ಸಾರಾಂಶ
ಕನ್ನಡಪ್ರಭ ವಾರ್ತೆ ಬಳ್ಳಾರಿಗಣಿನಗರಿ ಬಳ್ಳಾರಿ ಸೇರಿದಂತೆ ಜಿಲ್ಲಾದ್ಯಂತ ಬುಧವಾರ ಕನ್ನಡ ರಾಜ್ಯೋತ್ಸವ ಸಂಭ್ರಮ ಮೇಳೈಸಿತು. ಮಕ್ಕಳು, ಮಹಿಳೆಯರು, ವಿದ್ಯಾರ್ಥಿ ಯುವಜನರು ಹಾಗೂ ಕನ್ನಡಪ್ರಿಯರು ರಾಜ್ಯೋತ್ಸವ ಸಡಗರದಲ್ಲಿ ಪಾಲ್ಗೊಂಡು ಭಾಷಾ ಪ್ರೀತಿ ಮೆರೆದರು.
ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳು, ಖಾಸಗಿ ಸಂಘ- ಸಂಸ್ಥೆಗಳಲ್ಲಿ ಹೆಚ್ಚು ಲವಲವಿಕೆಯ ಕನ್ನಡ ರಾಜ್ಯೋತ್ಸವ ಆಚರಣೆ ಕಂಡುಬಂತು. ರಾಜ್ಯೋತ್ಸವ ಹಿನ್ನೆಲೆಯಲ್ಲಿ ನಗರದ ಪ್ರಮುಖ ವೃತ್ತಗಳು, ರಸ್ತೆಗಳಲ್ಲಿ ಕನ್ನಡ ಬಾವುಟಗಳು ರಾರಾಜಿಸಿದವು.ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ೬೮ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಅವರು, ಕರ್ನಾಟಕ ಏಕೀಕರಣಕ್ಕಾಗಿ ಬಳ್ಳಾರಿ ಜಿಲ್ಲೆ ನೀಡಿದ ಕೊಡುಗೆಯನ್ನು ಸ್ಮರಿಸಿದರು.
ಕರ್ನಾಟಕ ಏಕೀಕರಣದ ಸಮಯದಲ್ಲಿ ಹೋರಾಡಿದ ಮಹನೀಯರ ಹೆಸರನ್ನು ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳಿಗೆ ನಾಮಕರಣ ಮಾಡಲಾಗುವುದು. ಕರ್ನಾಟಕ ರಾಜ್ಯವನ್ನು ಒಗ್ಗೂಡಿಸಲು ಮತ್ತು ಏಕೀಕರಣಕ್ಕೆ ಶ್ರಮಿಸಿದ ನಾಯಕರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು, ಮಹನೀಯರ ಹೆಸರುಗಳನ್ನು ನಗರದ ಪ್ರಮುಖ ರಸ್ತೆಗಳು, ವೃತ್ತಗಳಿಗೆ ನಾಮಕರಣ ಮಾಡಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.ಇಡೀ ವರ್ಷ ಕನ್ನಡ ಕಾರ್ಯಕ್ರಮ:
ಮೈಸೂರು ರಾಜ್ಯವು ಕರ್ನಾಟಕ ಎಂದು ಮರುನಾಮಕರಣವಾಗಿ ೧ನೇ ನವಂಬರ್ ೨೦೨೩ಕ್ಕೆ ೫೦ ವರ್ಷ ಪೂರ್ಣಗೊಂಡ ಈ ಶುಭ ಸಂದರ್ಭದಲ್ಲಿ ರಾಜ್ಯ ಸರ್ಕಾರವು “ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ” ಎಂಬ ಹೆಸರಿನಲ್ಲಿ ಇಡೀ ವರ್ಷ ಕರ್ನಾಟಕ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡು ನುಡಿಗೆ ಸಂಬಂಧಿಸಿದಂತೆ ಮತ್ತು ಯುವ ಜನತೆಯಲ್ಲಿ ಕನ್ನಡ- ಕನ್ನಡಿಗ-ಕರ್ನಾಟಕದ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಚಿವ ನಾಗೇಂದ್ರ ತಿಳಿಸಿದರು.ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕರ್ನಾಟಕದಲ್ಲಿ ಜನಿಸಿದ ನಾವೆಲ್ಲರೂ ಧನ್ಯರು. ಕೊನೆ ಉಸಿರುವವ ತನಕ ಕನ್ನಡಿಗರಾಗಿಯೇ ಇರೋಣ ಮತ್ತು ಬಾಳೋಣ ಎಂದು ಕರೆ ನೀಡಿದರು.
ಇದೇ ವೇಳೆ ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳು ಪಿಯುಸಿ ವಿಭಾಗದಲ್ಲಿ ಅತ್ಯಂತ ಹೆಚ್ಚು ಅಂಕ ಪಡೆದ ಯಶ್ವಂತ್, ಗೌರಿ, ಅನುಷಾ, ಪದ್ಮಾವತಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟ್ಯಾಪ್ ವಿತರಣೆ ಮಾಡಲಾಯಿತು.ವಿಜೃಂಭಣೆಯ ಸ್ತಬ್ಧಚಿತ್ರಗಳ ಮೆರವಣಿಗೆ:
೬೮ನೇ ಕನ್ನಡ ರಾಜ್ಯೋತ್ಸವ ಮೆರವಣಿಗೆಯಲ್ಲಿ ಭಾಗವಹಿಸಿದ್ದ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳು ಗಮನ ಸೆಳೆದವು. ಮೆರವಣಿಗೆಗೆ ಜಿಲ್ಲಾ ಸಚಿವ ಬಿ.ನಾಗೇಂದ್ರ ಚಾಲನೆ ನೀಡಿದರು.ಕೆಕೆಆರ್‌ಟಿಸಿ ನಿಗಮದಿಂದ ಶಕ್ತಿ ಯೋಜನೆಯ ಕುರಿತ ನಾರಿಮಣಿಯರ ಸ್ತಬ್ಧಚಿತ್ರ, ಮಹಾನಗರ ಪಾಲಿಕೆಯಿಂದ ತ್ಯಾಜ್ಯ ನಿರ್ವಹಣೆ ಮತ್ತು ವಿಲೇವಾರಿ ಕುರಿತ ಜಾಗೃತಿ ಫಲಕ, ಆರೋಗ್ಯ ಇಲಾಖೆಯಿಂದ ಆಯುಷ್ಮಾನ್ ಯೋಜನೆಯ ಲಸಿಕೆ ಜಾಗೃತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಗೃಹಲಕ್ಷ್ಮಿ ಯೋಜನೆ ಕುರಿತ ಸ್ತಬ್ಧಚಿತ್ರ, ಜೆಸ್ಕಾಂ ಇಲಾಖೆಯಿಂದ ಗೃಹಜ್ಯೋತಿ ಕುರಿತ ಸ್ತಬ್ಧಚಿತ್ರ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಸೇರಿದಂತೆ ಒಟ್ಟು ೧೫ ಸ್ತಬ್ಧಚಿತ್ರಗಳನ್ನು ರೂಪಿಸಲಾಗಿತ್ತು.
ನಗರದ ಡಾ. ರಾಜ್‌ಕುಮಾರ್ ರಸ್ತೆಯ ಸರ್ಕಾರಿ(ಮಾಪು) ಪದವಿ ಕಾಲೇಜು ಮೈದಾನದಿಂದ ಆರಂಭಗೊಂಡ ಸ್ತಬ್ಧಚಿತ್ರಗಳ ಮೆರವಣಿಗೆ ಗಡಗಿ ಚೆನ್ನಪ್ಪ ವೃತ್ತದ ಮೂಲಕ ಮೀನಾಕ್ಷಿ ವೃತ್ತ, ಬ್ರೂಸ್ ಪೇಟೆ ಪೊಲೀಸ್ ಠಾಣೆ ಮಾರ್ಗವಾಗಿ ಎಚ್.ಆರ್. ಗವಿಯಪ್ಪ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಸಾಗಿತು.ಮೇಯರ್ ಡಿ. ತ್ರಿವೇಣಿ, ಬಳ್ಳಾರಿ ವಲಯ ಪೊಲೀಸ್ ಮಹಾನಿರೀಕ್ಷಕ ಬಿ.ಎಸ್. ಲೋಕೇಶ್‌ಕುಮಾರ್, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಜಿಪಂ ಸಿಇಒ ರಾಹುಲ್ ಸಂಕನೂರ, ಸಹಾಯಕ ಆಯುಕ್ತ ಹೇಮಂತ್ ಕುಮಾರ್, ಎಡಿಸಿ ಮೊಹಮ್ಮದ್ ಝುಬೇರಾ ಇತರರು ಭಾಗವಹಿಸಿದ್ದರು.