ಸಿಎಂ ಡಿ.ಕೆ.ಶಿವಕುಮಾರ್ ಮತ್ತು ಮತ್ತು ಕಂದಾಯ ಸಚಿವ ಜಿ.ಪರಮೇಶ್ವರ್ ಅವರು ಕೂಡಲೇ ಈ ಅಧಿಕಾರಿ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದರು. ಅದೇ ರೀತಿ ಶಿರಸ್ತೇದಾರ್ ಅಸ್ಲಂ ಭಾಷ ಎಂಬ ಅಧಿಕಾರಿ ವಿರುದ್ಧ ದೂರುಗಳು ಕೇಳಿ ಬಂದಿವೆ. ಕಚೇರಿ ಅವಧಿಯಲ್ಲಿ ಟೀ ಕ್ಯಾಂಟೀನ್ ಗಳಲ್ಲಿ ಕುಳಿತು ವ್ಯವಹರಿಸುತ್ತಿರುವುದು ತಿಳಿದು ಬಂದಿದೆ. ಅವರ ಮೇಲೂ ಕ್ರಮಕ್ಕೆ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸಮಸ್ಯೆ ಹೇಳಲು ಹೋದ ವಯೋವೃದ್ಧ ರೈತನನ್ನು ಕಚೇರಿ ಆವರಣದಲ್ಲಿಯೇ ತಳ್ಳಾಡಿ ಕೊಠಡಿಯಲ್ಲಿ ಕೂಡಿ ಹಾಕಿ ದಬ್ಬಾಳಿಕೆ ನಡೆಸಿದ ತಹಸೀಲ್ದಾರ್ ಶ್ರೇಯಸ್ ಮತ್ತು ಕಚೇರಿ ಸಿಬ್ಬಂದಿಯನ್ನು ಸರ್ಕಾರ ಈ ಕೂಡಲೇ ತಾಲೂಕಿನಿಂದ ವರ್ಗಾವಣೆ ಮಾಡಿ ಇಲಾಖಾ ತನಿಖೆ ನಡೆಸಿ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆಗ್ರಹಿಸಿದರು.

ಪಟ್ಟಣದ ಪ್ರವಾಸಿ ಮಂದಿರದ ಎದುರು ತಹಸೀಲ್ದಾರರಿಂದ ದಬ್ಬಾಳಿಕೆಗೆ ಒಳಗಾದ ತಾಲೂಕಿನ ಮಲ್ಕೋನಹಳ್ಳಿಯ ರೈತ ಅಣ್ಣಯ್ಯರ ಜೊತೆಗೂಡಿ ಸುದ್ದಿಗೋಷ್ಠಿ ನಡೆಸಿದ ಕರವೇ ಕಾರ್ಯಕರ್ತರು, ತಹಸೀಲ್ದಾರ್ ಶ್ರೇಯಸ್ ಮತ್ತು ಅವರ ಅಧೀನ ನೌಕರರ ವಿರುದ್ಧ ಧಿಕ್ಕಾರದ ಘೊಷಣೆಗಳನ್ನು ಕೂಗಿದರು.

ಈ ವೇಳೆ ಮಾತನಾಡಿದ ಜಿಲ್ಲಾ ಕರವೇ ಅಧ್ಯಕ್ಷ ಡಿ.ಎಸ್.ವೇಣು, ತಹಸೀಲ್ದಾರ್ ಶ್ರೇಯಸ್ ತಾಲೂಕಿಗೆ ಬಂದ ಕೆಲವೇ ದಿನಗಳಲ್ಲಿ ಸಾರ್ವಜನಿಕರು, ರೈತರ ಮೇಲೆ ದಬ್ಬಾಳಿಕೆ, ದೌರ್ಜನ್ಯ ಮಾಡುತ್ತಿರುವುದು ಕೇಳಿ ಬಂದಿದೆ. ರೈತನನ್ನು ಕೈ ಹಿಡಿದು ಎಳೆದು ರೂಮಿನಲ್ಲಿ ಕೂಡಿಹಾಕಿ ಬೆದರಿಕೆ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಹಸೀಲ್ದಾರ್ ಅವರು ತಮ್ಮ ಸಿಬ್ಬಂದಿ ಜೊತೆಗೂಡಿ ನಡೆಸಿದ ದಬ್ಬಾಳಿಕೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಸಹ ವೈರಲ್ ಆಗಿತ್ತು. ವೃದ್ಧ ರೈತನನ್ನು ಕಚೇರಿ ಕಾರಿಡಾರ್ ನಿಂದ ಅಮಾನವೀಯವಾಗಿ ನೂಕಿ ಕೊಠಡಿಯಲ್ಲಿ ಬಂಧಿಸಿ ದಬ್ಬಾಳಿಕೆ ನಡೆಸುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ರಾಜ್ಯ ಮಾನವ ಹಕ್ಕುಗಳ ಆಯೋಗ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.

ಸಿಎಂ ಡಿ.ಕೆ.ಶಿವಕುಮಾರ್ ಮತ್ತು ಮತ್ತು ಕಂದಾಯ ಸಚಿವ ಜಿ.ಪರಮೇಶ್ವರ್ ಅವರು ಕೂಡಲೇ ಈ ಅಧಿಕಾರಿ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದರು. ಅದೇ ರೀತಿ ಶಿರಸ್ತೇದಾರ್ ಅಸ್ಲಂ ಭಾಷ ಎಂಬ ಅಧಿಕಾರಿ ವಿರುದ್ಧ ದೂರುಗಳು ಕೇಳಿ ಬಂದಿವೆ. ಕಚೇರಿ ಅವಧಿಯಲ್ಲಿ ಟೀ ಕ್ಯಾಂಟೀನ್ ಗಳಲ್ಲಿ ಕುಳಿತು ವ್ಯವಹರಿಸುತ್ತಿರುವುದು ತಿಳಿದು ಬಂದಿದೆ. ಅವರ ಮೇಲೂ ಕ್ರಮಕ್ಕೆ ಒತ್ತಾಯಿಸಿದರು.

ಒಂದು ವಾರದೊಳಗೆ ಇವರ ವಿರುದ್ಧ ಕ್ರಮ ಜರುಗಿಸದಿದ್ದರೆ ತಾಲೂಕು ಕಚೇರಿ ಮುಂದೆ ನ್ಯಾಯ ಸಿಗುವವರೆಗೆ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಶಾಸಕ ಎಚ್.ಟಿ.ಮಂಜು ಸರ್ಕಾರಿ ಕಚೇರಿಗಳಲ್ಲಿರುವ ಭ್ರಷ್ಟರ ವಿರುದ್ಧ ಚಾಟಿ ಬೀಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ಕರವೇ ತಾಲೂಕು ಅಧ್ಯಕ್ಷ ಟೆಂಪೋ ಶ್ರೀನಿವಾಸ್, ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮೀಪುರ ಶಿವಪ್ರಸಾದ್, ಮದನ್ ಗೌಡ, ಸ್ವಾಮೀಗೌಡ, ಬಳ್ಳೇಕೆರೆ ಪುನೀತ್, ಚನ್ನಾಪುರ ರವಿ, ಬೋರೇಗೌಡ, ಮಲ್ಕೋನಹಳ್ಳಿ ಅಣ್ಣಯ್ಯ ಸೇರಿದಂತೆ ಹಲವರಿದ್ದರು.