ಸಾರಾಂಶ
ಮೆರವಣೆಗೆ ಸಾಗುವಾಗ ದೇಶಭಕ್ತಿಯ ಜಯಘೋಷ ಮೊಳಗಿತು.
ಹೊನ್ನಾವರ: ಅಖಿಲ ಕರ್ನಾಟಕ ಮಾಜಿ ಸೈನಿಕರ ಘಟಕದಿಂದ ಪಟ್ಟಣದಲ್ಲಿ 26ನೇ ವರ್ಷದ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ತಿರಂಗಾ ಮೆರವಣಿಗೆ ಜರುಗಿತು.
ಬೃಹತ್ ತಿರಂಗಾ ಮೆರವಣೆಗೆಯು ಪಟ್ಟಣದ ಶರಾವತಿ ಸರ್ಕಲ್ ಮೂಲಕ ಪಟ್ಟಣದ ವಿವಿಧೆಡೆ ಸಂಚರಿಸಿ ನ್ಯೂ ಇಂಗ್ಲೀಷ್ ಸಮೀಪ ಸಮಾರೋಪಗೊಂಡಿತು. ಮೆರವಣೆಗೆ ಸಾಗುವಾಗ ದೇಶಭಕ್ತಿಯ ಜಯಘೋಷ ಮೊಳಗಿತು. ನಂತರ ನ್ಯೂ ಇಂಗ್ಲೀಷ್ ಸ್ಕೂಲ್ ಸಭಾಭವನದಲ್ಲಿ ನಡೆದ ಕಾರ್ಗಿಲ್ ವೀರ ಯೋಧರಿಗೆ ಪುಷ್ಪನಮನದ ಮೂಲಕ ಗೌರವ ಸಲ್ಲಿಸಲಾಯಿತು. ದೇಶಸೇವೆಗಾಗಿ ಹುತಾತ್ಮರಾದ ಯೋಧರಿಗೆ ಮೌನಾಚರಣೆಯ ಗೌರವ ಸಲ್ಲಿಸಲಾಯಿತು.ಮಾಜಿ ಸೈನಿಕ ಸಂಘದ ತಾಲೂಕು ಅಧ್ಯಕ್ಷ ಅಶೋಕ ನಾಯ್ಕ ಮಾತನಾಡಿ, ಕಾರ್ಗಿಲ್ ಪ್ರದೇಶದಲ್ಲಿ ಮೂರು ತಿಂಗಳ ಬಳಿಕ ನೆರೆಯ ಪಾಕಿಸ್ತಾನದವರು ನಮ್ಮ ಯೋಧರ ಮೇಲೆ ಗುಂಡಿನ ದಾಳಿ ನಡೆಸಿತು. ಸರಿಸುಮಾರು ಮೂರು ತಿಂಗಳ ಬಳಿಕ ಜುಲೈ 26ರಂದು ಯುದ್ದದಲ್ಲಿ ಭಾರತವು ಗೆಲ್ಲುವ ಸಾಧಿಸಿತು. ಅಂದಿನಿಂದ ದೇಶದೆಲ್ಲಡೆ ಈ ದಿನವನ್ನು ಸಂಭ್ರಮಾಚರಣೆ ಮಾಡಲಾಗುತ್ತಿದೆ ಎಂದರು.
ಯುವ ಬ್ರಿಗೇಡ್ ಕಾರ್ಯಕರ್ತ ಮಹೇಶ ಕಲ್ಯಾಣಪುರ ಮಾತನಾಡಿ, ಕಾರ್ಗಿಲ್ ವಿಜಯೋತ್ಸವ ಒಂದು ದಿನದ ಸಂಭ್ರಮಾಚರಣೆಯಲ್ಲ. ಪ್ರತಿದಿನ ಭಾರತೀಯರು ಸಂಭ್ರಮಿಸಬೇಕಾಗಿದೆ ಎಂದರು.ನಿವೃತ್ತ ಸೈನಿಕರಾದ ತಿಮ್ಮಪ್ಪ ಗೌಡ ಸೈನ್ಯಕ್ಕೆ ಸೇರಲು ಇರುವ ಅವಕಾಶ ಬಗ್ಗೆ ಮಾಹಿತಿ ನೀಡಿ ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ರಾಜು ಮಾಳಗಿಮನಿ, ಬಿಜೆಪಿ ತಾಲೂಕು ಅಧ್ಯಕ್ಷ ಮಂಜುನಾಥ ನಾಯ್ಕ, ಹೊನ್ನಾವರ ಉಳಿಸಿ ಬೆಳೆಸಿ ಸಂಘಟನೆಯ ಅಧ್ಯಕ್ಷ ಜಿ.ಎನ್.ಗೌಡ, ರಾಜು ಭಂಡಾರಿ, ಪಪಂ ಸದಸ್ಯ ಶಿವರಾಜ ಮೇಸ್ತ ಇದ್ದರು. ಮಾಜಿ ಸೈನಿಕ ರಾಜೇಶ ನಾಯ್ಕ ಸ್ವಾಗತಿಸಿದರು. ರವಿ ನಾಯ್ಕ ವಂದಿಸಿದರು. ದಿನೇಶ ಕಾಮತ್ ಕಾರ್ಯಕ್ರಮ ನಿರ್ವಹಿಸಿದರು.