ಸಾರಾಂಶ
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹಾಗೂ ಮಾಜಿ ಶಾಸಕ, ಉಗ್ರಾಣ ನಿಗಮದ ಅಧ್ಯಕ್ಷ ಎಸ್.ಜಯಣ್ಣ ಅವರ ನಿಧನಕ್ಕೆ ಕರ್ನಾಟಕ ಸೇನಾಪಡೆ ವತಿಯಿಂದ ಚಾಮರಾಜಮಗರದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹಾಗೂ ಮಾಜಿ ಶಾಸಕ, ಉಗ್ರಾಣ ನಿಗಮದ ಅಧ್ಯಕ್ಷ ಎಸ್.ಜಯಣ್ಣ ಅವರ ನಿಧನಕ್ಕೆ ಕರ್ನಾಟಕ ಸೇನಾಪಡೆ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.ನಗರದ ಚಾಮರಾಜೇಶ್ವರ ಉದ್ಯಾನದ ಮುಂಭಾಗದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಕರ್ನಾಟಕ ಸೇನಾಪಡೆ ಅಧ್ಯಕ್ಷ ಶ್ರೀನಿವಾಸಗೌಡ ಪುಷ್ಪಾರ್ಚನೆ ಮಾಡಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಕರ್ನಾಟಕ ಕಂಡಂತಹ ಅತ್ಯಂತ ದಕ್ಷ. ಪ್ರಾಮಾಣಿಕ, ಜನಾನುರಾಗಿ, ಅಪರೂಪದ ನಾಯಕರು, ಮಾಜಿ ರಾಜ್ಯಪಾಲ, ಮಾಜಿ ಕೇಂದ್ರ ಸಚಿವ, ಮಾಜಿ ಸ್ವೀಕರ್ ಆಗಿ, ವಿರೋಧ ಪಕ್ಷದ ನಾಯಕರಾಗಿ ಉತ್ತಮ ಸೇವೆ ಸಲ್ಲಿಸಿ ದೇಶ, ರಾಜ್ಯ ರಾಜಕಾರಣದಲ್ಲಿ ಅಜಾತ ಶತ್ರುವಾಗಿ ಅನನ್ಯ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಬೆಂಗಳೂರು ನಗರವನ್ನು ಸಿಂಗಾಪುರ ಮಾಡುವ ಕನಸಿನೊಂದಿಗೆ ಸಿಲಿಕಾನ್ ಸಿಟಿ ಮಾಡಲು ಶ್ರಮಿಸಿದ್ದರು. ವಿಧಾನಸೌಧ ಪಕ್ಕದಲ್ಲಿ ಅದರ ಪ್ರತಿಕೃತಿಯಂತೆ ವಿಕಾಸಸೌಧ ನಿರ್ಮಿಸಿದರು. ವಿಕಾಸಸೌಧ ನಿರ್ಮಾತೃ ಎನ್ನುವ ಹೆಗ್ಗಳಿಕೆ ಪಡೆದುಕೊಂಡರು. ಅದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ಶಿಷ್ಯರಾಗಿದ್ದು, ಸರಳ, ಸಜ್ಜನಿಕೆ ರಾಜಕಾರಣಿಯಾದ ಮಾಜಿ ಶಾಸಕ ಎಸ್. ಜಯಣ್ಣ ಅವರು ಕೂಡ ಕೊಳ್ಳೇಗಾಲ ಕ್ಷೇತ್ರದಲ್ಲಿ 2 ಬಾರಿ ಶಾಸಕರಾಗಿ ಜಿಲ್ಲೆಗೆ ಅಪಾರ ಕೊಡುಗೆ ನೀಡಿದ್ದಾರೆ ಅವರ ನಿಧನದಿಂದ ರಾಜ್ಯಕ್ಕೆ, ಜಿಲ್ಲೆಗೆ ತುಂಬಲಾರದ ನಷ್ಟ ಉಂಟಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೆಲೆಸಲಿ, ಅವರ ಕುಟುಂಬ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಆಶಿಸಿದರು.ನಗರಸಭಾ ಮಾಜಿ ಅಧ್ಯಕ್ಷ ಮಹದೇವನಾಯಕ, ಚಿನ್ನಮುತ್ತು, ರಾಮಸಮುದ್ರ ನಾಗಬಸವಣ್ಣ, ಪಣ್ಯದಹುಂಡಿ ರಾಜು, ಲಕ್ಷ್ಮೀನರಸಿಂಹ, ಲಿಂಗರಾಜು, ಮಹೇಶ್‌ಗೌಡ, ಮಹದೇವಸ್ವಾಮಿ, ಗೋವಿಂದಶೆಟ್ಟಿ, ಅಸ್ಲಾಂಪಾಷ, ರಾಚಪ್ಪ, ತಾಂಡವಮೂರ್ತಿ, ಕರಿಯನಕಟ್ಟೆ ಮಾದೇಶ್, ಮಹೇಶ್, ಚೆಲುವರಾಜು, ಮುತ್ತಿಗೆ ಗೋವಿಂದರಾಜು ಹಾಜರಿದ್ದರು.