ಆಟಿ ಅಮಾವಾಸ್ಯೆಯ ಪ್ರಯುಕ್ತ ಬಂಟ್ವಾಳ ತಾಲೂಕಿನ ಪ್ರಸಿದ್ಧ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನ ಹಾಗೂ ಐತಿಹಾಸಿಕ-ಪೌರಾಣಿಕ ಪ್ರಸಿದ್ಧಿಯ ನರಹರಿ ಪರ್ವತ ಶ್ರೀ ಸದಾಶಿವ ದೇವಸ್ಥಾನಗಳಲ್ಲಿ ಬುಧವಾರ ಶ್ರದ್ಧಾಭಕ್ತಿ ಮತ್ತು ಸಂಭ್ರಮದಿಂದ ವಿಶೇಷ ಧಾರ್ಮಿಕ ಕಾರ್ಯಕ್ರಮ ನೆರವೇರಿದವು.

ಬಂಟ್ವಾಳ: ಆಟಿ ಅಮಾವಾಸ್ಯೆಯ ಪ್ರಯುಕ್ತ ಬಂಟ್ವಾಳ ತಾಲೂಕಿನ ಪ್ರಸಿದ್ಧ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನ ಹಾಗೂ ಐತಿಹಾಸಿಕ-ಪೌರಾಣಿಕ ಪ್ರಸಿದ್ಧಿಯ ನರಹರಿ ಪರ್ವತ ಶ್ರೀ ಸದಾಶಿವ ದೇವಸ್ಥಾನಗಳಲ್ಲಿ ಬುಧವಾರ ಶ್ರದ್ಧಾಭಕ್ತಿ ಮತ್ತು ಸಂಭ್ರಮದಿಂದ ವಿಶೇಷ ಧಾರ್ಮಿಕ ಕಾರ್ಯಕ್ರಮ ನೆರವೇರಿದವು.

ಮುಂಜಾನೆಯಿಂದಲೇ ಸಾವಿರಾರು ಭಕ್ತರು ಎರಡೂ ಕ್ಷೇತ್ರಗಳಿಗೆ ಆಗಮಿಸಿ ಪವಿತ್ರ ತೀರ್ಥಸ್ನಾನ ಮಾಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆಯ ಅಂಗವಾಗಿ ವಿಶೇಷ ಪೂಜೆ, ಪ್ರಾರ್ಥನೆ ಹಾಗೂ ತೀರ್ಥಸ್ನಾನ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಅಮಾವಾಸ್ಯೆಯ ಪವಿತ್ರ ತೀರ್ಥಸ್ನಾನಕ್ಕಾಗಿ ಮುಂಜಾನೆ 3 ಗಂಟೆಯಿಂದಲೇ ಭಕ್ತರು ದೇವಸ್ಥಾನದತ್ತ ಆಗಮಿಸಲು ಆರಂಭಿಸಿದ್ದರು. ಬೆಳಗಾಗುತ್ತಿದ್ದಂತೆ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿ, ದೇವಸ್ಥಾನದ ಪರಿಸರದಲ್ಲಿ ಭಕ್ತರ ದಂಡೇ ಕಂಡುಬಂತು. ದೂರದ ಊರುಗಳಿಂದಲೂ ನೂರಾರು ಮಂದಿ ಕುಟುಂಬ ಸಮೇತರಾಗಿ ಆಗಮಿಸಿ ತೀರ್ಥಸ್ನಾನ ನೆರವೇರಿಸಿ ದೇವರ ದರ್ಶನ ಪಡೆದರು.

ನರಹರಿ ಪರ್ವತ ಶ್ರೀ ಸದಾಶಿವ ದೇವಸ್ಥಾನದಲ್ಲೂ ಆಟಿ ಅಮಾವಾಸ್ಯೆಯ ಪವಿತ್ರ ದಿನದ ಅಂಗವಾಗಿ ವಿಶೇಷ ತೀರ್ಥಸ್ನಾನ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು. ಆಟಿ ಅಮಾವಾಸ್ಯೆಯ ತೀರ್ಥಸ್ನಾನಕ್ಕೆ ವಿಶೇಷ ಮಹತ್ವವಿದೆ ಎಂಬ ನಂಬಿಕೆ ಹಿನ್ನೆಲೆಯಲ್ಲಿ ನಸುಕಿನ ಜಾವದಿಂದಲೇ ಊರ -ಪರವೂರುಗಳಿಂದ ಭಕ್ತರು ಕುಟುಂಬ ಸಮೇತರಾಗಿ ಕ್ಷೇತ್ರಕ್ಕೆ ಆಗಮಿಸಿದರು. ಪರ್ವತದ ಮೇಲಿರುವ ಪವಿತ್ರ ತೀರ್ಥಗಳಲ್ಲಿ ಸ್ನಾನ ಮಾಡಿ ಶ್ರೀ ಸದಾಶಿವನ ದರ್ಶನ ಪಡೆದರು.