ಸಾರಾಂಶ
ರಾಂ ಅಜೆಕಾರು
ಕನ್ನಡಪ್ರಭ ವಾರ್ತೆ ಕಾರ್ಕಳರಾಜ್ಯಾದ್ಯಂತ ಮಾ.25ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಲಿದ್ದು, ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ವ್ಯಾಪ್ತಿಯಲ್ಲಿನ ಕಾರ್ಕಳ-ಹೆಬ್ರಿ ಅವಳಿ ತಾಲೂಕುಗಳಲ್ಲಿ ಪೂರ್ವ ತಯಾರಿಗಳು ಅಂತಿಮ ಹಂತದಲ್ಲಿದೆ. ಈ ತಾಲೂಕುಗಳಲ್ಲಿ 27 ಸರ್ಕಾರಿ ಪ್ರೌಢಶಾಲೆಗಳು, 12 ಅನುದಾನಿತ ಪ್ರೌಢಶಾಲೆಗಳು, 15 ಅನುದಾನ ರಹಿತ ಪ್ರೌಢಶಾಲೆಗಳು, ಮೊರಾರ್ಜಿ ದೇಸಾಯಿ ಪ್ರೌಢಶಾಲಾ 1 ಹಾಗೂ 1 ಮೌಲಾನ ಅಜಾದ್ ಪ್ರೌಢಶಾಲಾ ಸೇರಿ ಒಟ್ಟು 56 ಪ್ರೌಢಶಾಲೆಗಳಲ್ಲಿನ ಒಟ್ಟು 2783 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.2783 ವಿದ್ಯಾರ್ಥಿಗಳಲ್ಲಿ 1432 ವಿದ್ಯಾರ್ಥಿಗಳು ಮತ್ತು 1351 ವಿದ್ಯಾರ್ಥಿನಿಯರಿದ್ದಾರೆ. 2642 ವಿದ್ಯಾರ್ಥಿಗಳು ಮೊದಲ ಬಾರಿ ಪರೀಕ್ಷೆ ಬರೆಯುವವರಾಗಿದ್ದಾರೆ. 42 ವಿದ್ಯಾರ್ಥಿಗಳು ಖಾಸಗಿಯಾಗಿ ಪರೀಕ್ಷೆ ಬರೆಯುವರಾಗಿದ್ದು, 11 ಮಂದಿ ಖಾಸಗಿ ಪುನರಾವರ್ತಿತರಾಗಿದ್ದಾರೆ.* ಎಕ್ಸಾಂ ಸೆಂಟರ್‌ಗಳು:ಕಾರ್ಕಳ ನಗರದಲ್ಲಿ ಒಟ್ಟು ಮೂರು ಎಕ್ಸಾಂ ಸೆಂಟರ್‌ಗಳನ್ನು ಕ್ಲಷ್ಟರ್ ಮಟ್ಟದಲ್ಲಿ ತೆರೆಯಲಾಗಿದ್ದು, ಉಳಿದ ಗ್ರಾಮಗಳನ್ನು ಒಂದುಗೂಡಿಸಿ 6 ಎಕ್ಸಾಮ್ ಸೆಂಟರ್‌ಗಳನ್ನು ತೆರೆಯಲಾಗಿದ್ದು, ಒಟ್ಟು 9 ಎಕ್ಸಾಂ ಸೆಂಟರ್ ಗಳನ್ನು ನಿರ್ಮಾಣ ಮಾಡಲಾಗಿದೆ. ಪೆರುವಾಜೆ ಹೈಸ್ಕೂಲ್, ಭುವನೇಂದ್ರ ಪ್ರೌಢಶಾಲೆ, ಎಸ್‌ವಿಟಿ ಮಹಿಳಾ ಕಾಲೇಜು, ಬೋರ್ಡ್ ಹೈಸ್ಕೂಲ್ ಕಾರ್ಕಳ, ಬೈಲೂರು ಸರ್ಕಾರಿ ಕಾಲೇಜು, ಬಜಗೋಳಿ ಸರ್ಕಾರಿ ಕಾಲೇಜು, ಬೆಳ್ಮಣ್ ಹೈಸ್ಕೂಲ್, ಹೆಬ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಮುನಿಯಾಲು ಪದವಿ ಪೂರ್ವ ಕಾಲೇಜುಗಳಲ್ಲಿ ಎಕ್ಸಾಂ ಸೆಂಟರ್ ತೆರೆಯಲಾಗಿದೆ.* ಒತ್ತಡದಲ್ಲಿ ಅಧಿಕಾರಿಗಳು:
ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಹಾಗೂ ಲೋಕಸಭಾ ಚುನಾವಣೆ ಪೂರ್ವ ಸಿದ್ಧತೆ ನಡೆಯುತಿದ್ದು, ಅಧಿಕಾರಿಗಳಿಗೆ ಎರಡೂ ಕಡೆಗಳಲ್ಲಿ ಕಾರ್ಯನಿರ್ವಹಿಸುವ ಒತ್ತಡವಿದೆ. ಶಿಫ್ಟ್ ಪದ್ಧತಿಯಲ್ಲಿ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆಯಿದೆ.* ಅಕ್ರಮ ತಡೆಗೆ ಅಧಿಕಾರಿಗಳು ಸಿದ್ಧ:ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಣೆಗಾಗಿ ಪರೀಕ್ಷಾ ಮಂಡಳಿಯಿಂದ ಮುಖ್ಯ ಅಧೀಕ್ಷಕರನ್ನು ನೇಮಕಮಾಡಲಾಗಿದ್ದು, ಪತ್ರಿಕೆ ಪಾಲಕರು, ನೋಡಲ್ ಅಧಿಕಾರಿಗಳು, ಕೊಠಡಿ ಮೇಲ್ವಿಚಾರಕರು, ಪ್ರತಿ ಸೆಂಟರ್‌ಗೆ ಸ್ಥಳ ಜಾಗೃತ ದಳ, ಮೊಬೈಲ್ ಸ್ವಾಧೀನ ಅಧಿಕಾರಿಗಳು, ಸ್ಥಳ ಜಾಗೃತ ದಳ, ಮೊಬೈಲ್ ಸ್ಕ್ವಾಡ್‌ಗಳು, ಅನುಯಾಯಿ ಇಲಾಖೆಯ ಆಫಿಸರ್ಸ್‌ಗಳನ್ನು ಸ್ಕ್ವಾಡ್‌ಗಳಾಗಿ ಬಳಸಲಾಗುತ್ತಿದೆ. ನಾಲ್ಕು ರೂಟ್ ಮ್ಯಾಪ್ ಮಾಡಲಾಗಿದ್ದು, ಟ್ರೆಷರರಿಗಳಿಂದ ಪ್ರಶ್ನೆ ಪತ್ರಿಕೆ ತಂದು ಅಧಿಕಾರಿಗಳ ಸಮ್ಮುಖದಲ್ಲಿ ಕಾನೂನಾತ್ಮಕವಾಗಿ ತೆರೆದು ವಿದ್ಯಾರ್ಥಿಗಳಿಗೆ ಹಂಚಲಾಗುತ್ತದೆ. ಸಿಸಿ ಕ್ಯಾಮರಾ ವ್ಯವಸ್ಥೆ ಕಲ್ಪಿಸಿಲಾಗಿದ್ದು, ಎಲ್ಲ ಕೇಂದ್ರಗಳಿಗೂ ಪೊಲೀಸ್ ಇಲಾಖೆ ಸಹಕಾರ ನೀಡುತ್ತಿದೆ.----ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ. ಎಲ್ಲ ಎಕ್ಸಾಂ ಸೆಂಟರ್‌ಗಳಲ್ಲಿಯೂ ಮೂಲ ಸೌಕರ್ಯ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಉತ್ತಮ ಫಲಿತಾಂಶ ಬರುವ ನಿರೀಕ್ಷೆ ನಮ್ಮಲ್ಲಿದೆ. ಸಂಪೂರ್ಣ ತಯಾರಿ ನಡೆಸಲಾಗಿದೆ.। ಬಿ.ಎ. ಲೋಕೇಶ, ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಕಳ
------------ಪರೀಕ್ಷೆಗಳು ಹತ್ತಿರಾಗುತ್ತಿದ್ದಂತೆ ಮಕ್ಕಳ ಜೊತೆಗೆ ಪೋಷಕರಿಗೂ ಆತಂಕ ಪ್ರಾರಂಭವಾಗುವುದು ಸರ್ವೇ ಸಾಮಾನ್ಯ. ವಿದ್ಯಾರ್ಥಿಗಳು ಪರೀಕ್ಷೆ ಎಂದರೆ ಭಯ ಪಡಲೇಬೇಕೆನ್ನುವ ಕಂಡಿಷನಿಂಗ್‌ಗೆ ಒಳಗಾಗುತ್ತಿದ್ದಾರೆ. ಅಂತಹ ಸಂದರ್ಭಗಳಲ್ಲಿ ಪೋಷಕರಾದವರು ಮಕ್ಕಳ ಜೊತೆ ಒಂದು ಪ್ರೀತಿಯಿಂದ, ಓದಿಗೆ ಪೂರಕವಾಗುವ ವಾತಾವರಣವನ್ನು ಕಲ್ಪಿಸಿದರೆ, ಸಾಧ್ಯವಾದಷ್ಟು ಆತಂಕರಹಿತ ಪರೀಕ್ಷಾ ಸಿದ್ಧತೆ ಮಾಡುವುದು ಸಾಧ್ಯ. ವಿದ್ಯಾರ್ಥಿಗಳು ಟೆಲಿ ಮಾನಸ್ 14416 ಅಥವಾ 1800- 89-14416 ಕರೆ ಮಾಡಿ ಮಾಹಿತಿಯನ್ನು ಹಂಚಿಕೊಳ್ಳಬಹುದು. ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆಯಲು ವಿಫಲವಾದಲ್ಲಿ ದಯವಿಟ್ಟು ಮಕ್ಕಳ ಆತ್ಮವಿಶ್ವಾಸ ಮತ್ತು ಘನತೆಯನ್ನು ಪೋಷಕರು ಕುಂದಿಸಬಾರದು. ವೈಫಲ್ಯ ದೊಡ್ಡದಲ್ಲ.। ವಿರೂಪಾಕ್ಷ ದೇವರುಮನೆ, ಖ್ಯಾತ ಮನೋವೈದ್ಯರು ಎವಿ ಬಾಳಿಗ ಆಸ್ಪತ್ರೆ ಉಡುಪಿ