ಸಾರಾಂಶ
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಜೈ ಜವಾನ್ ಮಾಜಿ ಸೈನಿಕರ ಸಂಘದ ವತಿಯಿಂದ ಕಾರ್ಗಿಲ್ ದಿನಾಚರಣೆಯನ್ನು ಪತ್ರಿಕಾ ಭವನದಲ್ಲಿ ಶನಿವಾರ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಾಜಿ ಸಚಿವ ಅಪ್ಪಚ್ಚು ರಂಜನ್ ಪುಷ್ಪನಮನ ಸಲ್ಲಿಸಿದರು. ನಂತರ ಮಾತನಾಡಿ, ದೇಶಕ್ಕೆ ಪಾಕಿಸ್ತಾನ ಮಗ್ಗುಲ ಮುಳ್ಳಾಗಿದೆ. ಒಂದಲ್ಲ ಒಂದು ರೀತಿಯಲ್ಲಿ ನಮ್ಮ ದೇಶಕ್ಕೆ ತೊಡಕನ್ನು ಮಾಡುತ್ತಾ ಬಂದಿದ್ದು, ಭಾರತ ಸರಿಯಾಗಿ ಎದುರುತ್ತರ ನೀಡಿದರೂ, ತನ್ನ ಚಾಳಿಯನ್ನು ಅದು ಬಿಡುತ್ತಿಲ್ಲ. ಈಚೆಗೆ ಪಹಲ್ಗಾಂನಲ್ಲಿಯೂ ತನ್ನ ವರಸೆ ತೋರಿಸಿರುವ ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ ಹೆಸರಿನಲ್ಲಿ ಮೋದಿ ನೇತೃತ್ವದಲ್ಲಿ ಸರಿಯಾದ ಎದಿರೇಟು ನೀಡಿದೆ ಎಂದರು.ದೇಶದಲ್ಲಿ ಮಾಜಿ ಪ್ರಧಾನಿ ವಾಜಪೇಯಿ ಮತ್ತು ಇಂದಿನ ಪ್ರಧಾನಿ ನರೇಂದ್ರ ಮೋದಿಯವರ ನೀತಿಯಿಂದಾಗಿ ಸಾಕಷ್ಟು ಯುವಕರ ಸೇನೆಗೆ ಸೇರಲು ಹೆಚ್ಚಿನ ಸಂಖ್ಯೆಯಲ್ಲಿ ಮುಂದಾಗುತ್ತಿದ್ದಾರೆ. ದೇಶ ರಕ್ಷಣೆಯಲ್ಲಿ ತೊಡಗಿರುವ ಸೈನಿಕರಿಗೆ ಗೌರವ ಸಲ್ಲಿಸುವ ಮೂಲಕ, ಎಲ್ಲರೂ ರಾಷ್ಟ್ರ ಪ್ರೇಮ ಮತ್ತು ರಾಷ್ಟ್ರ ಭಕ್ತಿಯನ್ನು ಮೈಗೂಡಿಸಿಕೊಳ್ಳುವ ಮೂಲಕ ಸುಭದ್ರ ದೇಶ ಕಟ್ಟಲು ಎಲ್ಲರೂ ಮುಂದಾಗಬೇಕೆಂದರು.ಜೈ ಜವಾನ್ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಿ.ಆರ್. ಈರಪ್ಪ ಮಾತನಾಡಿ, ಎಲ್ಲ ದೇಶಗಳಲ್ಲೂ ದ್ವಿಪಕ್ಷೀಯ ಒಪ್ಪಂದಗಳು ಏರ್ಪಟ್ಟು ಅದನ್ನು ಪಾಲಿಸುತ್ತಾ ಬರುತ್ತಿವೆ. ಆದರೆ, ನೆರೆಯ ಪಾಕಿಸ್ತಾನ ಮಾತ್ರ ಒಪ್ಪಂದವನ್ನು ಮುರಿದು ಫೆಬ್ರವರಿ ತಿಂಗಳ ಹಿಮ ಬೀಳುವ ಸಂದರ್ಭವನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಕಾರ್ಗಿಲ್ ಯುದ್ದಕ್ಕೆ ನಾಂದಿ ಹಾಡಿ ತಕ್ಕಶಾಸ್ತಿ ಮಾಡಿಸಿಕೊಂಡಿತು. ಕ್ಯಾ. ವಿಕ್ರಮ್ ಭಾತ್ರನಂತಹ ಕೆಚ್ಚೆದೆಯ ನಾಯಕರನ್ನ ನಾವು ಕಳೆದುಕೊಳ್ಳಬೇಕಾಯಿತು. ತಮ್ಮ ಜೀವದ ಹಂಗನ್ನು ತೊರೆದು ದೇಶಕ್ಕಾಗಿ ಪ್ರಾಣ ನೀಡಿದ ಎಲ್ಲರಿಗೂ ಗೌರವ ಸಮರ್ಪಣೆ ಮಾಡಬೇಕಾಗಿದೆ ಎಂದರು.ಕಾರ್ಯಕ್ರಮದಲ್ಲಿ ಸಿಆರ್‌ಪಿಎಫ್‌ನ ಮಾಜಿ ಡೆಪ್ಯೂಟಿ ಕಮಾಡೆಂಟ್ ಮಂಜುನಾಥ್, ಸೈನಿಕ ತರಬೇತುದಾರ ಚಂದ್ರಶೇಖರ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.