ಅಕ್ರಮ ಮರಳು ತಡೆಗೆ ಕರವೇ ಪ್ರತಿಭಟನಾ ಮೆರವಣಿಗೆ

| Published : Oct 25 2025, 01:00 AM IST

ಸಾರಾಂಶ

ಅಕ್ರಮದ ರೂವಾರಿಗಳಾಗಿರುವ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ತಕ್ಷಣಕ್ಕೆ ಇಲಾಖಾ ವಿಚಾರಣೆ ಕಾಯ್ದಿರಿಸಿ ಕರ್ತವ್ಯದಿಂದ ಅಮಾನತ್ತು ಮಾಡಬೇಕು

ಕೊಪ್ಪಳ: ಜಿಲ್ಲೆಯಲ್ಲಿ ಅನಧಿಕೃತ ಮರಳು ಹಾಗೂ ಮರಮ್ ಸಾಗಾಣಿಕೆ ತಡೆಗಟ್ಟದೇ, ಶಾಮೀಲಾಗಿ ಭ್ರಷ್ಟಾಚಾರ ನಡೆಸುತ್ತಿರುವ ಇಲಾಖೆ ಅಧಿಕಾರಿಗಳ ನಡೆ ಖಂಡಿಸಿ ತಪ್ಪಿತಸ್ಥರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ಕರ್ತವ್ಯದಿಂದ ಅಮಾನತ್ತು ಮಾಡಬೇಕು ಎಂದು ಕೊಪ್ಪಳ ನಗರದ ಕರವೇ ಸಂಘಟನೆ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಕ್ಷಣಾ ವೇದಿಕೆ ಕೊಪ್ಪಳ ಜಿಲ್ಲಾ ಘಟಕದಿಂದ ಶ್ರೀಕನಕದಾಸ ವೃತ್ತದಿಂದ ಅಶೋಕ ವೃತ್ತದವರೆಗೆ ಅಕ್ರಮ ಮರಳು ಹಾಗೂ ಮರಮ್ ಸಾಗಾಣಿಕೆ ವಿರುದ್ಧ ಪ್ರತಿಭಟನಾ ಮೆರವಣಿಗೆ ನೇತೃತ್ವ ವಹಿಸಿದ್ದ ಕರವೇ ಜಿಲ್ಲಾಧ್ಯಕ್ಷ ಬಿ.ಗಿರೀಶಾನಂದ ಮಾತನಾಡಿ, ಜಿಲ್ಲೆಯಲ್ಲಿ ಸು. ೮೫ ಕಿಮಿಗೂ ಹೆಚ್ಚು ತುಂಗಾಭದ್ರಾ ನದಿಯ ತಟವಿದ್ದು, ಸಾಕಷ್ಟು ಮರಳು ಶೇಖರಣೆಯಾಗುತ್ತಿದ್ದು, ಹಲವು ವರ್ಷಗಳಿಂದ ಕೆಲವು ಸ್ಥಳೀಯ ಜನಪ್ರತಿನಿಧಿಗಳ ಕುಮ್ಮಕ್ಕಿನಿಂದ ಜಿಲ್ಲೆಯಲ್ಲಿ ಎಗ್ಗಿಲ್ಲದೇ ಅಕ್ರಮವಾಗಿ ಅನಧಿಕೃತ ಮರಳು ಹಾಗೂ ಮರಮ್ ೧೦೦ ರಿಂದ ೧೫೦ ಟ್ರಕ್ ಗಳಲ್ಲಿ ಬೇರೆ ಜಿಲ್ಲೆಗಳಿಗೆ ಸಾಗಾಣಿಕೆಯಾಗುತ್ತಿದ್ದು, ಇದರಿಂದ ರಾಜ್ಯ ಸರ್ಕಾರಕ್ಕೆ ಅಪಾರ ಪ್ರಮಾಣದ ರಾಜಧನ ನಷ್ಟ ಉಂಟಾಗುತ್ತಿದೆ. ಇದರ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಕ್ರಮಕೈಗೊಳ್ಳದೇ ಕಳ್ಳ ಸಾಗಾಣೆಕೆ ತಡೆಗಟ್ಟದ ಇಲಾಖೆ ಅಧಿಕಾರಿಗಳ ನಡೆ ಖಂಡಿಸಿ ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಹಿರಿಯ ಶಾಸಕ ಬಸವರಾಜ ರಾಯರಡ್ಡಿ ಹಾಗೂ ಹೆಚ್ಚುವರಿ ನಿರ್ದೇಶಕರು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಉತ್ತರ ವಲಯ ಬಳ್ಳಾರಿ ಸರ್ಕಾರಕ್ಕೆ ಪತ್ರ ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದರೂ ಕೂಡಾ ಇಲ್ಲಿಯವರೆಗೆ ರಾಜ್ಯ ಸರ್ಕಾರ ಜಾಣ ಕುರುಡುತನಕ್ಕೆ ಜಾರಿರುವುದನ್ನು ಕರವೇ ಬಲವಾಗಿ ಖಂಡಿಸುತ್ತದೆ. ಈ ಕೂಡಲೇ ಅಕ್ರಮ ದಂಧೆಕೋರರ ಜತೆ ಶಾಮೀಲಾಗಿರುವ ಹಾಗೂ ಹಲವು ವರ್ಷಗಳಿಂದ ಇಲಾಖೆಯಲ್ಲಿ ಬಿಡುಬಿಟ್ಟು ಅಕ್ರಮದ ರೂವಾರಿಗಳಾಗಿರುವ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ತಕ್ಷಣಕ್ಕೆ ಇಲಾಖಾ ವಿಚಾರಣೆ ಕಾಯ್ದಿರಿಸಿ ಕರ್ತವ್ಯದಿಂದ ಅಮಾನತ್ತು ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಬಸನಗೌಡ ಪೋ. ಪಾಟೀಲ, ಜಿಲ್ಲಾ ಯುವಘಟಕ ಅಧ್ಯಕ್ಷ ಹನುಮಂತ ಬೆಸ್ತರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಮೂಗಿನ್, ತಾಲೂಕಾಧ್ಯಕ್ಷ ಗವಿಸಿದ್ದಪ್ಪ ಚಕ್ಕಡಿ, ಭಾಗ್ಯನಗರ ಅಧ್ಯಕ್ಷ ವಿರೇಶ ಮುಂಡಾಸದ, ರಮೇಶ ಚಂಡೂರು, ಶರಣಪ್ಪ ಮದಲಗಟ್ಟಿ, ಸೊಹೇಲ್, ಹನುಮಂತ ತಳಕಲ್, ಬಸವರಾಜ ಚಿಕೆನಕೊಪ್ಪ, ವಿನಾಯಕ ಪಾಸ್ತೆ, ಗುರುರಾಜ ಮಾಳೊದಿ, ನವೀನ ಬೀಡನಾಳ, ಮಲ್ಲಪ್ಪ ತಳಕಲ್, ಈರಣ್ಣ ಭಜಂತ್ರಿ, ಮಲ್ಲೇಶಪ್ಪ ಕೊಪ್ಪಳ, ಗವಿಸಿದ್ದಪ್ಪ ನಿರದೊಡ್ಡಿ, ಈರಣ್ಣ ಒಜನಳ್ಳಿ, ಹನುಮಂತ ಕಿಟಗೇರಿ, ಗುರುರಾಜ ಅಂಗಡಿ, ನಾಗರಾಜ ದದೇಗಲ್ ಹಾಗೂ ಅನೇಕರು ಭಾಗವಹಿಸಿದ್ದರು.