ಕರ್ನಾಟಕ ರಾಜ್ಯದಲ್ಲಿ ಸಾಮಾಜಿಕ ನ್ಯಾಯ, ಅಹಿಂದ ತತ್ವ ಹಾಗೂ ಅಲ್ಪಸಂಖ್ಯಾತರ ಹಕ್ಕುಗಳ ಪರವಾಗಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಇತ್ತೀಚಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯ ಹಾಗೂ ಅಹಿಂದ ವರ್ಗದ ಆಶೋತ್ತರಗಳನ್ನು ಕಡೆಗಣಿಸಿರುವುದು ನೋವಿನ ಸಂಗತಿ ಎಂದು ಮಂಗಳೂರಿನ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಮಂಗಳೂರು: ಕರ್ನಾಟಕ ರಾಜ್ಯದಲ್ಲಿ ಸಾಮಾಜಿಕ ನ್ಯಾಯ, ಅಹಿಂದ ತತ್ವ ಹಾಗೂ ಅಲ್ಪಸಂಖ್ಯಾತರ ಹಕ್ಕುಗಳ ಪರವಾಗಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಇತ್ತೀಚಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯ ಹಾಗೂ ಅಹಿಂದ ವರ್ಗದ ಆಶೋತ್ತರಗಳನ್ನು ಕಡೆಗಣಿಸಿರುವುದು ನೋವಿನ ಸಂಗತಿ ಎಂದು ಮಂಗಳೂರಿನ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ದ.ಕ. ಜಿಲ್ಲಾ ಮುಸ್ಲಿಂ ಸಮಾಜದ ಪ್ರಧಾನ ಕಾರ್ಯದರ್ಶಿ ಹನೀಫ್ ಖಾನ್ ಕೊಡಾಜೆ ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಪುಟ ವಿಸ್ತರಣೆಯಲ್ಲಿ ಸಮುದಾಯದ ಭಾವನೆಗಳಿಗೆ ತಕ್ಕ ಗೌರವ ದೊರೆಯದಿರುವುದು ತೀವ್ರ ನಿರಾಶೆ ಉಂಟುಮಾಡಿದೆ ಎಂದರು.
ವಿಶೇಷವಾಗಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಪ್ರಬಲ ಧ್ವನಿಯಾಗಿ ಗುರುತಿಸಿಕೊಂಡಿರುವ, ಸಮುದಾಯದ ಸಮಸ್ಯೆಗಳನ್ನು ನಿರಂತರವಾಗಿ ಸರ್ಕಾರದ ಮಟ್ಟದಲ್ಲಿ ಪ್ರಸ್ತಾಪಿಸುತ್ತಾ ಬಂದಿದೆ. ಕಾಂಗ್ರೆಸ್ ಪಕ್ಷದ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿರುವ ಸಚಿವರಾದ ಬಿ. ಝಡ್. ಜಮೀರ್ ಅಹಮದ್ ಖಾನ್ ಅವರಿಗೆ ಸಚಿವ ಸಂಪುಟದಲ್ಲಿ ಇನ್ನಷ್ಟು ಮಹತ್ವದ ಸ್ಥಾನಮಾನ ನೀಡದಿರುವುದು. ಮೊದಲ ಹಂತದ ಸಂಪುಟ ವಿಸ್ತರಣೆಯಲ್ಲಿ ಅವರನ್ನು ಪರಿಗಣಿಸದಿರುವುದು ಸಮುದಾಯಕ್ಕೆ ಆದ ಅತಿದೊಡ್ಡ ಅನ್ಯಾಯವಾಗಿದೆ ಎಂದರು.ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಸಚಿವ ಸಂಪುಟ ಮತ್ತು ಪ್ರಮುಖ ಆಡಳಿತಾತ್ಮಕ ಹುದ್ದೆಗಳಲ್ಲಿ ನ್ಯಾಯಯುತ ಪ್ರಾತಿನಿಧ್ಯ ನೀಡಬೇಕು. ಕನಿಷ್ಠ ಐದು ಸಚಿವ ಸ್ಥಾನ ಮುಸ್ಲಿಂ ಸಮುದಾಯಕ್ಕೆ ನೀಡಬೇಕು. ದಲಿತ ಸಮುದಾಯದ ಹಿರಿಯ ಅನುಭವಿ ನಾಯಕ, ಪ್ರಗತಿಪರ ಸಂಘಟನೆಗಳನ್ನು ಸದಾ ಪ್ರೋತ್ಸಾಹಿಸುವ ಡಾ.ಎಚ್.ಸಿ.ಮಹಾದೇವಪ್ಪ ಅವರನ್ನೂ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು. ಅಹಿಂದ ವರ್ಗಗಳ ರಾಜಕೀಯ ಹಕ್ಕುಗಳನ್ನು ಕಡೆಗಣಿಸುವ ಪ್ರವೃತ್ತಿಯನ್ನು ಸರ್ಕಾರ ತಕ್ಷಣ ನಿಲ್ಲಿಸಬೇಕು ಎಂದರು.
ಮುಖಂಡರಾದ ಸಿರಾಜ್ ಬಜಪೆ, ಸಲಾಂ ಉಚ್ಚಿಲ್, ಸಲೀಂ ಫರಂಗಿಪೇಟೆ, ಇಮ್ತಿಯಾಜ್ ಕೆದಂಬಾಡಿ ಇದ್ದರು.