವವಿದ್ಯಾಲಯದ ಯಕ್ಷಮಂಗಳಾ ಪ್ರಶಸ್ತಿ, ವಾಗಾರ್ಥ ಗೌರವ (ಮೈಸೂರು) ಹೀಗೆ ನೂರಾರು ಪ್ರತಿಷ್ಠಿತ ಪ್ರಶಸ್ತಿ ಸಂಮಾನಗಳು ಇವರನ್ನು ಅರಸಿ ಬಂದಿವೆ.