ಬಿ.ಎಸ್.ಸುನೀಲ್

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಕಾರ್ಕಹಳ್ಳಿಯಲ್ಲಿ ಪುರಾಣ ಪ್ರಸಿದ್ಧ ಶ್ರೀಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ ನಡೆದಿದೆ.

ಮಾ.28 ರಂದು ಪಟ್ಟಲದಮ್ಮನ ಕೊಂಡೋತ್ಸವದೊಂದಿಗೆ ಹಬ್ಬಕ್ಕೆ ಚಾಲನೆ ದೊರತಿದೆ. ಮನೆ ದೇವರ ದೇವಾಲಯಗಳಲ್ಲಿ ಹೋಮ ನಡೆದು ಹಬ್ಬಕ್ಕೆ ಗ್ರಾಮವು ನವ ವಧುವಂತೆ ಸಿಂಗಾರಗೊಳ್ಳುತ್ತಿದೆ.

ಮುಜರಾಯಿ ಇಲಾಖೆಗೆ ದೇಗುಲ ಒಳಪಟ್ಟಿರುವ ಹಿನ್ನೆಲೆಯಲ್ಲಿ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಬ್ಬ ನಡೆಸಲು ಚಾಲನೆ ಸಿಕ್ಕಿದೆ. ಗ್ರಾಮಸ್ಥರು ಹಬ್ಬವನ್ನು ಸಂಭ್ರಮದಿಂದ ಆಚರಿಸಲು ತಯಾರಿ ನಡೆಸಿದ್ದಾರೆ.


ಮಾ.2ರಂದು ಸಂಜೆ ಬಂಡಿ ಉತ್ಸವ, ರಾತ್ರಿ ಅಗ್ನಿಕೊಂಡ, ಕರಗ ಬಾಯಿ ಬೀಗ ಹಾಗೂ ಚಿಕ್ಕರಸಿಕೆರೆ ಶ್ರೀ ಕಾಲಭೈರವೇಶ್ವರ ಸ್ವಾಮಿ, ತೊರೆ ಬೊಮ್ಮನಹಳ್ಳಿ ಶ್ರೀ ಪಟ್ಟಲದಮ್ಮ ಮತ್ತು ಕಾರ್ಕಹಳ್ಳಿ ಬಸವೇಶ್ವರ ಸ್ವಾಮಿ ದೇವರುಗಳ ಉತ್ಸವ ನಡೆಯಲಿದೆ.

ಮಾ.3 ರಂದು ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಅನ್ನ ಸಂತರ್ಪಣೆಯಲ್ಲಿ ಸಹಸ್ರಾರು ಭಕ್ತರು ಪ್ರಸಾದ ಸ್ವೀಕರಿಸಲಿದ್ದಾರೆ. ಜಾತ್ರಾ ಮಹೋತ್ಸವದ ಕೇಂದ್ರ ಬಿಂದು ರಥೋತ್ಸವವು ಮಾ.4ರ ಸಂಜೆ 4 ಗಂಟೆಗೆ, ಮಾ.5 ರಂದು ದೇವೇಗೌಡನದೊಡ್ಡಿ ಗ್ರಾಮದಲ್ಲಿ ಕಾರ್ಕಹಳ್ಳಿ ಶ್ರೀ ಬಸವೇಶ್ವರ ಉತ್ಸವವನ್ನು ಅದ್ದೂರಿಯಾಗಿ ನಡೆಸಲಾಗುವುದು. ಮಾ.8 ರಂದು ಶ್ರೀ ಮುತ್ತುರಾಯ ಸ್ವಾಮಿಯ ಸೇವೆ ಜರುಗಲಿದೆ.

ಹಬ್ಬದ ಹಿನ್ನೆಲೆ:

ಮೈಸೂರು ಜಿಲ್ಲೆಯ ಕಾರುಗಹಳ್ಳಿಯಲ್ಲಿ ಮೇರವೇಗೌಡ, ಹಂಚಿಗಯ್ಯ ಮತ್ತು ನಂಜಯ್ಯ ಎಂಬುವರು ಇದ್ದು ಅವರ ಮನೆಯಲ್ಲಿ ಎರಡು ಸೂರದ್ರೂಪಿ ಹೆಣ್ಣು ಮಕ್ಕಳಿದ್ದರು. ಅದೇ ಗ್ರಾಮದ ಕ್ಷೌರಿಕ ಸಮೂದಾಯದ ಯುವಕರು ಅವರನ್ನು ವಿವಾಹ ಮಾಡಿಕೊಳ್ಳಲು ಮುಂದಾದಾಗ ಮೇರೇವೇಗೌಡ ಕುಟುಂಬ ವಿರೋಧಿಸಿತು.

ಆದರೂ ಬೀಡದ ಅವರು ಮತ್ತೆ ವಿವಾಹ ಮಾಡಿ ಕೊಡಿ ಎಂದು ದುಂಬಾಲು ಬಿದ್ದರು. ಮೇರೇವೇಗೌಡನ ಕುಟುಂಬ ನಮ್ಮ ಹೆಣ್ಣು ಮಕ್ಕಳಿಗೆ ಏನಾದರು ಅನಾಹುತ ಸಂಭವಿಸಬಹುದು ಎಂದು ಅರಿತು ಕಾರುಗಳ್ಳಿಂದ ರಾತ್ರೋ ರಾತ್ರಿ ಮನೆ ಬಿಟ್ಟು ಕಾಡು ಮೇಡು ಅಲೆದು ಕೆ.ಎಂ.ದೊಡ್ಡಿ ಸಮೀಪದ 2 ಕೀ.ಮೀ ದಲ್ಲಿ ಒಂದು ಚಿಕ್ಕ ಮಠವಿತ್ತು ಅಲ್ಲಿ ಆಶ್ರಯ ಪಡೆದರು.

ಕಾಲ ಕ್ರಮೇಣ ಮನೆ ಕಟ್ಟಿ ಕೊಂಡು ಜೀವನ ನಡೆಸುತಿದ್ದರು. ಜೀವನೊಪಯಕ್ಕಾಗಿ ಮೂಡಲ ಸಿಮೇಗೆ ತೆರಳಿ ಎಣ್ಣೆ ಹರಳಿನ ವ್ಯಾಪರ ನಡೆಸುತ್ತ ಜೀವನ ನಡೆಸುತಿದ್ದರು. ಈ ವೇಳೆ ಒಂದು ಹುಣ್ಣಿಮೆ ದಿನ ನಂಜಯ್ಯ ಮತ್ತು ಮಂಚಿಗಯ್ಯ ವ್ಯಾಪರ ಮುಗಿಸುಕೊಂಡು ಹೋಗುತ್ತಿದ್ದಾಗ ಕತ್ತಲೆ ಆವರಿಸಿತು. ಆ ವೇಳೆ ಹಲಗೂರು ಸಮೀಪವಿರುವ ಕೆಮ್ಮಾಳು ಗ್ರಾಮದ ಕೆಂಡಗಣ್ಣು ಬಸವೇಶ್ವರ ದೇವಾಲಯದಲ್ಲಿ ತಂಗಿದರು.

ಮಧ್ಯ ರಾತ್ರಿ ನಾನು ಬರಲೆ ಎಂದು ಒಂದು ಧ್ವನಿ ಕೇಳಿಸಿತು. ಇದರಿಂದ ಹೆದರಿದ ಹಂಚಿಗಯ್ಯ ಗ್ರಾಮಕ್ಕೆ ತೆರಳಿ ನಡೆದ ವಿಚಾರವನ್ನು ಗುರು ಮಠದ ಗುರುಗಳಿಗೆ ತಿಳಿಸಿದನು. ಗುರುಗಳು ತಮ್ಮ ದಿವ್ಯಾ ದೃಷ್ಠಿಯಿಂದ ನೋಡಿ ನೀನು ಮತ್ತೆ ಅಲ್ಲಿಗೆ ಹೋಗಿ ಮಲಗು ಮತ್ತೆ ಅದೇ ಶಬ್ದವಾದರೆ ಹರಳಿನ ಮೂಟೆ ಬಿಚ್ಚಿ ದೇವರ ಗದ್ದುಗೆ ಮುಂದಿಡು ಬರುವದಾದರೆ ಈ ಚೀಲದಲ್ಲಿ ಬಂದು ಸೇರು ಎಂದನು. ಅದರಂತೆ ಮರು ದಿನ ಮಾಡಿದನು. ದೇವರು ಹರಳಿನ ಚೀಲದಲ್ಲಿ ಬಂದು ಸೇರಿತು. ಇದರಿಂದ ಸಂತೋಷಗೊಂಡು ಬಸಪ್ಪನನ್ನು ಒತ್ತು ಕೊಂಡು ಬಂದು ಗುರುಗಳಿಗೆ ವಿಷಯ ತಿಳಿಸಿದನು.

ಗುರುಗಳು ಪೂಜೆ ಪುನಸ್ಕಾರಗಳನ್ನು ನಡೆಸಿ ಬಸಪ್ಪನನ್ನು ತಮ್ಮ ದಿವ್ಯಾ ದೃಷ್ಟಿಯಿಂದ ನೇಮಕ ಮಾಡಿದರು. ಕಾಲಾ ಕ್ರಮೇಣ ದೇವಾಲಯ ಪ್ರಸಿದ್ದಿಯಾಗಿ ಬಸಪ್ಪ ಕಳ್ಳ ಕಾಕರಿಗೆ ಸಿಂಹ ಸ್ವಪ್ನವಾಗಿ ಕಾಡಿತು. ಕಾರುಗಹಳ್ಳಿ ಎಂದು ಕರೆಯುತ್ತುದ್ದು, ನಂತರ ದಿನಗಳಲ್ಲಿ ಕಾರುಕಹಳ್ಳಿಯಾಗಿ ಜನಜನಿತವಾಯಿತು. ದೇವೇಗೌಡನದೊಡ್ಡಿಯತು ಸಹ ಕಾರ್ಕಹಳ್ಳಿಯಿಂದ ಒಲಸೆ ಹೋದವರು ಎಂಬುವುದು ಪ್ರತೀತಿಯಿದೆ.

ಈಗಾಗಲೇ ಸರ್ಕಲ್ ಇನ್ಸ್ ಪೆಕ್ಟರ್ ಅನಿಲ್‌ಕುಮಾರ್ ನೇತೃತ್ವದಲ್ಲಿ ಯಾವುದೇ ಗಲಭೆಗಳಿಗೆ ಆಸ್ಪದ ನೀಡದಂತೆ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ಆಯೋಜಿಸಲಾಗಿದೆ.