ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ವಿಶ್ವಗುರು ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಮಾನವ ಕುಲಕ್ಕೆ ಅವಮಾನ ಮಾಡಿದ್ದಾರೆ. ತಕ್ಷಣ ನಾಡಿನ ಜನತೆಗೆ ಬೇಷರತ್ ಆಗಿ ಕ್ಷಮೆ ಕೇಳಬೇಕು ಎಂದು ಕರವೇ ರಾಜ್ಯ ಉಪಾಧ್ಯಕ್ಷ ಎಂ.ಸಿ.ಮುಲ್ಲಾ ಆಗ್ರಹಿಸಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಷ್ಟುದಿನ ಮಠಾಧೀಶರು, ಸಾಹಿತಿಗಳು, ರಾಜಕಾರಣಿಗಳು, ಬುದ್ಧಿಜೀವಿಗಳ ಬಗ್ಗೆ ಟೀಕೆ ಮಾಡುತ್ತಿದ್ದ ಯತ್ನಾಳ ಇದೀಗ ಸಾಮಾಜಿಕ ಕ್ರಾಂತಿಕಾರ ಬಸವಣ್ಣನವರ ಬಗ್ಗೆಯೇ ಮಾತನಾಡುತ್ತಿದ್ದಾರೆ. ಈಗ ಯತ್ನಾಳ ತಲೆ ಪೂರ್ತಿಯಾಗಿ ಕೆಟ್ಟಿದೆ. ವಿಶ್ವಕ್ಕೆ, ಮಾನವ ಕುಲಕ್ಕೆ ಆದರ್ಶರಾಗಿರುವ ಬಸವಣ್ಣಗೆ ಅವಮಾನ ಮಾಡಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ. ಯತ್ನಾಳ ಈ ರೀತಿ ಮಾತನಾಡಿದ್ದು, ಇಡಿ ಜಿಲ್ಲೆಯ ಜನತೆಗೆ ಅವಮಾನ ಆದಂತಾಗಿದೆ. ರಾಜಕೀಯದಲ್ಲಿ ಉನ್ನತ ಸ್ಥಾನಮಾನಕ್ಕಾಗಿ ಓಡಾಡುತ್ತಿರುವ ನೀವು ರಾಜಕೀಯ ಮಾತನಾಡುತ್ತ ರಾಜಕೀಯ ಮಾಡಿ. ಆದರೆ, ಮಹಾನ್ ಪುರುಷರ ಬಗ್ಗೆ ಈ ರೀತಿ ಹೇಳಿಕೆ ಕೊಡುವುದು ಸರಿಯಲ್ಲ. ಬೇಷರತ್ ಆಗಿ ಕ್ಷಮೆ ಕೇಳಬೇಕು, ಇಲ್ಲವಾದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ತಮಗೆ ಬಸವಣ್ಣನ ಹೆಸರು ಇಟ್ಟಿರುವ ಯತ್ನಾಳ ಅವರ ತಂದೆ-ತಾಯಿಯ ಮಾನವನ್ನೂ ಕಳೆದಿದ್ದಾರೆ. ಬಸವಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ನೀವು ಅವರಂತೆ ಆತ್ಮಹತ್ಯೆ ಮಾಡಿಕೊಳ್ಳಿ ಅಥವಾ ನಿಮ್ಮ ಹೆಸರು ಬದಲಾಯಿಸಿ ಕೋರ್ಟ್ ಅಫಿಡಿವಿಟ್ ಮಾಡಿಕೊಳ್ಳಿ ಎಂದು ಎಚ್ಚರಿಸಿದರು.ಯತ್ನಾಳರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ, ಅವರಿಗೆ ವಿದೇಶದಲ್ಲಾದರೂ ಸರ್ಕಾರದ ಖರ್ಚಿನಲ್ಲಿ ಚಿಕಿತ್ಸೆ ಕೊಡಿಸಿ ಎಂದು ಮೊದಲೇ ಮನವಿ ಮಾಡಿದ್ದೆ. ಇದೀಗ ಬೆಳಗಾವಿಯಲ್ಲೇ ಚಳಿಗಾಲದ ಅಧಿವೇಶನ ಇದ್ದು, ಕೆಎಲ್‌ಇ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಬೇಕು. ಇಲ್ಲದಿದ್ದರೆ ನಾವು ದೇಣಿಗೆ ಸಂಗ್ರಹಿಸಿ ಚಿಕಿತ್ಸೆ ಕೊಡಿಸುವ ವಿಚಾರ ಮಾಡುತ್ತಿದ್ದೇವೆ ಎಂದರು.
ವಕ್ಫ್ ಬಗ್ಗೆ ಹೋರಾಟ ಮಾಡುವಾಗ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಗಳು ಹುಚ್ಚು ರಾಜಕಾರಣಿಗಳ ಜೊತೆ ಸೇರಿ ಬೇರೆ ಧರ್ಮದ ಜನರ ಮನಸ್ಸಿಗೆ ನೋವಾಗುವಂತೆ ಮಾತನಾಡಿದ್ದಾರೆ. ದಯಮಾಡಿ ಇಂತಹ ರಾಜಕಾರಣಿಗಳ ಜೊತೆಗೆ ಹೋಗಬೇಡಿ, ಬೇರೆ ಧರ್ಮದ ಬಗ್ಗೆ ಮಾತನಾಡಬೇಡಿ ಎಂದು ವಿನಂತಿಸಿದರು.ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಫಯಾಜ್ ಕಲಾದಗಿ, ಮಹಾದೇವ ರಾವಜಿ, ಡಾ.ದಯಾನಂದ ಸಾವಳಗಿ ಉಪಸ್ಥಿತರಿದ್ದರು.