ಕನಕಗಿರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆಯಲ್ಲಿ ೨೭ನೇ ಕಾರ್ಗಿಲ್ ವಿಜಯ ದಿವಸ್‌ನ್ನು ಭಾನುವಾರ ಆಚರಿಸಲಾಯಿತು.
ಕನಕಗಿರಿ: ಇಲ್ಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆಯಲ್ಲಿ ೨೭ನೇ ಕಾರ್ಗಿಲ್ ವಿಜಯ ದಿವಸ್‌ನ್ನು ಭಾನುವಾರ ಆಚರಿಸಲಾಯಿತು.
ಸರ್ ಎಂ. ವಿಶ್ವೇಶ್ವರಯ್ಯ ಸಂಯುಕ್ತ ಪ.ಪೂ. ಕಾಲೇಜಿನ ಪ್ರಾಂಶುಪಾಲ ಲಕ್ಷ್ಮಣಸಿಂಗ್ ವಗರನಾಳ ಮಾತನಾಡಿ, ಶತ್ರು ರಾಷ್ಟ್ರ ಪಾಕಿಸ್ತಾನಿ ಸೈನಿಕರು ವಶಪಡಿಸಿಕೊಂಡಿದ್ದ ಜಮ್ಮು-ಕಾಶ್ಮೀರದ ಕಾರ್ಗಿಲ್ ಶಿಖರಗಳನ್ನು ಭಾರತ ದೇಶಕ್ಕೆ ವಾಪಸ್ ಪಡೆಯಲು ಆಪರೇಷನ್ ವಿಜಯ್ ಹೆಸರಿನಲ್ಲಿ ೧೯೯೯ರ ಮೇ ತಿಂಗಳಿನಲ್ಲಿ ಭಾರತವು ಯುದ್ಧಕ್ಕೆ ಇಳಿಯಿತು. ನಮ್ಮ ದೇಶ ಹಾಗೂ ಪಾಕಿಸ್ತಾನ ನಡುವೆ ಸುಮಾರು ೨ ತಿಂಗಳು ಕಾಲ ಯುದ್ಧ ನಡೆಯಿತು. ಈ ಯುದ್ಧದಲ್ಲಿ ನಮ್ಮ ಸೈನಿಕರು ಅಸಾಮಾನ್ಯ ಸಾಧನೆ ತೋರಿದ್ದು, ಹಲವು ಯೋಧರು ವೀರಮರಣ ಅಪ್ಪಿದರು. ಅವರ ತ್ಯಾಗ, ಬಲಿದಾನ ಜು. ೨೬, ೧೯೯೯ರಲ್ಲಿ ಭಾರತ ದೇಶ ಯುದ್ಧದಲ್ಲಿ ಗೆಲ್ಲುವ ಮೂಲಕ ಸಾರ್ಥಕತೆ ಪಡೆದುಕೊಂಡಿತು. ಪಾಕಿಸ್ತಾನವನ್ನು ಸದೆಬಡೆದು ಕಾರ್ಗಿಲ್ ಅನ್ನು ಗೆಲ್ಲುವುದಲ್ಲದೇ, ಕಾರ್ಗಿಲ್ ಹೋರಾಟದ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಲು ಹಾಗೂ ದೇಶದ ಜನತೆಯಲ್ಲಿ ದೇಶಪ್ರೇಮ ಹಾಗೂ ರಾಷ್ಟ್ರೀಯ ಭಾವನೆಯನ್ನು ಮೂಡಿಸಲು ಪ್ರತಿ ವರ್ಷ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಲಾಗುತ್ತಿದೆ ಎಂದರು.ಅದರಂತೆ ಕನಕಗಿರಿ ಪಟ್ಟಣದ ಸುತ್ತಮುತ್ತಲಿನ ಯುವಕರು ಸೇನೆಗೆ ಸೇರಲು ಸಿದ್ಧವಾಗುತ್ತಿರುವುದು ಖುಷಿಯ ವಿಚಾರವಾಗಿದೆ. ಯುವಕರು ವೀರಯೋಧರಾಗಿ ಪಾಲಕರ, ನಾಡಿನ ಹೆಸರನ್ನು ತರಲು ಮುಂದಾಗಬೇಕು ಎಂದು ತಿಳಿಸಿದರು.
ಮೇಲ್ವಿಚಾರಕ ಮಲ್ಲಯ್ಯ ಗೋಮರ್ಸಿ ಅಧ್ಯಕ್ಷತೆ ವಹಿಸಿದ್ದರು. ಕ್ಯಾಪ್ಟನ್ ಪುಂಡಪ್ಪ ಅಡವಳ್ಳಿ, ಮಾಜಿ ಸೈನಿಕರಾದ ರವಿ ದೇಸಾಯಿ, ರವಿ ತಾಳಿ, ಶಿಕ್ಷಕರಾದ ಕುಮಾರ್ ದಶರಥ ಹುಲಿಹೈದರ್, ವೆಂಕಟೇಶ, ಶಿವಲೀಲಾ ತೋಳದ ಭಾಗವಹಿಸಿದ್ದರು.ಹುತಾತ್ಮ ಸೈನಿಕರ ಸ್ಮರಣೆಗಾಗಿ ಕಾರ್ಗಿಲ್ ವಿಜಯ್ ದಿವಸ್
ಕಾರ್ಗಿಲ್ ವಿಜಯ್ ದಿವಸ್ ಸ್ವತಂತ್ರ ಭಾರತದ ಎಲ್ಲ ದೇಶವಾಸಿಗಳಿಗೆ ಮುಖ್ಯವಾದ ದಿನವಾಗಿದೆ ಎಂದು ಮುಖಂಡ ಡಾ. ಶಿವನಗೌಡ ದಾನರಡ್ಡಿ ಹೇಳಿದರು.ಪಟ್ಟಣದ ಬಯಲ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯೋತ್ಸವ ಹಾಗೂ ೧೨ನೇ ವರ್ಷದ ಮಾಜಿ ಸೈನಿಕರ ವರ್ಷಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸುಮಾರು ೬೦ ದಿನಗಳ ಕಾಲ ನಡೆದ ಕಾರ್ಗಿಲ್ ಯುದ್ಧದಲ್ಲಿ ಹಲವಾರು ಸೈನಿಕರು ಹುತಾತ್ಮರಾದರು. ೧೯೯೯ರಲ್ಲಿ ನಡೆದ ಯುದ್ಧದಲ್ಲಿ ಭಾರತ ವಿಜಯಶಾಲಿಯಾದ ನೆನಪಿಗೆ ಮತ್ತು ಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಸೈನಿಕರ ಸ್ಮರಣೆಗಾಗಿ ಜು. ೨೬ನ್ನು ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಗುತ್ತದೆ ಎಂದರು.ಯಲಬುರ್ಗಾ ಪಟ್ಟಣದಲ್ಲಿ ಮಾಜಿ ಸೈನಿಕರಿಗಾಗಿ ಕಟ್ಟಡ ನಿರ್ಮಿಸಲು ನಮ್ಮ ಸ್ವಂತ ನಿವೇಶನ ಒದಗಿಸಿಕೊಡಲಾಗಿದೆ. ಮಾಜಿ ಸೈನಿಕರು ಯುವಕರಿಗೆ ತರಬೇತಿ ನೀಡಿ ಸೈನಿಕರನ್ನಾಗಿ ತಯಾರು ಮಾಡಲು ಸಿದ್ಧರಾಗಿದ್ದಾರೆ ಎಂದರು.ಮಾಜಿ ಸೈನಿಕರ ಸಂಘದ ತಾಲೂಕಾಧ್ಯಕ್ಷ ಶಿವನಗೌಡ ಬನಪ್ಪಗೌಡ್ರ, ಸಿಪಿಐ ಮೌನೇಶ್ವರ ಮಾಲಿಪಾಟೀಲ್, ವೀರಣ್ಣ ಹುಬ್ಬಳ್ಳಿ ಮಾತನಾಡಿದರು.ಬುಡ್ನೆಸಾಬ್ ನಾಯಕ, ಟಿ.ಎಸ್. ಕರ್ನಲ್, ಪಿಎಸ್ಐ ವಿಜಯ ಪ್ರತಾಪ್, ನೂರುದ್ದೀನ್‌ಸಾಬ್ ಕುಕನೂರ, ಮರ್ತುಜಾಸಾಬ್ ನೂರಬಾಷಾ, ಎ.ಎಂ. ಗಾಣಿಗೇರ, ಮಲ್ಲಪ್ಪ ಸರ್ವೆ ಇದ್ದರು.