ಕಾಪು: 1999ರ ಕಾರ್ಗಿಲ್ ಯುದ್ಧದಲ್ಲಿ ಭಾರತ ದೇಶದ ಪರವಾಗಿ ಯೋಧನಾಗಿ ಸೇವೆ ಸಲ್ಲಿಸಿದ ದಿನಗಳು ಅಪೂರ್ವ ಹಾಗೂ ರೋಮಾಂಚನವನ್ನುಂಟು ಮಾಡುತ್ತದೆ. ಕಾರ್ಗಿಲ್ ಹೋರಾಟದ ದಿನಗಳು ನನ್ನ ಜೀವಮಾನದ ಸರ್ವಶ್ರೇಷ್ಠ ಹೆಮ್ಮೆಯ ಕ್ಷಣಗಳಾಗಿವೆ ಎಂದು ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಯೋಧ ಅನಂತಪದ್ಮನಾಭ ನಾಯಕ್ ಹೇಳಿದರು.
ಕಾರ್ಗಿಲ್ ದಿವಸದ ಪ್ರಯುಕ್ತ ಇಲ್ಲಿನ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶತಮಾನೋತ್ಸವ ಸಂದರ್ಭ ನಿರ್ಮಿಸಿದ ‘ಅಮರ್ ಜವಾನ್’ ಸ್ಮಾರಕಕ್ಕೆ ಗೌರವ ಸಲ್ಲಿಸಿ ಮಾತನಾಡಿದರು.ಈ ಸಂದರ್ಭ ಮಾಜಿ ಸೈನಿಕ ರಾಜೇಂದ್ರ ಪಾಟ್ಕರ್, ರೋಬಾರ್ಟ್ ಮೆಂಡೋನ್ಸಾ ಅವರು ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಶಶಿಧರ ವಾಗ್ಲೆ ಮಾತನಾಡಿ, ಕಾರ್ಗಿಲ್ ದಿವಸ ಆಚರಣೆಯಿಂದ ವಿದ್ಯಾರ್ಥಿಗಳಲ್ಲಿ ನಮ್ಮ ದೇಶದ, ಸೈನಿಕರ ಬಗ್ಗೆ ಗೌರವ ಮೂಡಿಸುವ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಕೆ.ಆರ್. ಪಾಟ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಮಾಧವ ಕಾಮತ್, ಶಾಲಾ ಸಂಚಾಲಕ ರಾಮದಾಸ್ ಪ್ರಭು, ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ, ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ. ಪುಂಡಲೀಕ ಮರಾಠೆ, ಬಂಟಕಲ್ಲು ಶ್ರೀ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಉಮೇಶ ಪ್ರಭು ಪಾಲಮೆ, ಸೇವಾ ವೃಂದದ ಕಾರ್ಯದರ್ಶಿ ವಿಶ್ವನಾಥ್ ಬಾಂದೇಲ್ಕರ್, ನಾಗರಿಕ ಸಮಿತಿಯ ಡೆನಿಸ್ ಡಿಸೋಜ ಉಪಸ್ಥಿತರಿದ್ದು, ಹುತಾತ್ಮರಿಗೆ ನಮನ ಸಲ್ಲಿಸಿದರು.