ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಕನ್ನಡ ಮಾತನಾಡಿ ಎಂದಿದ್ದಕ್ಕೆ ಮರಾಠಿ ಯುವಕರ ಗುಂಪಿನಿಂದ ಹಲ್ಲೆಗೀಡಾದ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕ ಮಹಾದೇವಪ್ಪ ಹುಕ್ಕೇರಿ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ಮಾರಿಹಾಳ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು. ಮಾತ್ರವಲ್ಲ, ತಳ್ಳಾಟ, ನೂಕಾಟ ಕೂಡ ನಡೆಯಿತು.ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ ಮರಾಠಿ ಪುಂಡರ ಕ್ರಮವನ್ನು ತೀವ್ರವಾಗಿ ಖಂಡಿಸಿದ ಪ್ರತಿಭಟನಾಕಾರರು, ಆರೋಪಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದೂ ಆಗ್ರಹಿಸಿದರು. ಈ ವೇಳೆ ಆಯಿಶಾ ಸನದಿ ಠಾಣೆ ಎದುರು ಮಲಗಿ ಪ್ರತಿಭಟನೆ ಕೂಡ ನಡೆಸಿದರು. ಕನ್ನಡಿಗರ ಮೇಲೆ ಅನ್ಯಾಯವಾಗುತ್ತಿದೆ. ನ್ಯಾಯ ಒದಗಿಸುವಂತೆ ಅವರು ಆಗ್ರಹಿಸಿದರು. ಪ್ರತಿಭಟನೆ ತೀವ್ರ ಸ್ವರೂಪ ಪಡೆಯಿತು. ನಿರ್ವಾಹಕನ ಮೇಲೆ ದಾಖಲಾದ ಪೋಕ್ಸೋ ಪ್ರಕರಣವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ತಮ್ಮ ವಶಕ್ಕೆ ಪಡೆದುಕೊಂಡರು.
ಇದಕ್ಕೂ ಮೊದಲು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೆಳಗಾವಿ ನಗರದ ಅಶೋಕ ವೃತ್ತದಲ್ಲಿಯೂ ಪ್ರತಿಭಟನೆ ನಡೆಸಿ, ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದರು. ಹಲ್ಲೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳುವುದನ್ನು ಬಿಟ್ಟು, ಬಸ್ ನಿರ್ವಾಹಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿರುವುದು ಸರಿಯಲ್ಲ ಆಕ್ರೋಶ ವ್ಯಕ್ತಪಡಿಸಿದರು.ಬೆಳಗಾವಿ- ಬಾಗಲಕೋಟೆ ಹೆದ್ದಾರಿ ತಡೆ:
ಬಸ್ ನಿರ್ವಾಹಕನ ಮೇಲೆ ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿರುವುದನ್ನು ಖಂಡಿಸಿ ಕರವೇ (ಶಿವರಾಮೇಗೌಡ ಬಣ) ಹಾಗೂ ಕಿತ್ತೂರು ಕರ್ನಾಟಕ ಸೇನೆ ಕಾರ್ಯಕರ್ತರು ಬಾಳೇಕುಂದ್ರಿ ಕ್ರಾಸ್ ಬಳಿ ಶನಿವಾರ ಬೆಳಗಾವಿ- ಬಾಗಲಕೋಟೆ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದರು. ಇದರಿಂದಾಗಿ ವಾಹನ ಸಂಚಾರಕ್ಕೆ ಅಡೆತಡೆ ಉಂಟಾಯಿತು.ಕರವೇ ಜಿಲ್ಲಾಧ್ಯಕ್ಷ ವಾಜೀದ ಹಿರೇಕುಡಿ ಮತ್ತು ಕಿತ್ತೂರು ಕರ್ನಾಟಕ ಸೇನೆ ರಾಜ್ಯಾಧ್ಯಕ್ಷ ಮಹಾದೇವ ತಳವಾರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕನ್ನಡ ಹೋರಾಟಗಾರರು, ನಿರ್ವಾಹಕನ ಮೇಲೆ ದಾಖಲಿಸಿರುವ ಪೋಕ್ಸೋ ಪ್ರಕರಣವನ್ನು ಹಿಂಪಡೆಯಬೇಕು. ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕು. ಎಂಇಎಸ್ ಪುಂಡಾಟಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು. ಇದೆ ವೇಳೆ ಎಂಇಎಸ್ ಪ್ರತಿಕೃತಿ ದಹಿಸಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡರು.ನಂತರ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರನ್ನು ಭೇಟಿಯಾಗಿ, ಬಸ್ ನಿರ್ವಾಹಕನ ಮೇಲೆ ಹಾಕಿರುವ ಪೋಕ್ಸೋ ಪ್ರಕರಣವನ್ನು ಹಿಂಪಡೆಯಬೇಕು ಎಂದೂ ಅವರು ಮನವಿ ಮಾಡಿದರು.
ನಿರ್ವಾಹಕನ ಮೇಲೆ ಪೋಕ್ಸೋ ಕೇಸ್: ಪೊಲೀಸ್ ಆಯುಕ್ತಬಸ್ ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಕೌಂಟರ್ ಪ್ರಕರಣ ದಾಖಲಾಗಿದ್ದು, ನಿರ್ವಾಹಕನ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿರ್ವಾಹಕ ತನ್ನ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಬಾಲಕಿ ಮಾರಿಹಾಳ ಠಾಣೆಗೆ ದೂರು ನೀಡಿದ್ದಾಳೆ. ಬಸ್ ಪಾಸ್ ವಿಷಯದಲ್ಲಿ ಕಂಡಕ್ಟರ್ ಮೇಲೆ ಹಲ್ಲೆ ನಡೆದಿದೆ. ಆರೋಪಿಯ ಸಹೋದರ ಮತ್ತು ಅವನ ಸಂಗಡಿಗರು ಬಸ್ ಬಾಳೆಕುಂದ್ರಿ ತಲುಪಿದ ಬಳಿಕ ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ಮತ್ತು ಪರಾರಿಯಾಗಿರುವ ಉಳಿದ ಆರೋಪಿಗಳಿಗಾಗಿ ಶೋಧಕಾರ್ಯ ನಡೆದಿದೆ ಎಂದು ವಿವರಿಸಿದರು.ಈ ಘಟನೆಯಲ್ಲಿ ಸತ್ಯಾಂಶ ಏನಿದೆ ಎನ್ನುವುದನ್ನು ನಾವು ತನಿಖೆ ಮಾಡುತ್ತಿದ್ದೇವೆ. ತನಿಖೆಯಲ್ಲಿ ಸರಿಯಾದ ಮಾಹಿತಿ ಸಿಗುತ್ತದೆ ಎಂದ ಅವರು, ಹಲ್ಲೆ ನಡೆದ ಸಂದರ್ಭದಲ್ಲಿ ಬಸ್‌ನಲ್ಲಿದ್ದ ಬೇರೆ ಪ್ರಯಾಣಿಕರ ಹೇಳಿಕೆ ಪಡೆಯುತ್ತೇವೆ. ಸುಳ್ಳು ಆರೋಪಗಳ ಕುರಿತು ಕೂಡ ತನಿಖೆ ಮಾಡುತ್ತೇವೆ. ನಾವು ಕೇಸ್ ತೆಗೆದುಕೊಳ್ಳದಿದ್ದರೆ ಅವರು ಬೇರೆ ಕಡೆ ಹೋಗುತ್ತಿದ್ದರು. ಹೀಗಾಗಿ ನಾವು ಕೇಸ್ ಪಡೆದು ತನಿಖೆ ಮಾಡುತ್ತೇವೆ. ಸತ್ಯಾಂಶ ಹೊರ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಹಾರಾಷ್ಟ್ರದಲ್ಲಿ ಶಿವಸೇನೆ ಪುಂಡರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್‌ಗಳ ಮೇಲೆ ದಾಳಿ ನಡೆಸಿರುವ ಸಂಬಂಧ ಮಹಾರಾಷ್ಟ್ರ ಗಡಿಭಾಗದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆಗೆ ಮಾತನಾಡಲಾಗುವುದು ಎಂದು ಹೇಳಿದರು.