ಕಾರಂತರ ಸಾಹಿತ್ಯ ಅಧ್ಯಯನ ಕರಾವಳಿ ಜನಪದದ ಪ್ರತಿಬಿಂಬ: ಪ್ರೊ.ಕೃಷ್ಣಯ್ಯ

| Published : May 17 2025, 02:34 AM IST

ಕಾರಂತರ ಸಾಹಿತ್ಯ ಅಧ್ಯಯನ ಕರಾವಳಿ ಜನಪದದ ಪ್ರತಿಬಿಂಬ: ಪ್ರೊ.ಕೃಷ್ಣಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಗುರುವಾರ ಬ್ರಹ್ಮಗಿರಿಯ ರೆಡ್‌ಕ್ರಾಸ್ ಭವನದಲ್ಲಿ ಕೋಟ ಶಿವರಾಮ ಕಾರಂತ ಟ್ರಸ್ಟ್ ಹಾಗೂ ಡಾ. ಜಿ ಶಂಕರ್ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ಶಿವರಾಮ ಕಾರಂತರ ಬರಹ ಮತ್ತು ಜಾನಪದ ಅಧ್ಯಯನ ಶಿಬಿರ ನೆರವೇರಿತು.

ಕನ್ನಡಪ್ರಭ ವಾರ್ತೆ ಉಡುಪಿ

ಕರಾವಳಿಯ ಜಾನಪದವನ್ನು ಕೇಂದ್ರವಾಗಿಟ್ಟುಕೊಂಡು ಡಾ. ಶಿವರಾಮ ಕಾರಂತರು ಸಾಹಿತ್ಯ ರಚನೆ ಮಾಡಿದ್ದಾರೆ. ಈ ದೃಷ್ಟಿಯಿಂದ ಕಾರಂತರ ಸಾಹಿತ್ಯದ ಅಧ್ಯಯನವೆಂದರೆ ಕರಾವಳಿಯ ಜಾನಪದ ಅಧ್ಯಯನವೇ ಆಗುತ್ತದೆ ಎಂದು ಖ್ಯಾತ ಜಾನಪದ ಸಂಶೋಧಕ ಪ್ರೊ. ಎಸ್.ಎ. ಕೃಷ್ಣಯ್ಯ ಹೇಳಿದ್ದಾರೆ.

ಗುರುವಾರ ಬ್ರಹ್ಮಗಿರಿಯ ರೆಡ್‌ಕ್ರಾಸ್ ಭವನದಲ್ಲಿ ಕೋಟ ಶಿವರಾಮ ಕಾರಂತ ಟ್ರಸ್ಟ್ ಹಾಗೂ ಡಾ. ಜಿ ಶಂಕರ್ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಶಿವರಾಮ ಕಾರಂತರ ಬರಹ ಮತ್ತು ಜಾನಪದ ಅಧ್ಯಯನ ಶಿಬಿರ ಉದ್ಘಾಟಿಸಿ ಮಾತನಾಡುತ್ತಿದ್ದರು.

ಡಾ. ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ. ಗಣನಾಥ ಶೆಟ್ಟಿ ಎಕ್ಕಾರು ಮಾತನಾಡಿ, ಕಾರಂತರ ಸಾಹಿತ್ಯ ಮಾತ್ರವಲ್ಲದೆ, ಪರಿಸರದ ಬಗೆಗೆ ಅವರ ಹೋರಾಟ ಮಹತ್ತರವಾಗಿದೆ. ದಿಟ್ಟತನ, ಸ್ಪಷ್ಟ ನೇರ ಮಾತಿನ ಕಾರಂತರು, ವಿಶ್ವದ ಸಾಹಿತ್ಯದಲ್ಲಿ ಕರಾವಳಿಯ ಹೆಸರನ್ನು ಮುಂಚೂಣಿಯಲ್ಲಿ ನಿಲ್ಲಿಸಿದ್ದಾರೆ ಎಂದರು,

ಕರ್ನಾಟಕ ರಾಜ್ಯ ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಮಾತನಾಡಿ, ಪ್ರಕೃತಿಯ ಸೂಕ್ಷ್ಮತೆಗಳನ್ನು ತಮ್ಮ ಸಾಹಿತ್ಯದ ಮೂಲಕ ಜನರಿಗೆ ತಲುಪಿಸಿದ ಕೆಲವೇ ಕೆಲವು ಸಾಹಿತಿಗಳಲ್ಲಿ ಕಾರಂತರೂ ಒಬ್ಬರು. ವಿವಿಧ ಕ್ಷೇತ್ರಗಳಲ್ಲಿ ಅವರ ಜ್ಞಾನ ಅಗಾಧವಾಗಿತ್ತು ಎಂದರು.

ಡಾ. ಜಿ ಶಂಕರ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಶ್ರೀಧರ್ ಪ್ರಸಾದ್ ಕೆ. ಕಾರ್ಯಕ್ರಮದ ಅಧ್ಯಕ್ಷ್ಯತೆ ವಹಿಸಿದ್ದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ. ನಿಕೇತನಾ, ಸಹಪ್ರಾಧ್ಯಾಪಕ ಡಾ. ಪ್ರಸನ್ನ ಪಿ.ಬಿ., ಪ್ರಾಧ್ಯಾಪಕಿ ಹೇಮಾವತಿ ಹಾಗೂ ಮತ್ತಿತತರು ಇದ್ದರು.

ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಇತ್ತೀಚೆಗೆ ನಿಧನರಾದ ಪ್ರೊ. ಹೇರಂಜೆ ಕೃಷ್ಣ ಭಟ್ ಹಾಗೂ ನಂದಳಿಕೆ ಬಾಲಚಂದ್ರ ರಾವ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಡಾ. ಶಿವರಾಮ ಕಾರಂತ ಟ್ರಸ್ಟಿನ ಸದಸ್ಯ ಕಾರ್ಯದರ್ಶಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ತ್ರಿವೇಣಿ ನಿರೂಪಿಸಿದರು. ಟ್ರಸ್ಟಿನ ಸದಸ್ಯ ಜಿ.ಎಂ. ಶರೀಫ್ ವಂದಿಸಿದರು.