ದೇವಕಿಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ

| Published : Nov 06 2024, 12:31 AM IST

ಸಾರಾಂಶ

ಮಲೆಕುಡಿಯ ಸಮುದಾಯಕ್ಕೆ ಸೇರಿದ ಉರ್ಟಿಕೊಟ್ಟು ಎಂಬ ಸಂಪ್ರದಾಯಿಕ ನೃತ್ಯದಲ್ಲಿ ದೇವಕಿ ಮಾಡಿದ ಸಾಧನೆ ಗಮನಿಸಿ ಈ ಪ್ರಶಸ್ತಿ ಲಭಿಸಿದೆ.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ಮೂಲತಃ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ತೋರ ಗ್ರಾಮದವರಾದ ದೇವಕಿ ಕೆ.ಸಿ ಅವರು ಕರ್ನಾಟಕ ಜಾನಪದ ಅಕಾಡೆಮಿಯ 2023ನೇ ಸಾಲಿನ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಮಲೆಕುಡಿಯ ಸಮುದಾಯಕ್ಕೆ ಸೇರಿದ ಉರ್ಟಿಕೊಟ್ಟು ಎಂಬ ಸಂಪ್ರದಾಯಿಕ ನೃತ್ಯದಲ್ಲಿ ಇವರು ಮಾಡಿದ ಸಾಧನೆಯನ್ನು ಗಮನಿಸಿ ಈ ಪ್ರಶಸ್ತಿ ಲಭಿಸಿದೆ.

ಸುಮಾರು 25 ವರ್ಷಗಳಿಂದ ದೇವಕಿ ಅವರನ್ನು ಒಳಗೊಂಡ ತೋರ ಗ್ರಾಮದ ಮಲೆ ಕುಡಿಯ ಸಮುದಾಯದ ಹೆಂಗಸರ ಗುಂಪು ಕರ್ನಾಟಕದ ವಿವಿಧಡೆ ಈ ಉರ್ಟಿಕೊಟ್ಟು ನೃತ್ಯವನ್ನು ಪ್ರದರ್ಶಿಸುತ್ತಿದ್ದಾರೆ. ಉರ್ಟಿಕೊಟ್ಟು ಎಂಬುವುದು ಮಲೆ ಕುಡಿಯರ ಸಮುದಾಯಕ್ಕೆ ಸೇರಿದ ಒಂದು ಸಾಂಪ್ರದಾಯಿಕ ಜಾನಪದ ನೃತ್ಯವಾಗಿದ್ದು, ಇದರಲ್ಲಿ ಹೆಂಗಸರ ಗುಂಪು ದುಡಿಯನ್ನು ಬಾರಿಸುತ್ತಾ ಪದಗಳನ್ನು ಹಾಡುತ್ತಾ ಸುತ್ತಲೂ ಕುಣಿಯುತ್ತಾರೆ. ಉರ್ಟಿಕೊಟ್ಟು ಜಾನಪದ ನೃತ್ಯದಲ್ಲಿ ದೇವಕಿ ಅವರ ಸಾಧನೆಯನ್ನು ಗಮನಿಸಿದ ಕೊಡವ ಸಾಹಿತ್ಯ ಅಕಾಡೆಮಿ ಈ ಹಿಂದೆ ಇವರನ್ನು ಗೌರವಿಸಿತ್ತು. ಅದೇ ರೀತಿ ವಿರಾಜಪೇಟೆ ಶಾಸಕ ಎ .ಎಸ್. ಪೊನ್ನಣ್ಣನವರು ಕಳೆದ ವರ್ಷದ ಹುತ್ತರಿ ಹಬ್ಬದ ಸಂದರ್ಭ ಇವರನ್ನು ಗೌರವಿಸಿ ಸನ್ಮಾನಿಸಿದ್ದರು. ದೇವಕಿ ಯವರು ದಿ. ಚಂಗಪ್ಪ ಅವರ ಪತ್ನಿಯಾಗಿದ್ದು, 3 ಜನ ಗಂಡು ಮಕ್ಕಳೊಂದಿಗೆ ವಿರಾಜಪೇಟೆ ತಾಲೂಕಿನ ತೋರ ಗ್ರಾಮದಲ್ಲಿ ನೆಲೆಸಿದ್ದಾರೆ.

ಕರ್ನಾಟಕ ಜಾನಪದ ಅಕಾಡೆಮಿಯಿಂದ ಪ್ರಶಸ್ತಿ ಬಂದಿರುವುದು ಸಂತೋಷವಾಗಿದೆ. ನನ್ನ ದೇಹದಲ್ಲಿ ಶಕ್ತಿ ಇರುವವರೆಗೂ ಕಲಾ ಸೇವೆಯನ್ನು ಮಾಡುತ್ತೇನೆ. ನನ್ನಿಂದ ಎಷ್ಟು ಜನರಿಗೆ ಕಲಿಸಲು ಸಾಧ್ಯವಿದೆಯೋ ಅಷ್ಟು ಜನರಿಗೆ ಕಲಿಸಲು ಪ್ರಯತ್ನಿಸುತ್ತೇನೆ ಎಂದು ವಿರಾಜಪೇಟೆ ಜಾನಪದ ಕಲಾವಿದೆ ದೇವಕಿ ಕೆ.ಸಿ. ಹೇಳಿದರು.