ಧಾರವಾಡ:
ಸರ್ಕಾರದ ಶೈಕ್ಷಣಿಕ ಸಂಸ್ಥೆಗಳು ಮತ್ತು ಖಾಸಗಿ ಸಹಭಾಗಿತ್ವದ ಮೂಲಕ ಪ್ರವಾಸೋದ್ಯಮ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸಲು ಸಾಧ್ಯ ಎಂದು ಬೆಂಗಳೂರಿನ ಅಡಿಗಾಸ್ ಯಾತ್ರಾ ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ನಾಗರಾಜ ಅಡಿಗಾಸ್ ಹೇಳಿದರು.ಕರ್ನಾಟಕ ಕಲಾ ಕಾಲೇಜಿನ ಪ್ರವಾಸೋದ್ಯಮ ಅಧ್ಯಯನ ವಿಭಾಗದ ಡಿಜಿಟಲ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಅಡಿಗಾಸ್ ಯಾತ್ರಾ ಸಂಸ್ಥೆ ಮತ್ತು ಕರ್ನಾಟಕ ಕಲಾ ಕಾಲೇಜಿನ ಮಧ್ಯೆ ಒಪ್ಪಂದಕ್ಕೆ ಸಹಿ ಹಾಕಿ ಮಾತನಾಡಿದ ಅವರು, 32 ವರ್ಷದಿಂದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಸೇವೆಯನ್ನು ಅಡಿಗಾಸ್ ಸಂಸ್ಥೆ ಒದಗಿಸುತ್ತಿದೆ. ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದಿದ್ದು, ಸಂಸ್ಥೆಯು ವೃತ್ತಿಪರ ಸಂಸ್ಥೆಗಳ ಜತೆಗೆ ಒಪ್ಪಂದ ಮಾಡಿಕೊಂಡಿದೆ. ವಿದ್ಯಾರ್ಥಿಗಳಿಗೆ ತರಬೇತಿ, ಉದ್ಯೋಗ ಸೇರಿದಂತೆ ಅನೇಕ ಚಟುವಟಿಕೆ ಮತ್ತು ಅವಕಾಶ ಒದಗಿಸುತ್ತಿದೆ. ಇದೀಗ ಕರ್ನಾಟಕ ಕಾಲೇಜಿನ ಪ್ರವಾಸೋದ್ಯಮ ಜತೆಗೆ ಸಂಸ್ಥೆಯು ಗುರುತಿಸಿಕೊಂಡಿದೆ ಎಂದರು.
ಭಾರತದಲ್ಲಿ ಪ್ರವಾಸೋದ್ಯಮಕ್ಕೆ ಉತ್ತಮ ಅವಕಾಶವಿದೆ. ಧಾರ್ಮಿಕ ಮತ್ತು ಐತಿಹಾಸಿಕ ಪರಂಪರೆ ಹೊಂದಿದ್ದು, ಧಾರ್ಮಿಕ ಪ್ರವಾಸೋದ್ಯಮಕ್ಕೆ ಹೆಚ್ಚು ಮಹತ್ವ ಪಡೆದಿದೆ. ಆರೋಗ್ಯ ಪ್ರವಾಸೋದ್ಯಮ ಪ್ರಸ್ತುತತೆ ಪಡೆದಿದ್ದು ಮೂಲಭೂತ ಸೌಕರ್ಯ ಒದಗಿಸುವ ಮೂಲಕ ಪ್ರವಾಸೋದ್ಯಮಕ್ಕೆ ಪೂರಕ ವಾತಾವರಣ ನಿರ್ಮಿಸಲು ಸಾಧ್ಯ. ಆದ್ದರಿಂದ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಕೈ ಜೋಡಿಸಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.ಕರ್ನಾಟಕ ಕಲಾ ಕಾಲೇಜಿನ ಪ್ರವಾಸೋದ್ಯಮ ಅಧ್ಯಯನ ವಿಭಾಗದ ನಿರ್ದೇಶಕ ಡಾ. ಜಗದೀಶ ಕಿವುಡನವರ ಮಾತನಾಡಿ, ವಿಭಾಗವು ವಿದ್ಯಾರ್ಥಿಗಳಿಗೆ ವೃತ್ತಿಪರ ತರಬೇತಿ ನೀಡುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಮತ್ತು ಅನೇಕ ಹೋಟೆಲ್ ಉದ್ಯಮದ ಜತೆ ಒಪ್ಪಂದ ಮಾಡಿಕೊಂಡಿದೆ. ಭವಿಷ್ಯದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗ ಅವಕಾಶಗಳಿಗೆ ತಕ್ಕಂತೆ ಕರ್ನಾಟಕ ಕಲಾ ಕಾಲೇಜಿನ ಪ್ರವಾಸೋದ್ಯಮ ವಿಭಾಗ ಅನೇಕ ಚಟುವಟಿಕೆ ಆಯೋಜಿಸುತ್ತಿದೆ ಎಂದರು. ಪ್ರಾಚಾರ್ಯ ಡಾ. ಐ.ಸಿ. ಮುಳಗುಂದ ಮಾತನಾಡಿ, ಪ್ರವಾಸೋದ್ಯಮ ವಿಭಾಗದ ಇದು 24ನೇ ಒಪ್ಪಂದ ಆಗಿದೆ ಎಂದರು.
ಇದೇ ವೇಳೆ ವಿಭಾಗದ ವೆಬ್‌ಸೈಟ್‌ನ್ನು ನಾಗರಾಜ ಅಡಿಗಾಸ್ ಅನಾವರಣಗೊಳಿಸಿದರು. ಪ್ರೊ. ಎಸ್. ರಾಜಶೇಖರ, ಡಾ. ಸುಷ್ಮಾ ಮಳಲಿ, ಡಾ. ಕೇದಾರ, ಪ್ರೊ. ಸಂದೀಪ ಘೊರ್ಪಡೆ, ಡಾ. ಮನಾಲಿ, ಡಾ. ಪ್ರಭಾಕರ ಕಾಂಬಳೆ ಇದ್ದರು.