ಕರ್ಣಾಟಕ ಬ್ಯಾಂಕ್‌ ಸಂಸ್ಥಾಪಕರ ದಿನಾಚರಣೆ

| Published : Feb 19 2025, 12:49 AM IST

ಸಾರಾಂಶ

ಮಂಗಳೂರಿನ ಕರ್ಣಾಟಕ ಬ್ಯಾಂಕ್‌ನ ಪ್ರಧಾನ ಕಚೇರಿ ಕಟ್ಟಡದಲ್ಲಿ ಮಂಗಳವಾರ ಬ್ಯಾಂಕಿನ ಸಂಸ್ಥಾಪಕರ ದಿನಾಚರಣೆ ನಡೆಯಿತು. ಆಧ್ಯಾತ್ಮಿಕ ಕ್ಷೇತ್ರದ ಸಾಧಕ ಸದ್ಗುರು ಮಧುಸೂದನ್‌ ಸಾಯಿ ಪ್ರಧಾನ ಉಪನ್ಯಾಸ ನೀಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಇತ್ತೀಚಿನ ವರ್ಷಗಳಲ್ಲಿ ಸೈಬರ್‌ ಕ್ರೈಮ್‌ಗಳಂತಹ ಹಣಕಾಸು ಸಂಬಂಧಿ ಅಪರಾಧ ಕೃತ್ಯಗಳು ಏರಿಕೆಯಾಗುತ್ತಿದ್ದು, ಹಿರಿಯ ನಾಗರಿಕರು ಹೆಚ್ಚಾಗಿ ಬಲಿಪಶುಗಳಾಗುತ್ತಿದ್ದಾರೆ. ಬ್ಯಾಂಕಿಂಗ್‌ ಸಂಸ್ಥೆಗಳು ಇಂತಹ ಅಪರಾಧಗಳ ಕುರಿತು ಜನರಿಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕು ಎಂದು ಆಧ್ಯಾತ್ಮಿಕ ಕ್ಷೇತ್ರದ ಸಾಧಕ ಸದ್ಗುರು ಮಧುಸೂದನ್‌ ಸಾಯಿ ಸಲಹೆ ನೀಡಿದ್ದಾರೆ.

ನಗರದಲ್ಲಿರುವ ಕರ್ಣಾಟಕ ಬ್ಯಾಂಕ್‌ನ ಪ್ರಧಾನ ಕಚೇರಿ ಕಟ್ಟಡದಲ್ಲಿ ಮಂಗಳವಾರ ಬ್ಯಾಂಕಿನ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಉಪನ್ಯಾಸ ನೀಡಿದರು.

ಜನರು ಜೀವನಮಾನ ಪೂರ್ತಿ ಕಷ್ಟಪಟ್ಟು ಕೂಡಿಟ್ಟ ಹಣವನ್ನು ಸೈಬರ್‌ ಅರೆಸ್ಟ್‌ ಇತ್ಯಾದಿ ತಂತ್ರಗಾರಿಕೆಗಳ ಮೂಲಕ ಹ್ಯಾಕರ್‌ಗಳು ಕೊಳ್ಳೆ ಹೊಡೆಯುತ್ತಿದ್ದಾರೆ. ಬಹುತೇಕ ಪ್ರಕರಣಗಳಲ್ಲಿ ಹ್ಯಾಕರ್‌ಗಳು ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳುತ್ತಾರೆ. ಈ ಕುರಿತು ಬ್ಯಾಂಕಿಂಗ್‌ ಸಂಸ್ಥೆಗಳು ಗಂಭೀರ ಗಮನ ಹರಿಸಿ, ತಮ್ಮ ಕೈಲಾದಷ್ಟು ಪ್ರಮಾಣದಲ್ಲಿ ಜನರಿಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕಿದೆ ಎಂದು ಹೇಳಿದರು.

ಧರ್ಮ, ತ್ಯಾಗದಿಂದ ಸಾಧನೆ:

ಬ್ಯಾಂಕಿಂಗ್‌ ಸೇರಿದಂತೆ ಪ್ರತಿಯೊಂದು ಕ್ಷೇತ್ರದ ಸಾಧನೆಗೆ ಧರ್ಮ ಮತ್ತು ತ್ಯಾಗವೇ ಮೂಲ ಪ್ರೇರಣೆ. ಸರಿಯಾದ ದಾರಿಯಲ್ಲಿ ಸರಿಯಾದುದನ್ನೇ ಮಾಡುವುದು ಧರ್ಮ. ತಪ್ಪು ಘಟಿಸಿದರೆ ಅಲ್ಲಿ ಧರ್ಮಕ್ಕೆ ಕೊನೆಯ ಸ್ಥಾನ ನೀಡಲಾಗಿದೆ ಎಂದೇ ಅರ್ಥ. ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಧರ್ಮ ಪರಿಪಾಲನೆ ಎನ್ನುವುದು ಅತ್ಯಂತ ಮುಖ್ಯ. ಕರ್ಣಾಟಕ ಬ್ಯಾಂಕ್‌ ತನ್ನ ಸುತ್ತಲಿನ ಸ್ಪರ್ಧಾತ್ಮಕ ಪ್ರಪಂಚದ ನಡುವೆ ಉತ್ತುಂಗ ಸ್ಥಾನವನ್ನು ಉಳಿಸಿಕೊಂಡಿದ್ದರೆ ಅದು ಪಾಲನೆ ಮಾಡುತ್ತಿರುವ ನಿಜವಾದ ಧರ್ಮವೇ ಕಾರಣ ಎಂದು ಮಧುಸೂದನ್‌ ಸಾಯಿ ಶ್ಲಾಘಿಸಿದರು.

ತ್ಯಾಗ ಇಲ್ಲದಿದ್ದರೆ ಧರ್ಮ ಉಳಿಯಲ್ಲ. ಬ್ಯಾಂಕಿಂಗ್‌ ಎನ್ನುವುದು ದಿನದ 24 ಗಂಟೆಯೂ ಕೆಲಸ ಬಯಸುವ ಕ್ಷೇತ್ರ. ಬ್ಯಾಂಕರ್ಸ್‌ಗಳ ವೈಯಕ್ತಿಕ ಸಮಯವೂ ಪರರಿಗಾಗಿ ಮೀಸಲಾಗಿರುತ್ತದೆ. ಗ್ರಾಹಕರ ಅಭ್ಯುದಯಕ್ಕಾಗಿ ಮಾಡುವ ಈ ತ್ಯಾಗವೂ ಧರ್ಮವೇ ಎಂದರು.

ಕರ್ಣಾಟಕ ಬ್ಯಾಂಕ್‌ ಸುದೀರ್ಘ ಧೀಮಂತ ಪರಂಪರೆ ಹೊಂದಿದ್ದು, ಬ್ಯಾಂಕಿನ ಸಂಸ್ಥಾಪಕರಿಗೆ ರಾಜಕೀಯ ಅವಕಾಶ ಸಾಕಷ್ಟು ಒದಗಿ ಬಂದಿದ್ದರೂ ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಬದ್ಧರಾಗಿ ಇದ್ದದ್ದು ಅವರ ಧರ್ಮ ಮಾರ್ಗವನ್ನು ತೋರಿಸುತ್ತದೆ. ಈ ತ್ಯಾಗ, ಧರ್ಮವೇ ಕರ್ಣಾಟಕ ಬ್ಯಾಂಕ್‌ನ್ನು ಇಷ್ಟು ಎತ್ತರಕ್ಕೆ ಏರಿಸಿದೆ ಎಂದು ಮಧುಸೂದನ್‌ ಸಾಯಿ ಹೇಳಿದರು.

ನಗುಮೊಗದ ಸೇವೆ ನೀಡಿ:

ಯಾವುದೇ ಕೆಲಸ ಮಾಡಿ, ಪ್ರೀತಿಯಿಂದ ಮಾಡುವುದು ಉತ್ತಮ. ಕೆಲಸದ ಹೊರತಾಗಿಯೂ ಒಳಿತನ್ನು ಮಾಡುವುದು ಅತ್ಯುತ್ತಮ ಎಂದ ಅವರು, ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ನಗು ಮೊಗದ ಸೇವೆ ಅತ್ಯಂತ ಅಪೇಕ್ಷಣೀಯ. ಇದು ಗ್ರಾಹಕರು ಮತ್ತು ಬ್ಯಾಂಕಿನ ನಡುವಿನ ಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ ಎಂದು ಕಿವಿಮಾತು ಹೇಳಿದರು.

1.3 ಕೋಟಿ ಗ್ರಾಹಕರ ಬ್ಯಾಂಕ್‌:

ಕರ್ಣಾಟಕ ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಶ್ರೀಕೃಷ್ಣನ್‌ ಎಚ್‌. ಮಾತನಾಡಿ, ಬ್ಯಾಂಕ್‌ ಸುದೀರ್ಘ 101 ಸಂವತ್ಸರಗಳನ್ನು ದಾಟಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಕೆಳ ಮತ್ತು ಮಧ್ಯಮ ವರ್ಗಗಳ ಸಬಲೀಕರಣಕ್ಕೆ ಬ್ಯಾಂಕ್ ಇನ್ನಷ್ಟು ಒತ್ತು ನೀಡಲಿದೆ. ಈಗಾಗಲೇ 1.77 ಲಕ್ಷ ಕೋಟಿ ರು.ಗೂ ಅಧಿಕ ವಹಿವಾಟು ನಡೆಸುತ್ತಿರುವ ಕರ್ಣಾಟಕ ಬ್ಯಾಂಕ್‌ 1.3 ಕೋಟಿ ಗ್ರಾಹಕರನ್ನು ಹೊಂದಿದೆ. ಅನೇಕ ಅತ್ಯುನ್ನತ ಪ್ರಶಸ್ತಿಗಳಿಗೂ ಬಾಜನವಾಗಿದೆ ಎಂದರು.

ಬ್ಯಾಂಕಿನ ಸಂಸ್ಥಾಪಕರ ಎಲ್ಲ ಆಶಯಗಳು, ಮೌಲ್ಯಗಳನ್ನು ಕಾಪಾಡಿಕೊಂಡು ಮುಂದುವರಿಸಿಕೊಂಡು ಹೋಗುವುದು ನಮ್ಮ ಬದ್ಧತೆಯಾಗಿದೆ ಎಂದ ಶ್ರೀಕೃಷ್ಣನ್‌, ‘ಭಾರತ್‌ ಕಾ ಕರ್ಣಾಟಕ ಬ್ಯಾಂಕ್‌’ ಎಂಬ ಥೀಮ್‌ನ್ನು ಈ ವರ್ಷವೂ ಮುಂದುವರಿಸಿಕೊಂಡು ಹೋಗಲಿದ್ದೇವೆ ಎಂದು ಹೇಳಿದರು.

ಉತ್ಕೃಷ್ಟ ಬ್ಯಾಂಕಿಂಗ್‌ ಸೇವೆ:

ಬ್ಯಾಂಕ್‌ನ ಅಧ್ಯಕ್ಷ ಪಿ. ಪ್ರದೀಪ್‌ ಕುಮಾರ್‌ ಮಾತನಾಡಿ, ಬ್ಯಾಂಕಿನ ಶತಮಾನೋತ್ತರದ ಈ ಸಮಯದಲ್ಲಿ ನವ ಚೈತನ್ಯದೊಂದಿಗೆ ಉತ್ಕೃಷ್ಟ ಬ್ಯಾಂಕಿಂಗ್‌ ಸೇವೆ ನೀಡುತ್ತಾ ಮುನ್ನಡೆಯುತ್ತಿದ್ದೇವೆ. ಬದಲಾಗುತ್ತಿರುವ ಆಧುನಿಕ ದಿನಗಳ ಅಗತ್ಯತೆಗೆ ತಕ್ಕಂತೆ ಕರ್ಣಾಟಕ ಬ್ಯಾಂಕ್‌ ಜನರಿಗೆ ಅತ್ಯುತ್ತಮ ಸೇವೆ ನೀಡಲು ಬದ್ಧವಾಗಿದೆ ಎಂದರು.

ಇದಕ್ಕೂ ಮೊದಲು ಅತಿಥಿಗಳು, ಬ್ಯಾಂಕಿನ ಸಂಸ್ಥಾಪಕರ ಭಾವಚಿತ್ರಗಳಿಗೆ ಪುಷ್ಪ ಗೌರವ ಸಲ್ಲಿಸಿದರು. ಸದ್ಗುರು ಮಧುಸೂಧನ್‌ ಸಾಯಿ ಅವರನ್ನು ಬ್ಯಾಂಕಿನ ಅಧ್ಯಕ್ಷರು, ಎಂಡಿ ಮತ್ತು ಸಿಇಒ ಸನ್ಮಾನಿಸಿದರು. ಸಮಾರಂಭದ ಬಳಿಕ ಕರ್ಣಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು. ವಿವಿಧ ಕ್ಷೇತ್ರಗಳ ಗಣ್ಯರು, ಗ್ರಾಹಕರು ಇದ್ದರು.