ಸಾರಾಂಶ
ಬಳ್ಳಾರಿ: ಕರ್ನಾಟಕ ಬಯಲಾಟ ಅಕಾಡೆಮಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜರುಗಿದ ಎರಡು ದಿನಗಳ ಕರ್ನಾಟಕ-ಆಂಧ್ರ ಗಡಿ ಪ್ರದೇಶದ ಕನ್ನಡ ಬಯಲಾಟಗಳು ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮಕ್ಕೆ ಭಾನುವಾರ ಸಂಭ್ರಮದ ತೆರೆಬಿತ್ತು.
ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಿಂದ ಆಗಮಿಸಿದ್ದ ವಿವಿಧ ಬಯಲಾಟ ತಂಡಗಳು ವಿವಿಧ ಪೌರಾಣಿಕ ಕಥನಗಳನ್ನು ಪ್ರದರ್ಶಿಸುವ ಮೂಲಕ ಪ್ರೇಕ್ಷಕರ ಮನತಣಿಸಿದವು. ರಾಯಚೂರು, ಕೊಪ್ಪಳ, ಆಂಧ್ರಪ್ರದೇಶ, ವಿಜಯನಗರ ಜಿಲ್ಲೆಗಳ ಬಯಲಾಟ ತಂಡಗಳು ತಮ್ಮ ಭಾಗದ ವಿಶಿಷ್ಟ ಶೈಲಿಯ ಬಯಲಾಟಗಳನ್ನು ಪ್ರದರ್ಶಿಸಿ, ಗಮನ ಸೆಳೆದವು.ಎರಡು ದಿನಗಳ ವಿಚಾರ ಸಂಕಿರಣದಲ್ಲಿ ಬಯಲಾಟ ಹಿನ್ನಲೆ, ಸಧ್ಯದ ಸ್ಥಿತಿಗತಿಗಳು, ಬಯಲಾಟ ಮಹಿಳಾ ಕಲಾವಿದೆಯರು ಎದುರಿಸುತ್ತಿರುವ ಸಂಕಷ್ಟಗಳು, ಕನ್ನಡ ಹಾಗೂ ತೆಲುಗು ಭಾಷಾ ಬಾಂಧ್ಯವಕ್ಕೆ ಬಯಲಾಟ ನೀಡಿರುವ ಕೊಡುಗೆ ಕುರಿತು ವಿದ್ವಾಂಸರು ವಿಷಯ ಮಂಡಿಸಿದರು.
ಮೊದಲ ದಿನ ಲೇಖಕ ಡಾ.ಜಾಜಿ ದೇವೇಂದ್ರಪ್ಪ ಅವರು ಕರ್ನಾಟಕ-ಆಂಧ್ರ ಭಾಷಾ ಬಾಂಧವ್ಯ ಕುರಿತು ವಿಷಯ ಮಂಡಿಸಿದರೆ, ಬಯಲಾಟಗಳು; ಬಹುತ್ವ ಸಂಸ್ಕೃತಿ ಕುರಿತು ಹಂಪಿ ಕನ್ನಡ ವಿವಿಯ ಪ್ರಾಧ್ಯಾಪಕ ಡಾ.ವೆಂಕಟಗಿರಿ ದಳವಾಯಿ ಅವರು ಮಾತನಾಡಿದರು.ಎರಡೇ ದಿನದ ಗೋಷ್ಠಿಯಲ್ಲಿ ಬಯಲಾಟ ಕಲಾವಿದರ ಸ್ಥಿತಿಗತಿ; ಮುನ್ನೋಟ ಕುರಿತು ಮಾತನಾಡಿದ ಬಯಲಾಟ ಅಕಾಡೆಮಿ ಸದಸ್ಯ ಹಾಗೂ ಚಿಂತಕ ಡಾ.ಅರುಣ ಜೋಳದ ಕೂಡ್ಲಿಗಿ ಸೌಹಾರ್ದ, ಸಾಮರಸ್ಯ ಗಟ್ಟಿಗೊಳಿಸಲು ಪೂರಕವಾಗಿರಬೇಕಾದ ಬಯಲಾಟಗಳು ಜಾತಿವಾರು ಸೀಮಿತವಾಗುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದರು.
ಆಧುನಿಕತೆಯು ಸೃಷ್ಟಿಸಿದ ಬಿಕ್ಕಟ್ಟು ಬಯಲಾಟಕ್ಕೂ ವ್ಯಾಪಿಸಿದೆ. ಕಲಾ ತಂಡಗಳು ಜಾತಿವಾರು ಬದಲಾಗಿವೆ. ಕೃಷಿ ಪದ್ಧತಿಯಲ್ಲಾದ ಪಲ್ಲಟ, ದುಡಿವ ಜನರ ವಲಸೆಗಳು ಸಹ ಬಯಲಾಟ ಕಲಾ ಪ್ರಕಾರದ ಬೆಳವಣಿಗೆಗೆ ಕುತ್ತು ತಂದಿವೆ ಎಂದರಲ್ಲದೆ, ಬಯಲಾಟಗಳಲ್ಲಿ ಬಳಕೆಯಾಗುವ ಹಳಗನ್ನಡದ ಭಾಷೆ ಸರಳೀಕೃತಗೊಳ್ಳಬೇಕು. ವರ್ತಮಾನದ ಜೊತೆ ಕನೆಕ್ಟ್ ಆಗಬೇಕು. ಬಯಲಾಟ ಬೆಳವಣಿಗೆಗೆ ಡಿಜಿಟಲ್ ಮಾಧ್ಯಮ ಬಳಕೆ ಮಾಡಿಕೊಳ್ಳುವಂತಾಗಬೇಕು ಎಂದು ತಿಳಿಸಿದರು.ಕನ್ನಡ ಬಯಲಾಟದಲ್ಲಿ ಮಹಿಳೆ ಪಾತ್ರ ಕುರಿತು ಮಾತನಾಡಿದ ಉಪನ್ಯಾಸಕಿ ಡಾ.ಬಿ.ಎಸ್.ಪೂರ್ಣಿಮಾ, ಶತಶತಮಾನಗಳಿಂದಲೂ ಕನ್ನಡ-ತೆಲುಗು ಭಾಷಿಕರ ನಡುವಿನ ವೈವಾಹಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂಬಂಧಗಳ ಕುರಿತು ವಿವರಿಸಿದರು.
ಬಯಲಾಟ ಅಕಾಡೆಮಿ ಅಧ್ಯಕ್ಷ ಕೆ.ಆರ್.ದುರ್ಗಾದಾಸ್ ಅಧ್ಯಕ್ಷತೆ ವಹಿಸಿದ್ದರು.ಬಯಲಾಟ ಅಕಾಡೆಮಿ ಸದಸ್ಯೆ ಡಾ.ಎಚ್.ಆರ್.ಚೇತನಾ ಮಾತನಾಡಿದರು.
ಮಸ್ಕಿಯ ಗೋನುವಾರ ತಂಡವು ಮಹಿಷಾಸುರ ಮರ್ಧಿನಿ ಬಯಲಾಟ ಪ್ರದರ್ಶಿಸಿದರೆ, ವಿಜಯನಗರ ಜಿಲ್ಲೆ ಮಲಪನಗುಡಿಯ ವೀರೇಶ್ವರ ಬಯಲಾಟ ಮಂಡಳಿಯು ವೀರಾಭಿಮನ್ಯು ಕಾಳಗ, ಬಳ್ಳಾರಿ ತಾಲೂಕು ಹಂದಿಹಾಳು ಶಿವಪ್ಪತಾತ ಕಲಾ ಸಂಘ ಜಮದಗ್ನಿ ಕಥೆ, ಕೊಪ್ಪಳ ಜಿಲ್ಲೆ ಗಂಗಾವತಿಯ ಶ್ರೀನೀಲಕಂಠೇಶ್ವರ ಸಾಂಸ್ಕೃತಿಕ ಕಲಾವೇದಿಕೆಯಿಂದ ಶಿವನ ತಪೋಭಂಗ, ಆಂಧ್ರಪ್ರದೇಶದ ಆದೋನಿಯ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಕಲಾ ತಂಡ ಮಹಿಳಾ ದರ್ಬಾರ್ ಹಾಗೂ ರಾಯಚೂರು ಜಿಲ್ಲೆಯ ಯಾಪಲದಿನ್ನಿಯ ಅಂಗಯ್ಯಸ್ವಾಮಿ ಬಯಲಾ ಕಲಾ ಸಂಘದಿಂದ ವೀರೋಚಿತ ಕಥೆ ಬಯಲಾಟ ಪ್ರದರ್ಶನಗೊಂಡವು. ಕಾರ್ಯಕ್ರಮ ಸಂಯೋಜಕ ಹಾಗೂ ಹಿರಿಯ ಲೇಖಕ ಡಾ.ಜಾಜಿ ದೇವೇಂದ್ರಪ್ಪ ಹಾಗೂ ಡಾ.ಎ.ಎನ್.ಸಿದ್ದೇಶ್ವರಿ ಕಾರ್ಯಕ್ರಮ ನಿರ್ವಹಿಸಿದರು.ಕಸಾಪ ಗೌರವ ಕಾರ್ಯದರ್ಶಿ ಡಾ.ಶಿವಲಿಂಗಪ್ಪ ಹಂದಿಹಾಳು, ಸನ್ಮಾರ್ಗ ಗೆಳೆಯರ ಬಳಗದ ಚಂದ್ರಶೇಖರ ಆಚಾರ್ ಕಪ್ಪಗಲ್ ಇದ್ದರು.
ಬಯಲಾಟಗಳ ಪ್ರದರ್ಶನ ಹಾಗೂ ವಿಚಾರ ಸಂಕಿರಣದಲ್ಲಿ ಬಯಲಾಟ ಅಕಾಡೆಮಿ ಸದಸ್ಯ ಡಾ.ಅರುಣ ಜೋಳದ ಕೂಡ್ಲಿಗಿ ಮಾತನಾಡಿದರು.