ಭಟ್ಕಳ ಶೋಟೋಕಾನ್ ಕರಾಟೆ ಇನ್‌ಸ್ಟಿಟ್ಯೂಟ್‌ನಿಂದ ಬ್ಲ್ಯಾಕ್ ಬೆಲ್ಟ್ ವಿತರಣೆ

ಕನ್ನಡಪ್ರಭ ವಾರ್ತೆ ಭಟ್ಕಳ

ಇಲ್ಲಿಯ ಕುದುರೆ ಬೀರಪ್ಪ ದೇವಸ್ಥಾನದ ಸಭಾಭವನದಲ್ಲಿ ಭಟ್ಕಳ ಶೋಟೋಕಾನ್ ಕರಾಟೆ ಇನ್‌ಸ್ಟಿಟ್ಯೂಟ್‌ ಇವರ ಆಶ್ರಯದಲ್ಲಿ ನಡೆದ ೧೩ನೇ ಬ್ಲ್ಯಾಕ್ ಬೆಲ್ಟ್ ವಿತರಣಾ ಕಾರ್ಯಕ್ರಮವನ್ನು ಮುರುಡೇಶ್ವರದ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಡಾ. ಪುಷ್ಪಲತಾ ವೈದ್ಯ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಮನೋ ನಿಗ್ರಹ, ಆತ್ಮರಕ್ಷಣೆಗೆ ಮಾರ್ಷಲ್ ಆರ್ಟ್ಸ್ ಸಹಕಾರಿ. ಆಧುನಿಕ ಜೀವನದ ಒತ್ತಡದಲ್ಲಿ ಪೋಷಕರು ಮಕ್ಕಳಿಗೆ ಸಾಕಷ್ಟು ಸಮಯ ನೀಡಲು ಸಾಧ್ಯವಾಗುವುದಿಲ್ಲ. ಆದರೂ ಕೆಲವು ಪಾಲಕರು ಕರಾಟೆಯಂತಹ ಸಮರ ಕಲೆಯನ್ನು ಮಕ್ಕಳಿಗೆ ಕಲಿಯಲು ಉತ್ತೇಜನ ನೀಡುತ್ತಿದ್ದಾರೆ. ಕರಾಟೆ ಆತ್ಮರಕ್ಷಣೆಯೊಂದಿಗೆ ಏಕಾಗ್ರತೆಯನ್ನು ಕಲಿಸುತ್ತದೆ ಎಂದು ಹೇಳಿದರು.

ದಂತ ವೈದ್ಯ ಡಾ. ರವಿ ನಾಯ್ಕ ಮಾತನಾಡಿ, ಬ್ಲಾಕ್ ಬೆಲ್ಟ್ ಪಡೆದ ವಿದ್ಯಾರ್ಥಿಗಳು ಈ ಕಲೆಯನ್ನು ಆತ್ಮ ರಕ್ಷಣೆ ಹಾಗೂ ಇತರರು ಕಷ್ಟದಲ್ಲಿ ಸಿಲುಕಿದಾಗ ಅವರ ರಕ್ಷಣೆಗೆ ಉಪಯೋಗಿಸಬೇಕು ಎಂದರು. ಪತ್ರಕರ್ತ ರಾಮಚಂದ್ರ ಕಿಣಿ, ಅಧ್ಯಕ್ಷತೆ ವಹಿಸಿದ್ದ ದಿ ನ್ಯೂ ಇಂಗ್ಲೀಷ್ ಪಿಯು ಕಾಲೇಜಿನ ಡಾ. ವೀರೇಂದ್ರ ಶಾನಭಾಗ ಮಾತನಾಡಿದರು.


ಭಟ್ಕಳ ಶೋಟೊಕಾನ್ ಕರಾಟೆ ಇನ್‌ಸ್ಟಿಟ್ಯೂಟ್‌ ಅಧ್ಯಕ್ಷ ಸುರೇಶ ಮೊಗೇರ, ಶ್ರೀ ಕುದುರೆ ಬೀರಪ್ಪ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಶಂಕರ್ ಎಂ. ನಾಯ್ಕ ಇದ್ದರು. ಬ್ಲ್ಯಾಕ್ ಬೆಲ್ಟ್ ಮುಖ್ಯ ಪರೀಕ್ಷಕ ಹನ್ಸಿ ಸಿ. ರಾಜನ್ ೩೦ ವಿದ್ಯಾರ್ಥಿಗಳಿಗೆ ಬ್ಲಾಕ್ ಬೆಲ್ಟ್ ವಿತರಿಸಿದರು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಶ್ರೀ ಕುದುರೆ ಬೀರಪ್ಪ ದೇವಸ್ಥಾನ ಆಡಳಿತ ಮಂಡಳಿಯಿಂದ ಡಾ. ಪುಷ್ಪಲತಾ ಮಂಕಾಳ ವೈದ್ಯ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿನಿ ನಿದಿ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಸಿಂಧು ಅರೆರಾ, ಶಿಕ್ಷಕ ನಾಗರಾಜ ದೇವಾಡಿಗ ನಿರ್ವಹಿಸಿದರು. ಶಿಕ್ಷಕ ಆರ್ಯನ ನಾಯ್ಕ, ಗೋಪಾಲ ನಾಯ್ಕ ಇತರರು ಇದ್ದರು.