ಸಾರಾಂಶ
ಶ್ರೀ ಗುರುರಾಘವೇಂದ್ರ ಸೇವಾ ಟ್ರಸ್ಟ್, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಅಯ್ಯಪ್ಪನಗರ ವಿಜೇತ ವಿಶೇಷ ಶಾಲೆಯಲ್ಲಿ ವಿಶ್ವ ಆರೈಕೆದಾರರ ದಿನಾಚರಣೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಕಾರ್ಕಳ
ಇಲ್ಲಿನ ಶ್ರೀ ಗುರುರಾಘವೇಂದ್ರ ಸೇವಾ ಟ್ರಸ್ಟ್, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಅಯ್ಯಪ್ಪನಗರ ವಿಜೇತ ವಿಶೇಷ ಶಾಲೆಯಲ್ಲಿ ವಿಶ್ವ ಆರೈಕೆದಾರರ ದಿನಾಚರಣೆ ನಡೆಸಲಾಯಿತು.ಕಾರ್ಯಕ್ರಮವನ್ನು ತಾಲೂಕು ಕಾರ್ಯ ನಿರ್ವಾಹಣಾಧಿಕಾರಿ ಕೃಷ್ಣಾನಂದ್ ಕೆ. ಅವರು ದೀಪ ಪ್ರಜ್ವಲನದೊಂದಿಗೆ ಉದ್ಘಾಟಿಸಿ ವಿಶೇಷ ಚೇತನ ಮಕ್ಕಳ ಆರೈಕೆದಾರರು ತಮ್ಮ ಸಬಲೀಕರಣಕ್ಕೆ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು.ವಿಶೇಷ ಚೇತನ ಯುವತಿ ಜ್ಯೋತಿ ಶಿಂದೆ ಇವರ ಆರೈಕೆದಾರರಾದ ಶಾರದ ಶಿಂದೆ ಇವರನ್ನು ಹಾಗೂ ವಿಜೇತ ಶಾಲೆಯಲ್ಲಿ ವಿಶೇಷ ಮಕ್ಕಳ ಆರೈಕೆಯಲ್ಲಿ ತೊಡಗಿಕೊಂಡಿರುವ ರಮ್ಯಾಶ್ರೀ ಶೆಟ್ಟಿ ಇವರನ್ನು ಆರೈಕೆದಾರರ ದಿನಾಚರಣೆಯ ಪ್ರಯುಕ್ತ ಗೌರವಿಸಲಾಯಿತು. ಶಾಲಾ ಸ್ಥಾಪಕರು ಡಾ.ಕಾಂತಿ ಹರೀಶ್ ಇವರು ಸಭಾಧ್ಯಕ್ಷತೆಯನ್ನು ವಹಿಸಿದ್ದು, ವಿಶೇಷ ಚೇತನರ ಪ್ರತಿಯೊಂದು ಕೆಲಸವನ್ನು ಯಾವುದೇ ಅಸಹ್ಯ ಭಾವನೆ ಇಲ್ಲದೆ ನಿಸ್ವಾರ್ಥದಿಂದ ಸೇವೆ ಸಲ್ಲಿಸುತ್ತಿರುವ ಆರೈಕೆದಾರರಿಗೆ ಮೀಸಲಾಗಿಟ್ಟ ಈ ದಿನವನ್ನು ಆಚರಿಸುವುದು ಸಂತೋಷದಾಯಕದ ವಿಚಾರವೆಂದು ತಿಳಿಸುತ್ತಾ ಪ್ರತಿಯೊಂದು ಆರೈಕೆದಾರರಿಗೆ ಅಭಿನಂದನೆಗಳನ್ನು ಅರ್ಪಿಸಿದರು.ಸಂಪನ್ಮೂಲ ವ್ಯಕ್ತಿಗಳಾಗಿ ವಿಜೇತ ವಿಶೇಷ ಶಾಲಾ ಫಿಸಿಯೋಥೆರಪಿಸ್ಟ್ ಡಾ. ವೆನ್ಸಿಟಾ ಪ್ರಿಯಾಂಕ ಅರಾನ್ಹ ಉಪಸ್ಥಿತರಿದ್ದು, ಆರೈಕೆದಾರರ ವೈಯುಕ್ತಿಕ ಆರೋಗ್ಯಕ್ಕಾಗಿಯೂ ಸಮಯ ಮೀಸಲಿಟ್ಟು ಆರೋಗ್ಯ ಕಾಪಾಡಿಕೊಳ್ಳುವುದು ಜವಾಬ್ದಾರಿ ಎಂದು ತಿಳಿಸಿದರು.ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾರ್ಕಳ ತಾಲೂಕು ಪುನರ್ವಸತಿ ಕಾರ್ಯಕರ್ತೆ ಮಂಜುಳಾ ಸುಭಾಷ್, ದುರ್ಗಾ ವಿದ್ಯಾಸಂಘದ ಅಧ್ಯಕ್ಷ ಕೆ.ರಾಧಾಕೃಷ್ಣ ಶೆಟ್ಟಿ, ಶಾಲಾ ಮ್ಯಾನೇಜಿಂಗ್ ಟ್ರಸ್ಟಿ ಹರೀಶ್ ಉಪಸ್ಥಿತರಿದ್ದರು. ವಿಜೇತ ಶಾಲಾ ವಿಶೇಷ ಶಿಕ್ಷಕಿ ಹರ್ಷಿತಾ ಕಿರಣ್ ನಿರೂಪಿಸಿದ ಕಾರ್ಯಕ್ರಮದಲ್ಲಿ ವಿಶೇಷ ಶಿಕ್ಷಕಿ ಶ್ವೇತಾ ನಿತಿನ್ ಸ್ವಾಗತಿಸಿದರು ಶ್ರೀನಿಧಿ ವಂದಿಸಿದರು.ವಿವಿಧ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಶಾಲಾ ವಿಶೇಷ ಮಕ್ಕಳು, ಹೆತ್ತವರು, ಸಿಬ್ಬಂದಿ ವರ್ಗದವರು ಸುಮಾರು 150 ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸದುಪಯೋಗ ಪಡಿಸಿಕೊಂಡರು.