ಸಾರಾಂಶ
ಬಳ್ಳಾರಿ : ಬಾಣಂತಿಯರ ಸರಣಿ ಸಾವಿನ ಪ್ರಕರಣದ ಮೂಲಕ ರಾಜ್ಯದ ಗಮನ ಸೆಳೆದಿರುವ ಸ್ಥಳೀಯ ಜಿಲ್ಲಾಸ್ಪತ್ರೆ, ಬಿಮ್ಸ್ ಆಸ್ಪತ್ರೆ ಹಾಗೂ ಜಿಲ್ಲಾ ಔಷಧಿ ಉಗ್ರಾಣಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳ ತಂಡ ಶನಿವಾರ ದಿಢೀರ್ ದಾಳಿ ನಡೆಸಿದೆ. ಬಾಣಂತಿಯರ ಸಾವಿನ ಕುರಿತು ವಿಪಕ್ಷಗಳು ಸರ್ಕಾರದ ಮೇಲೆ ಮುಗಿಬಿದ್ದಿರುವ ಬೆನ್ನಲ್ಲೇ ಈ ದಾಳಿ ನಡೆಸಲಾಗಿದೆ.
ಜಿಲ್ಲಾ ಲೋಕಾಯುಕ್ತ ಎಸ್ಪಿ ಸಿದ್ಧರಾಜು ನೇತೃತ್ವದ ತಂಡ ಜಿಲ್ಲಾಸ್ಪತ್ರೆಗೆ, ಬಿಮ್ಸ್‌ಗೆ ಲೋಕಾಯುಕ್ತ ಡಿವೈಎಸ್ಪಿ ವಸಂತಕುಮಾರ್ ಹಾಗೂ ಸಿಪಿಐ ಮಹ್ಮದ್ ರಫೀಕ್ ನೇತೃತ್ವದ ತಂಡದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಈ ದಾಳಿಯ ವೇಳೆ ಬಾಣಂತಿಯರ ಸಾವಿನ ಪ್ರಕರಣದ ದಾಖಲೆ ಪರಿಶೀಲಿಸಿ ಅದನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆಬಾಣಂತಿಯರಿಗೆ ನೀಡಿರುವ ಔಷಧಿಯೂ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ಅನೇಕ ದಾಖಲೆ,ಗಳನ್ನು ಕೂಡಾ ಲೋಕಾಯುಕ್ತ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಅಲ್ಲದೆ ಬಾಣಂತಿಯರ ಸಾವಿಗೆ ಕಾರಣವಾಗಿದೆ ಎಂದು ಆರೋಪಿಸಲಾದ ನಿರ್ದಿಷ್ಟ ಬ್ಯಾಚ್‌ನ ಔಷಧಿ (ರಿಂಗರ್ ಲ್ಯಾಕ್ಟೇಟ್ ದ್ರಾವಣ) ಸ್ಯಾಂಪಲ್‌ಗಳನ್ನು ಕೂಡಾ ಅಧಿಕಾರಿಗಳು ಸಂಗ್ರಹಿಸಿದ್ದಾರೆ.
ದಿಢೀರ್ ದಾಳಿ:
ಬೆಳಗ್ಗೆ 10.30ರಿಂದ ಸಂಜೆ 4ರ ವರೆಗೆ ಬಿಮ್ಸ್ ಆಸ್ಪತ್ರೆಯಲ್ಲಿ ಅಧಿಕಾರಿಗಳ ತಂಡ ಪರಿಶೀಲನಾ ಕಾರ್ಯದಲ್ಲಿ ತೊಡಗಿದ್ದರೆ, ಮತ್ತೊಂದು ತಂಡ ಜಿಲ್ಲಾಸ್ಪತ್ರೆಯಲ್ಲಿ ಸಂಜೆ 6.30ರ ವರೆಗೆ ಪರಿಶೀಲನೆ ಹಾಗೂ ದಾಖಲಾತಿಗಳ ಸಂಗ್ರಹ ಕಾರ್ಯ ನಡೆಸಿತು. ಔಷಧಿ ಉಗ್ರಾಣದಲ್ಲಿನ ಮಾಹಿತಿ ಸಂಗ್ರಹ ಕಾರ್ಯ ಸಂಜೆ 7ರ ವರೆಗೂ ಮುಂದುವರಿದಿತ್ತು.
20 ಜನರ ತಂಡದಿಂದ ದಾಳಿ:
ಲೋಕಾಯುಕ್ತ ಮೂರು ತಂಡದಲ್ಲಿ ಎಸ್ಪಿ, ಡಿವೈಎಸ್ಪಿ, ನಾಲ್ವರು ಇನ್‌ಸ್ಪೆಕ್ಟರ್‌ಗಳು ಸೇರಿದಂತೆ ಒಟ್ಟು 20 ಜನ ಸಿಬ್ಬಂದಿ ಇದ್ದರು. ಹೊಸಪೇಟೆಯಿಂದ ಸಿಬ್ಬಂದಿ ಕರೆಸಿಕೊಳ್ಳಲಾಗಿತ್ತು. ಜಿಲ್ಲಾಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ. ಬಸಾರೆಡ್ಡಿ, ಬಿಮ್ಸ್ ನಿರ್ದೇಶಕ ಡಾ. ಗಂಗಾಧರಗೌಡ ಸೇರಿ ಜಿಲ್ಲಾಸ್ಪತ್ರೆ ಹಾಗೂ ಬಿಮ್ಸ್‌ನ ವೈದ್ಯಾಧಿಕಾರಿಗಳ ಸಮ್ಮುಖದಲ್ಲಿಯೇ ದಾಖಲೆ ಪರಿಶೀಲನೆ ಕಾರ್ಯ ನಡೆಯಿತು.
ನಾಳೆ ವರದಿ ಸಲ್ಲಿಕೆ:ದಾಳಿ ಕುರಿತು ‘ಕನ್ನಡಪ್ರಭ’ ಜೊತೆ ಮಾತನಾಡಿದ ಜಿಲ್ಲಾ ಲೋಕಾಯುಕ್ತ ಎಸ್ಪಿ ಸಿದ್ಧರಾಜು, ಲೋಕಾಯುಕ್ತರಿಂದ ಶುಕ್ರವಾರ ವಾರೆಂಟ್ ಜಾರಿಗೊಳಿಸಿದ ಹಿನ್ನೆಲೆಯಲ್ಲಿ, ಜಿಲ್ಲಾಸ್ಪತ್ರೆ, ಬಿಮ್ಸ್ ಆಸ್ಪತ್ರೆ ಹಾಗೂ ಔಷಧಿ ಉಗ್ರಾಣಕ್ಕೆ ತೆರಳಿ ಮಾಹಿತಿ ಸಂಗ್ರಹಿಸಲಾಗಿದೆ. ಈ ಕುರಿತ ವರದಿಯನ್ನು ಸೋಮವಾರ ಲೋಕಾಯುಕ್ತರಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.