ಹಾವೇರಿ: ಕಾವೇರಿ ನೀರು ನಿರ್ವಹಣಾ ಸಮಿತಿಯ ಆದೇಶವನ್ನು ಖಂಡಿಸಿ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡಬಾರದಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣಕುಮಾರ ಶೆಟ್ಟಿ ಬಣದ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ವೇದಿಕಿಯ ಜಿಲ್ಲಾದ್ಯಕ್ಷ ಮಂಜುನಾಥ ಓಲೇಕಾರ ಮಾತನಾಡಿ, ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ಸಂಪೂರ್ಣ ಕೈ ಕೊಟ್ಟಿದ್ದು ಕಳೆದ ಎರಡು ದಿನಗಳಿಂದ ರಾಜ್ಯದ ಮಲೆನಾಡು ಭಾಗದಲ್ಲಿ ಸಾಧಾರಣ ಮಳೆ ಬರುತ್ತಿರುವುದರಿಂದ ಕೆಲವೊಂದು ಜಲಾಶಯಗಳಿಗೆ ನೀರು ಹರಿದು ಬರುತ್ತಿವೆ. ಈ ವರ್ಷ ಭೀಕರ ಬರಗಾಲ ಬರುವ ಪರಿಸ್ಥಿತಿ ನಿರ್ಮಾಣವಾಗುವ ಎಲ್ಲಾ ಲಕ್ಷಣಗಳು ಗೊಚರಿಸುತ್ತಿವೆ. ಆ ಕಾರಣದಿಂದ ರಾಜ್ಯದ ಯಾವುದೆ ಜಲಾಶಯದಿಂದ ಪರ ರಾಜ್ಯಕ್ಕೆ ನೀರು ಹರಿಸಬಾರದೆಂದು ಮನವಿ ಮಾಡಿದರು. ತಮಿಳುನಾಡು ಸರ್ಕಾರದ ಕಾನೂನು ಸಚಿವರಾದ ನಿರ್ಮಲ್ ಕುಮಾರ್ ಅವರು ನಮ್ಮ ಪಾಲಿನ ೧೭ ಟಿಎಂಸಿ ನೀರು ಬೇಕೇ ಬೇಕು ಎಂದು ಹೇಳುತ್ತಿರುವುದು ಸರಿಯಲ್ಲ. ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಹಿತ ದೃಷ್ಟಿಯಿಂದ ತಮಿಳುನಾಡಿಗೆ ಕಾವೇರಿ ನದಿ ನೀರನ್ನು ಹರಿಸಬಾರದು. ತಮಿಳುನಾಡು ಸರ್ಕಾರ ಅಲ್ಲಿ ರೈತರ ಬೆಳೆಗಳಿಗೆ ನೀರನ್ನು ಕೇಳುತ್ತಿದೆ. ನಮ್ಮ ರಾಜ್ಯದ ಜನತೆ ಕುಡಿಯಲು ನೀರನ್ನು ಕೇಳುತ್ತಿದ್ದಾರೆ. ಬೆಂಗಳೂರಿನಲ್ಲಿ ವಾಸ ಮಾಡುತ್ತಿರುವ ಜನ ಕುಡಿಯುವ ನೀರಿಗಾಗಿ ಕಾವೇರಿ ನದಿ ನೀರನ್ನು ನಂಬಿ ಕುಂತಿದ್ದಾರೆ. ಯಾವುದೇ ಕಾರಣಕ್ಕೂ ಕಾವೇರಿ ನದಿಯಿಂದ ಒಂದು ಹನಿ ನೀರನ್ನು ತಮಿಳುನಾಡಿಗೆ ಹರಿಸಬಾರದು ಎಂದು ಆಗ್ರಹಿಸಿದರು.ಮೆಕೇದಾಟು ವಿಷಯವಾಗಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಜೊತೆ ಮಾತುಕತೆ ಅಗತ್ಯವಿಲ್ಲ ಕೂಡಲೇ ಡಿಪಿಆರ್ ಸಿದ್ದಪಡಿಸಿ ಜಲ ಆಯೋಗದ ಮುಂದಿಡಬೇಕು ಇಲ್ಲವಾದರೆ ಆ.೧೩ರಂದು ಕರ್ನಾಟಕ ರಾಜ್ಯ ಸಂಪೂರ್ಣವಾಗಿ ಸ್ತಬ್ದವಾಗುವುದರಲ್ಲಿ ಎರಡು ಮಾತಿಲ್ಲ ಎಂದು ಎಚ್ಚರಿಸಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘಟನೆ ಪ್ರಮುಖರಾದ ಪುಟ್ಟಪ್ಪ ಹಿತ್ತಲಮನಿ, ಮಾರುತಿ ಹಾಲಗಿ, ಶಿವಾನಂದ ಓಲೇಕಾರ, ಮಹಾದೇವಪ್ಪ ಹೆಡಿಗೊಂಡ, ಕುಮಾರ ಸುಳ್ಳನವರ, ಅನುಸುಯಾ ಸಿದ್ದಪ್ಪಳವರ, ಮೌಲಾಸಾಬ ನದಾಫ, ಯುವರಾಜ ನವಲಗುಂದ, ಭರಮಪ್ಪ ಡಮ್ಮಳ್ಳಿ, ಪವನ ವಡ್ಡರ, ಮಾಂತೇಶ ಶಿಗ್ಗಟ್ಟಿ, ಸುರೇಶ ಲಚಮಣ್ಣನವರ, ರಮೇಶ ದಾಸಪ್ಪನವರ, ರಾಜಕುಮಾರ ದೊಡ್ಡಮನಿ, ಲಕ್ಷಿö್ಮ ಗಂಗಣ್ಣನವರ, ಅನುಪೂರ್ಣ ವಡ್ಡಟ್ಟಿ ಇತರರು ಇದ್ದರು.