ಇಂಗ್ಲಿಷ್ ನಾಮಫಲಕ ತೆರವಿಗೆ ಒತ್ತಾಯಿಸಿ ಕರವೇ ಪ್ರತಿಭಟನೆ

| Published : Mar 06 2024, 02:18 AM IST / Updated: Mar 06 2024, 03:01 PM IST

ಇಂಗ್ಲಿಷ್ ನಾಮಫಲಕ ತೆರವಿಗೆ ಒತ್ತಾಯಿಸಿ ಕರವೇ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಇಂಗ್ಲಿಷ್‌ ನಾಮಫಲಕ ತೆರವುಗೊಳಿಸುವಂತೆ ಆಗ್ರಹಿಸಿ ಮಂಗಳವಾರ ಜಿಲ್ಲಾ ಕರವೇ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಟನಾ ಮೆರವಣಿಗೆ ಅವಳಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವ್ಯಾಪಾರಸ್ಥರು, ಸಾರ್ವಜನಿಕರಲ್ಲಿ ಈ ಕುರಿತು ಜಾಗೃತಿ ಮೂಡಿಸಲಾಯಿತು.

ಗದಗ: ಇಂಗ್ಲಿಷ್‌ ನಾಮಫಲಕ ತೆರವುಗೊಳಿಸುವಂತೆ ಆಗ್ರಹಿಸಿ ಮಂಗಳವಾರ ಜಿಲ್ಲಾ ಕರವೇ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಟನಾ ಮೆರವಣಿಗೆ ಅವಳಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವ್ಯಾಪಾರಸ್ಥರು, ಸಾರ್ವಜನಿಕರಲ್ಲಿ ಈ ಕುರಿತು ಜಾಗೃತಿ ಮೂಡಿಸಲಾಯಿತು. ನಗರದ ತೋಂಟದಾರ್ಯ ಮಹಾದ್ವಾರದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ನಗರದ ಮಹೇಂದ್ರಕರ ಸರ್ಕಲ್ ಸೇರಿದಂತೆ ವಿವಿಧೆಡೆ ಜರುಗಿತು. ಅನ್ಯ ಭಾಷೆ ನಾಮಲಕ ತೆರವುಗೊಳಿಸುವಂತೆ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ಕೆಲವೆಡೆ ಎಚ್ಚರಿಕೆಯನ್ನು ನೀಡಿದರು. ವಿವಿಧ ಅಂಗಡಿಗಳ ಮೇಲೆ ಅಳವಡಿಸಿದ ಅನ್ಯ ಭಾಷೆಯ ನಾಮಫಲಕವನ್ನು ಬಲವಂತವಾಗಿ ಕರವೇ ಕಾರ್ಯಕರ್ತರು ತೆರವುಗೊಳಿಸಲು ಮುಂದಾದರು. ಇನ್ನು ಕೆಲವೆಡೆ ತೆರವು ಕೂಡಾಗೊಳಿಸಿದರು. ಈ ವೇಳೆ ಅಂಗಡಿ ಮಾಲೀಕರು ಮತ್ತು ಕರವೇ ಕಾರ್ಯಕರ್ತರ ನಡುವೆ ವಾಗ್ವಾದ, ಮಾತಿನ ಚಕಮಕಿ ಜರುಗಿತು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರಾದರೂ ಕರವೇ ಕಾರ್ಯಕರ್ತರು ಮತ್ತು ಪೊಲೀಸರ ನಡುವೇಯ ತೀವ್ರ ವಾಗ್ವಾದ ನಡೆಯಿತು. ಈ ವೇಳೆ ಕಾರ್ಯಕರ್ತರನ್ನು ಬಂಧಿಸಲು ಪೊಲೀಸರು ಮುಂದಾಗುತ್ತಿದ್ದಂತೆ ಕರವೇ ಕಾರ್ಯಕರ್ತರು ಬಂಧನ ವಿರೋಧಿಸಿ ರಸ್ತೆಯಲ್ಲಿಯೇ ಕುಳಿತು ಪ್ರತಿಭಟನೆ ಮಾಡಲು ಮುಂದಾದರು. ಈ ವೇಳೆಯಲ್ಲಿ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ನೂಕಾಟ ತಳ್ಳಾಟವೂ ನಡೆಯಿತು. ಇದರಿಂದ ಆಕ್ರೋಶಗೊಂಡ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿ ನಂತರ ಬಿಡುಗಡೆಗೊಳಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಶರಣು ಗೋಡಿ, ಹನುಮಂತ ಅಬ್ಬಿಗೇರಿ, ನಿಂಗನಗೌಡ ಮಾಲಿಪಾಟೀಲ, ಹನುಮಂತ ಪೂಜಾರ, ಬಸವರಾಜ ಹೊಗೆಸೊಪ್ಪಿನ, ಲೋಕೇಶ ಸುತಾರ, ನಾಗಪ್ಪ ಅಣ್ಣಿಗೇರಿ, ಭರಮಣ್ಣ ಕಿಲಾರಿ, ಚೇತನ್ ಕಣವಿ, ಶ್ರೀಮತಿ ಆಶಾ ಜೂಲಗುಡ್ಡ, ಶರಣಪ್ಪಗೌಡ ಕರಮುಡಿ, ವಿನಾಯಕ ಬದಿ, ರಾಮನಗೌಡ ಹಳೆಮನಿ, ನಬಿಸಾಬ್ ಕಿಲ್ಲೇದಾರ, ನಾಗೇಶ ಅಮರಾಪುರ, ಪ್ರಕಾಶ್ ಸಂದಿಗೌಡ್ರ, ಯಲ್ಲಪ್ಪ ಬೋವಿ, ದಾವಲಸಾಬ ತಹಸೀಲ್ದಾರ್ ಮುಂತಾದವರು ಹಾಜರಿದ್ದರು.

ಗದಗ ನಗರದ ವ್ಯಾಪಾರಸ್ಥರಲ್ಲಿ ಅನ್ಯ ಭಾಷೆಯ ಫಲಕಗಳನ್ನು ತೆರವು ಮಾಡಲು ವಿನಯಪೂರ್ವಕ ಮನವಿ ಮಾಡಿಕೊಳ್ಳಲಾಗಿತ್ತು. ಹೀಗಿದ್ದರೂ, ನಾಮ ಫಲಕ ಅಳವಡಿಸಿದ್ದರು. ಅದಕ್ಕಾಗಿ ಪ್ರತಿಭಟನೆ ಮುಂದುವರಿಸಲಾಗುವುದು. ಈ ಪ್ರತಿಭಟನೆ ರಾಜ್ಯಾದ್ಯಂತ ನಡೆಯುತ್ತಿದೆ ಕರವೇ ಜಿಲ್ಲಾಧ್ಯಕ್ಷ ಶರಣು ಗೋಡಿ ತಿಳಿಸಿದ್ದಾರೆ.