ಪಿ.ಕೃಷ್ಣೇ ಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ಕೊಡಗು ಜಿಲ್ಲಾ ಘಟಕ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಮಡಿಕೇರಿ ತಾಲ್ಲೂಕಿನ ನಾಲ್ವರು ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸಿತು.

ಮಡಿಕೇರಿ : ಪಿ.ಕೃಷ್ಣೇ ಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ಕೊಡಗು ಜಿಲ್ಲಾ ಘಟಕ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಮಡಿಕೇರಿ ತಾಲ್ಲೂಕಿನ ನಾಲ್ವರು ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸಿತು.ನಗರ ಖಾಸಗಿ ಹೊಟೇಲ್ ಸಮುದ್ರ ಸಭಾಂಗಣದಲ್ಲಿ ನಡೆದ ಸನ್ಮಾನ ಕಾರ್ಯಕ್ರಮವನ್ನು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ದೀಪ ಬೆಳಗುವ ಮೂಲಕ ಕರವೇ ಸ್ವಾಭಿಮಾನಿ ಬಣದ ಪ್ರಮುಖರು ಕಾರ್ಯಕ್ರಮ ಉದ್ಘಾಟಿಸಿದರು.ಕ.ರ.ವೇ ಸ್ವಾಭಿಮಾನಿ ಬಣದ ಕೊಡಗು ಜಿಲ್ಲಾ ಉಸ್ತುವಾರಿ ತನು ಕಿಶೋರ್ ಮಾತನಾಡಿ, 25 ವರ್ಷಗಳಿಂದ ರಾಜ್ಯಾದ್ಯಂತ ಘಟಕಗಳನ್ನು ಹೊಂದಿರುವ ಕರವೇ ಸ್ವಾಭಿಮಾನಿ ಬಣ, ಸಾಮಾಜಿಕ ಕಳಕಳಿಯ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಕೊಡಗು ಜಿಲ್ಲೆಯಲ್ಲಿಯೂ ಸಾಮಾಜಿಕ ಸಮಸ್ಯೆಗಳ ಬಗ್ಗೆ ಹಲವು ಹೋರಾಟಗಳನ್ನು ರೂಪಿಸಿದ್ದು, ಇದು ಮುಂದೆಯೂ ನಡೆಯಲಿದೆ ಎಂದರು.

ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಫ್ರಾನ್ಸಿಸ್ ಡಿಸೋಜಾ ಅವರು ಮಾತನಾಡಿ, ಕೊಡಗು ಜಿಲ್ಲಾ ಕೇಂದ್ರದಲ್ಲೂ ಪಿ.ಯು.ಸಿ ಪರೀಕ್ಷೆ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಮೂಲಕ ಪೋತ್ಸಾಹ ನೀಡುವ ಕಾರ್ಯಕ್ರಮ ಆಯೋಜಿಸುವಂತೆ ರಾಜ್ಯ ಸಂಘಟನೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರದಲ್ಲಿಯೂ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಕಾರ್ಯಕ್ರಮ ನಡೆಯುತ್ತಿದೆ. ಮಕ್ಕಳ ಈ ಸಾಧನೆಯಲ್ಲಿ ಕಾಲೇಜುಗಳ ಉಪನ್ಯಾಸಕರ ಸಹಿತ ಪೋಷಕರ ಬಹು ದೊಡ್ಡ ಪಾತ್ರವಿದೆ. ಈ ಹಿನ್ನೆಲೆಯಲ್ಲಿ ಅವರಿಗೂ ಇದೇ ಸಂದರ್ಭ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ಸಂಘಟನೆಯ ಪ್ರಮುಖರು ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ತೋರಿ ಜಿಲ್ಲೆಗೆ ಕೀರ್ತಿ ತಂದಿರುವ ನಾಲ್ವರು ವಿದ್ಯಾರ್ಥಿನಿಯರು ಮತ್ತವರ ಪೋಷಕರನ್ನು ಸನ್ಮಾನಿಸಿ ಗೌರವಿಸಿದರು.

ರಾಜ್ಯಕ್ಕೆ 4ನೇ ರ‍್ಯಾಂಕ್ ಪಡೆದ ಮಡಿಕೇರಿ ನಿವಾಸಿ ಸಿಂಚನ ಪ್ರಸನ್ನ ಹೊಸಮನೆ (ಶೇ.99.5), ಎಸ್.ಎ.ಫಾತಿಮ (ಶೇ.98.66) ಚಿತ್ರಕಲಾ ಚಂದ್ರ (ಶೇ.97.6) ಹಾಗೂ ಜಿ.ಜಿ.ಮೋನಿಷಾ (ಶೇ.97) ಅವರನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ವಿದಾರ್ಥಿಗಳು ಕರವೇ ಸ್ವಾಭಿಮಾನಿ ಬಣ ನಮ್ಮಗಳ ಶ್ರಮವನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಸಂತೋಷ ತಂದಿದೆ. ಇಂತಹ ಕಾರ್ಯಕ್ರಮಗಳನ್ನು ಮತ್ತಷ್ಟು ಆಯೋಜಿಸುವ ಮೂಲಕ ಇತರ ವಿದ್ಯಾರ್ಥಿಗಳಿಗೂ ಪ್ರೇರಣೆ ನೀಡುವಂತಾಗಬೇಕು. ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ವೇದವಾಕ್ಯ ಮತ್ತಷ್ಟು ವ್ಯಾಪಿಸಲಿ ಎಂದು ಆಶಿಸಿದರು.ಕರವೇ ಸ್ವಾಭಿಮಾನಿ ಬಣದ ಸಾಮಾಜಿಕ ಸೇವೆಯನ್ನು ಮನಗಂಡು ಗೋಣಿಕೊಪ್ಪ ಕಾವೇರಿ ಪದವಿ ಪೂರ್ವ ಕಾಲೇಜು ಶಿಕ್ಷಕಿ, ಮೂರ್ನಾಡು ನಿವಾಸಿ ಜಶ್ಮಿ ಅವರು ಸಂಘಟನೆಗೆ ಸೇರ್ಪಡೆಯಾದರು. ಜಿಲ್ಲಾ ಉಸ್ತುವಾರಿ ತನು ಕಿಶೋರ್, ಜಿಲ್ಲಾಧ್ಯಕ್ಷ ಫ್ರಾನ್ಸಿಸ್ ಡಿಸೋಜಾ ಹಾಗೂ ಜಿಲ್ಲಾ ಘಟಕದ ಪ್ರಮುಖರು ಜಶ್ಮಿ ಅವರನ್ನು ಆತ್ಮೀಯವಾಗಿ ಸಂಘಟನೆಗೆ ಬರ ಮಾಡಿಕೊಂಡರು.

ಸಂಘಟನೆಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜಯಶ್ರೀ ಮುರುಗೇಶ್, ಜಿಲ್ಲಾ ಕಾರ್ಯದರ್ಶಿ ಸುರೇಶ್, ವಿರಾಜಪೇಟೆ ತಾಲ್ಲೂಕು ಉಸ್ತುವಾರಿ ಕಾರ್ಯಪ್ಪ, ಜಿಲ್ಲಾ ಉಪಾಧ್ಯಕ್ಷ ರಾಜೇಶ್ ಗೌಡ, ಜಿಲ್ಲಾ ಸಲಹೆಗಾರ ಸಜಿಲ್, ಮಡಿಕೇರಿ ತಾಲ್ಲೂಕು ಅಧ್ಯಕ್ಷೆ ದೀರ್ಘ, ಉಪಾಧ್ಯಕ್ಷೆ ನಂದಿನಿ ಮತ್ತಿತರರು ಉಪಸ್ಥಿತರಿದ್ದರು.