ಭಾಷೆಯ ಬಗ್ಗೆ ಅತಿ ಹೆಚ್ಚು ಸಂಶೋಧನೆ, ಅಧ್ಯಯನ ನಡೆದಿರುವುದು ಕೂಡ ಕನ್ನಡ ಭಾಷೆಯ ಬಗ್ಗೆ ಮಾತ್ರವೇ

ಕನ್ನಡಪ್ರಭ ವಾರ್ತೆ ತುಮಕೂರುಕರ್ನಾಟಕ ಎಲ್ಲಾ ರೀತಿಯಲ್ಲೂ ವೈವಿಧ್ಯಮಯ ಪ್ರದೇಶ, ಇಲ್ಲಿಗೆ ಬಂದು ನೆಲೆಸಲು, ಕಾರ್ಯ ನಿರ್ವಹಿಸಲು ಎಲ್ಲ ರಾಜ್ಯದ ಜನರು, ಉನ್ನತ ಹಂತದ ಅಧಿಕಾರಿಗಳು ಇಷ್ಟಪಡುತ್ತಾರೆ ಎಂದರೆ ಇದಕ್ಕೆ ಕಾರಣ ಇಲ್ಲಿ ನೆಲೆಸಿರುವ ಶಾಂತಿ, ಸೌಹಾರ್ದತೆ, ಜನರ ತಾಳ್ಮೆ, ಪ್ರೀತಿಯ ಮನೋಭಾವನೆ ಎಂದು ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಬಿ. ನಂಜುಂಡಪ್ಪ ತಿಳಿಸಿದರು. ನಗರದ ಸರಸ್ವತಿಪುರಂನಲ್ಲಿರುವ ಶ್ರೀ ಸಿದ್ದಾರ್ಥ ಶಿಕ್ಷಣ ಮಹಾವಿದ್ಯಾಲಯದಲ್ಲಿ ವೈಭವದ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು ಭಾಷೆಯ ಬಗ್ಗೆ ಅತಿ ಹೆಚ್ಚು ಸಂಶೋಧನೆ, ಅಧ್ಯಯನ ನಡೆದಿರುವುದು ಕೂಡ ಕನ್ನಡ ಭಾಷೆಯ ಬಗ್ಗೆ ಮಾತ್ರವೇ, ಅದನ್ನು ಅರಿಯುವ, ಪಸರಿಸುವ ಜವಾಬ್ದಾರಿ ನಮ್ಮದು. ದ್ರಾವಿಡ ಭಾಷೆಯಿಂದ ಹುಟ್ಟಿದ ಪಂಚ ದ್ರಾವಿಡ ಭಾಷೆ ಹುಟ್ಟಿದೆ, ಅದರ ಮೂಲವನ್ನು ಮತ್ತು ಬೆಳವಣಿಗೆ ಬಗ್ಗೆ ನಾವೆಲ್ಲ ತಿಳಿಯಬೇಕು ಎಂದರು. ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆ ಶಿಕ್ಷಣಾಧಿಕಾರಿಗಳಾದ ಎಚ್ ತಿಪ್ಪೇಸ್ವಾಮಿ ಮಾತನಾಡಿ, ದಾಸ ಶ್ರೇಷ್ಠ ಕನಕದಾಸರ ಜನ್ಮ ವೃತ್ತಾಂತ, ಅವರ ಸಾರ್ಥಕ ಜೀವನ ಕುರಿತು ಮಾತನಾಡಿದರು. ಹೀನನನ್ನಾಗಿ ಕಂಡ ಸಮುದಾಯಕ್ಕೆ ಭಕ್ತಿಯ ಶಕ್ತಿಯ ಬಗ್ಗೆ ತಿಳಿಸಿಕೊಟ್ಟ ಕನಕರು ದಾಸ ವರೆಣ್ಯರಲ್ಲಿಯೇ ಶ್ರೇಷ್ಠರು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ಸಿದ್ದರಾಜು ಕೆ.ಎಸ್ ಮಾತನಾಡಿ ದಂಡಿಯ ಹೇಳಿಕೆಯನ್ನು ಪ್ರಸ್ಥಾಪಿಸಿ ಭಾಷೆಯ ಅನನ್ಯತೆಯನ್ನು ನಾವು ಗಮನಿಸಬೇಕು. ಕನ್ನಡ ನಾಡು ನುಡಿಗೆ ದಾಸರ ಕಾಲದಿಂದಲೂ ಅನೇಕರು ಶ್ರಮವಹಿಸಿದ್ದಾರೆ ಎಂದು ನುಡಿದರು. ಕಾಲೇಜಿನ ಪ್ರಾಧ್ಯಾಪಕ ಡಾ.ಮಾರುತಿ ಎನ್ ಎನ್, ಹೇಮಲತಾ ಜಿ. ಕನ್ಯಾಕುಮಾರಿ, ಲಲಿತಾ ಕೆ ಆರ್, ಗಂಗಾಧರ ಮೂರ್ತಿ, ಸುಷ್ಮಾ ಮತ್ತು ಎಲ್ಲಾ ವಿದ್ಯಾರ್ಥಿಗಳು ಹಾಜರಿದ್ದರು.