ಸಾರಾಂಶ
ಕಾರ್ಕಳ: ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ನಾಯಕತ್ವ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ವೇದಿಕೆಯಾದ ಎನ್.ಎಸ್.ಎಸ್ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭ ಕಾರ್ಕಳ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಜರುಗಿತು.
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ರಾಷ್ಟ್ರೀಯ ಸೇವಾ ಯೋಜನೆಯಡಿ, ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ವತಿಯಿಂದ ‘ನಶಾ ಮುಕ್ತ ಭಾರತ ಅಭಿಯಾನ’ ಶೀರ್ಷಿಕೆಯಡಿ ಏಳು ದಿನಗಳ ಶಿಬಿರ ಆಯೋಜಿಸಲಾಗಿತ್ತು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಪನಿರ್ದೇಶಕ (ಪದವಿ ಪೂರ್ವ) ಮಾರುತಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಇಂತಹ ಶಿಬಿರಗಳು ನೈಜ ಜೀವನದ ಪಾಠ ಕಲಿಸುವ ಪಾಠಶಾಲೆಯಂತಿವೆ ಎಂದರು.
ಸಂಸ್ಥೆಯ ಸಹ ಸಂಸ್ಥಾಪಕ ಅಶ್ವತ್ ಎಸ್.ಎಲ್ ಸಮಾಜಕ್ಕೆ ಕೊಡುಗೆ ನೀಡುವ ಮನೋಭಾವ ಬೆಳೆಸಿದರೆ ಶಿಕ್ಷಣದ ಗುರಿ ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಹಾಗೂ ಬಂಟ್ಸ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಅವರು, ಯುವಕರು ಸಾಮಾಜಿಕ ಹೊಣೆಗಾರಿಕೆಯನ್ನು ಅರಿತುಕೊಳ್ಳುವಲ್ಲಿ ಮುಂಚೂಣಿಯಲ್ಲಿರಬೇಕು ಎಂದು ಹೇಳಿದರು.
ಉದ್ಯಮಿ ವಿಜಯ್ ಶೆಟ್ಟಿ ಅವರು ವಿದ್ಯಾರ್ಥಿಗಳು ಅಕಾಡೆಮಿಕ್ ಯಶಸ್ಸಿನ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದಾಗ ಮಾತ್ರ ನಿಜವಾದ ಶಿಕ್ಷಣದ ಅರ್ಥ ಸಾರ್ಥಕವಾಗುತ್ತದೆ ಎಂದರು.ಇಸ್ರೋದ ನಿವೃತ್ತ ವಿಜ್ಞಾನಿ ಮತ್ತು ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಜನಾರ್ಧನ ಇಡ್ಯಾ, ನ್ಯಾಯವಾದಿ ಮತ್ತು ನೋಟರಿ ನಂದಿನಿ ಶೆಟ್ಟಿ, ವಿಶ್ರಾಂತ ಪ್ರಾಂಶುಪಾಲ ಶ್ರೀವರ್ಮ ಅಜ್ರಿ, ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಅನ್ನಪೂರ್ಣ ಕಾಮತ್ ಮಾತನಾಡಿದರು.25 ವರ್ಷಗಳಿಗಿಂತ ಹೆಚ್ಚು ಕಾಲ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸಿದ ಸುಧೀರ್, ಪೂವಪ್ಪ, ರವಿ, ನಾಗೇಶ್ ಹಾಗೂ ಸಂಜೀವ ಇವರನ್ನು ಎನ್.ಎಸ್.ಎಸ್ ಘಟಕದ ವತಿಯಿಂದ ಗೌರವಿಸಲಾಯಿತು.ವಿದ್ಯಾರ್ಥಿಗಳಾದ ಹಿತ ಮತ್ತು ಅಕ್ಷರ್ ಶಿಬಿರದ ಅನುಭವ ಹಂಚಿಕೊಂಡರು. ಸಂಸ್ಥೆಯ ಸಹ ಸಂಸ್ಥಾಪಕ ಡಾ. ಗಣನಾಥ ಶೆಟ್ಟಿ ಬಿ, ವಿದ್ವಾನ್ ಗಣಪತಿ ಭಟ್ ಹಾಗೂ ಅದರ್ಶ ಎಂ.ಕೆ ಇದ್ದರು. ಉಪನ್ಯಾಸಕ ಸಂತೋಷ್ ಸ್ವಾಗತಿಸಿದರು. ಶಿಬಿರಾಧಿಕಾರಿ ಉಮೇಶ್ ವಂದಿಸಿದರು. ಉಪನ್ಯಾಸಕಿ ಪ್ರಿಯಾಂಕ ತೀರ್ಥರಾಮ ನಿರೂಪಿಸಿದರು.