ಕಾರ್ಕಳ: ಭುವನೇಂದ್ರ ಕಾಲೇಜಿನ ವಿದ್ಯಾರ್ಥಿಗಳಿಂದ ಕೆಸರ್‌ಡೊಂಜಿ ದಿನ

| Published : Sep 02 2025, 12:00 AM IST

ಕಾರ್ಕಳ: ಭುವನೇಂದ್ರ ಕಾಲೇಜಿನ ವಿದ್ಯಾರ್ಥಿಗಳಿಂದ ಕೆಸರ್‌ಡೊಂಜಿ ದಿನ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಭುವನೇಂದ್ರ ಕಾಲೇಜಿನ ಕೆಸರ್‌ಡೊಂಜಿ ದಿನ ಕಾರ್ಯಕ್ರಮ ಪ್ರಶಾಂತ್ ಬಳಿರಾಯ ಅವರ ಗದ್ದೆಯಲ್ಲಿ ನಡೆಯಿತು. ಭುವನೇಂದ್ರ ಕಾಲೇಜಿನ ಹಳೆ ವಿದ್ಯಾರ್ಥಿ ಸುಬ್ರಹ್ಮಣ್ಯ ದೇವಾಡಿಗ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಕಾರ್ಕಳವಿದ್ಯಾರ್ಥಿಗಳು ಆಸಕ್ತಿ ಮತ್ತು ಪರಿಶ್ರಮವಿದ್ದರೆ ಎಂತಹ ಕಠಿಣ ಪರಿಸ್ಥಿತಿಯನ್ನೂ ನಿಭಾಯಿಸಬಲ್ಲರು ಎನ್ನುವುದಕ್ಕೆ ಭುವನೇಂದ್ರ ಕಾಲೇಜಿನ ವಿದ್ಯಾರ್ಥಿಗಳು ಸಾಕ್ಷಿಯಾಗಿದ್ದಾರೆ. ಮೋಜು ಮಸ್ತಿ ಅಂತ ತಿಳಿಯದೆ ದುಡಿಮೆಯ ಮಹತ್ವವನ್ನು ಅರಿಯಬೇಕು. ಕೃಷಿ ಲಾಭದಾಯಕವಲ್ಲದೆ ಹೋದರೂ ಇದರ ಪರಿಚಯ ನಮಗಿರಬೇಕು. ಅನುಭವಕ್ಕಾದರೂ ಕೆಸರಿಗೆ ಇಳಿಯಬೇಕು, ಬದುಕಿಗೆ ಮಣ್ಣಿನ ಸೊಗಡಿಲ್ಲದೆ ಅರ್ಥವಿಲ್ಲ‌‌ ಎಂದು ಭುವನೇಂದ್ರ ಕಾಲೇಜಿನ ಹಳೆ ವಿದ್ಯಾರ್ಥಿ ಸುಬ್ರಹ್ಮಣ್ಯ ದೇವಾಡಿಗ ಹೇಳಿದರು.

ಅವರು ಶ್ರೀ ಭುವನೇಂದ್ರ ಕಾಲೇಜಿನ ಕೆಸರ್‌ಡೊಂಜಿ ದಿನ-2025 ಉದ್ಘಾಟಿಸಿ ಮಾತನಾಡಿದರು.

ಕಾಲೇಜಿನ ಕ್ಷೇಮಪಾಲನಾ ಅಧಿಕಾರಿ ಡಾ.ಈಶ್ವರ ಭಟ್ ಪಿ. ಮಾತನಾಡಿ, ನಮ್ಮ ವಿದ್ಯಾರ್ಥಿಗಳ ಶ್ರದ್ಧೆ ದೊಡ್ಡದು. ಇಲ್ಲಿಯ ಅನುಭವಗಳನ್ನು ಇಟ್ಟುಕೊಂಡು. ಮುಂದಿನ ದಿನಗಳಲ್ಲಿ ಹಡಿಲು ಗದ್ದೆಯನ್ನು ಆಯ್ಕೆ ಮಾಡಿ ಅದರಲ್ಲಿ ಹುತ್ತು, ಬಿತ್ತುವ ಕೆಲಸ ಮಾಡಿ ಬೆಳೆಯನ್ನು ತೆಗೆದರೆ ನಿಮ್ಮ ಕೆಲಸ ಸಾರ್ಥಕವಾಗುತ್ತದೆ. ಪಠ್ಯಕ್ಕಿಂತ ಹೊರತಾದ ಇಂತಹ ಕಾರ್ಯಕ್ರಮಗಳು ಹೆಚ್ಚು ಕ್ರಿಯಾಶೀಲರಾಗಿ ಇರುವಂತೆ ಮಾಡುತ್ತದೆ ಎಂದರು.ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ ಎ. ಕೋಟ್ಯಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಬದುಕಿನ ಚಟುವಟಿಕೆಯನ್ನು ಕೃಷಿಯ ಮೂಲಕ ಮಾಡಿದಾಗ ಅದಕ್ಕೆ ಮನ್ನಣೆ ಸಿಗುತ್ತದೆ. ವಿದ್ಯಾರ್ಥಿಗಳು ಕೆಸರಿನ ಗದ್ದೆಗೆ ಇಳಿದಾಗ ಹೆಚ್ಚು ಅನುಭವ ಪಕ್ವಗೊಳ್ಳಲು ಸಾಧ್ಯವಿದೆ ಎಂದರು.

ಗದ್ದೆಯ ಜಾಗವನ್ನು ಒದಗಿಸಿ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಸಹಕಾರವನ್ನು ನೀಡಿದ ಪ್ರಶಾಂತ್ ಬಳಿರಾಯ ಅವರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಎಲ್ಲ ಪ್ರಾಧ್ಯಾಪಕ ವರ್ಗದವರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.ಕಾರ್ಯಕ್ರಮ ಸಂಯೋಜಕರಾದ ಕಾಲೇಜಿನ ಕ್ರೀಡಾಧಿಕಾರಿ ನವೀನ್ ಚಂದ್ರ ಸ್ವಾಗತಿಸಿದರು. ಅಂತಿಮ ಬಿಸಿಎ ವಿದ್ಯಾರ್ಥಿನಿ ಹಿತಾ ಕಾರ್ಯಕ್ರಮ ನಿರೂಪಿಸಿದರು. ಅಂತಿಮ ಬಿಕಾಂನ ಅನನ್ಯ ವಂದಿಸಿದರು.ಕೆಸರಿನ ಗದ್ದೆಯಲ್ಲಿ ಬೇರೆ ಬೇರೆ ರೀತಿಯ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.