ಕಾರ್ಕಳ: ಕಾರ್ಕಳ ಅಜೆಕಾರು ಎಣ್ಣೆಹೊಳೆ ಏತ ನೀರಾವರಿ ಯೋಜನೆಗೆ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಮಾಜಿ ಸಚಿವ ವಿ. ಸುನಿಲ್ ಕುಮಾರ್, ಇದು ಜನವಿರೋಧಿ ಹಾಗೂ ರೈತ ವಿರೋಧಿ ನಿರ್ಧಾರವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ಆಳುವ ಸರ್ಕಾರ ದಿವಾಳಿಯಾದಾಗ ಅಥವಾ ದೃಷ್ಟಿ ಹಾಗೂ ಶ್ರವಣ ದೋಷ ಪೀಡಿತವಾದಾಗ ಮಾತ್ರ ಇಂತಹ ಜನವಿರೋಧಿ ನಿರ್ಧಾರ ಕೈಗೊಳ್ಳಲು ಸಾಧ್ಯ. ರಾಜ್ಯ ಕಾಂಗ್ರೆಸ್ ಸರ್ಕಾರ ತುಳಿಯುತ್ತಿರುವ ದುಶಾಸನ ಆಡಳಿತಕ್ಕೆ ಕಾರ್ಕಳ–ಅಜೆಕಾರು ಎಣ್ಣೆಹೊಳೆ ಏತ ನೀರಾವರಿ ಯೋಜನೆಯ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿರುವುದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.ಈ ಯೋಜನೆಯ ಮುಖ್ಯ ಉದ್ದೇಶವೇ ನೀರಾವರಿ ಸೌಲಭ್ಯ ಒದಗಿಸಿ ರೈತರ ಕಲ್ಯಾಣ ಸಾಧಿಸುವುದಾಗಿದೆ. ರಾಜ್ಯದಲ್ಲಿ ಈಗಾಗಲೇ ಬೇಸಿಗೆ ಪ್ರಾರಂಭವಾಗಿದ್ದು, ನೀರಿನ ಸಮಸ್ಯೆ ಹಿಂದಿನ ವರ್ಷಗಳಿಗಿಂತ ತೀವ್ರವಾಗುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ 2 ಕೋಟಿ ರೂಪಾಯಿಗೂ ಅಧಿಕ ವಿದ್ಯುತ್ ಬಾಕಿ ನೆಪದಲ್ಲಿ ಸಂಪರ್ಕ ಕಡಿತಗೊಳಿಸಿರುವುದು ಅಸಮಂಜಸ ಕ್ರಮ ಎಂದು ಅವರು ಹೇಳಿದ್ದಾರೆ.ತಕ್ಷಣವೇ ವಿದ್ಯುತ್ ಸಂಪರ್ಕ ಪುನಃಸ್ಥಾಪನೆ ಮಾಡಿ ರೈತರ ಹಿತ ಕಾಪಾಡಬೇಕೆಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.