ಸಾರಾಂಶ
ಐಸಿಯು ಲಭ್ಯತೆ ಬಗ್ಗೆ ಗಮನವಿಡಿ: ಆಯುಕ್ತ. ಡಿಸೆಂಬರ್‌ನಲ್ಲಿ ಸೋಂಕು ಹೆಚ್ಚಳ ಸಾಧ್ಯತೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದಲ್ಲಿ ಇನ್‌ಫ್ಲ್ಯೂಯೆಂಜಾ ಸೇರಿದಂತೆ ವಿವಿಧ ವೈರಾಣು ಸೋಂಕಿನ ಹಿನ್ನೆಲೆಯಲ್ಲಿ ಐಸಿಯು ದಾಖಲಾತಿ ಹೆಚ್ಚಾಗಿರುವ ಬೆನ್ನಲ್ಲೇ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಅವರು ಸಭೆ ನಡೆಸಿ ಐಸಿಯು ಸೇರಿದಂತೆ ಅಗತ್ಯ ಬೆಡ್ ಲಭ್ಯತೆ ಬಗ್ಗೆ ನಿಗಾ ಇಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಇನ್‌ಫ್ಲ್ಯೂಯೆಂಜಾ ಸೇರಿದಂತೆ ವಿವಿಧ ವೈರಾಣು ಸೋಂಕುಗಳಿಂದ ಉಸಿರಾಟ ಸಮಸ್ಯೆ, ನ್ಯುಮೋನಿಯಾ ಮತ್ತಿತರ ಕಾರಣಗಳಿಗೆ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾತಿ ಹೆಚ್ಚಾಗಿದೆ. ಈ ಬಗ್ಗೆ ಖಾಸಗಿ ಆಸ್ಪತ್ರೆಗಳ ವೈದ್ಯರು ಸಹ ಆತಂಕ ವ್ಯಕ್ತಪಡಿಸಿದ್ದರು. ಈ ಬಗ್ಗೆ ಶುಕ್ರವಾರ ‘ಕನ್ನಡಪ್ರಭ’ ವಿಶೇಷ ವರದಿ ಪ್ರಕಟಿಸಿತ್ತು.ಇದರ ಬೆನ್ನಲ್ಲೇ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಆಯುಕ್ತರು, ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.ಸಭೆಯಲ್ಲಿ ಇನ್‌ಫ್ಲ್ಯೂಯೆಂಜಾ ಎ ಹಾಗೂ ಬಿ ವೈರಾಣುಗಳಿಂದ ಸೋಂಕು ಹೆಚ್ಚಾಗಿದೆ. ಇವರಲ್ಲಿ ದೀರ್ಘಕಾಲೀನ ಅನಾರೋಗ್ಯ ಹೊಂದಿರುವವರಿಗೆ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಐಸಿಯು ದಾಖಲಾತಿಯಲ್ಲೂ ಹೆಚ್ಚಳ ಆಗಿದೆ. ಆದರೆ ಐಸಿಯು ಬೆಡ್ ಕೊರತೆಯಿಂದ ಯಾರಿಗೂ ಚಿಕಿತ್ಸೆ ಇಲ್ಲದಂತಾಗಿಲ್ಲ. ಡಿಸೆಂಬರ್ ವೇಳೆಗೆ ಈ ಪ್ರಕರಣಗಳು ಜಾಸ್ತಿಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ ಎಂದು ತಿಳಿದುಬಂದಿದೆ.ಈ ವೇಳೆ ರಂದೀಪ್, ಪ್ರತಿ ಬಾರಿ ಚಳಿಗಾಲದ ಸೀಸನ್‌ನಲ್ಲಿ ಈ ಪ್ರಕರಣಗಳು ಹೆಚ್ಚಾಗುತ್ತವೆ. ಈ ಬಾರಿ ಬೇಗನೇ ಸೋಂಕು ಪ್ರಕರಣಗಳು ಹೆಚ್ಚಾಗಿ ಕಂಡು ಬಂದಿವೆ. ಸೋಂಕಿನಿಂದ ಸಾವು ಉಂಟಾಗಿರುವ ಪ್ರಕರಣ ವರದಿಯಾಗಿಲ್ಲ. ಹೀಗಾಗಿ ಆತಂಕಪಡುವ ಅಗತ್ಯವಿಲ್ಲ ಆದರೂ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಬೆಡ್‌ಗಳ ಬಗ್ಗೆ ಸೂಕ್ತ ನಿಗಾ ಇಡಿ. ಹೆಚ್ಚುವರಿ ಬೆಡ್ ಅಗತ್ಯವಿದ್ದರೆ ಇಲಾಖೆ ಗಮನಕ್ಕೆ ತಂದು ಕೂಡಲೇ ವ್ಯವಸ್ಥೆ ಮಾಡಿ ಎಂದು ಸೂಚನೆ ನೀಡಿದರು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಇನ್ನು ಮಾ.27ರಂದು ಐಎಲ್‌ಐ/ಸಾರಿ ಹಾಗೂ ಇನ್‌ಫ್ಲ್ಯೂಯೆಂಜಾ ಪ್ರಕರಣ ಹರಡದಂತೆ ತಡೆಯಲು ಹೊರಡಿಸಿದ್ದ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಬೇಕು. ಇದರಂತೆ ಆಸ್ಪತ್ರೆಗಳ ವ್ಯಾಪ್ತಿಯಲ್ಲಿ ರೋಗಿಗಳು, ಆರೋಗ್ಯ ಸಿಬ್ಬಂದಿ, ವೈದ್ಯರು ಮಾಸ್ಕ್ ಧರಿಸಬೇಕು. ಔಷಧಗಳು ಹಾಗೂ ಅಗತ್ಯ ಬೆಡ್ ವ್ಯವಸ್ಥೆ ಮಾಡಬೇಕು. ವಯೋವೃದ್ಧರು ಹಾಗೂ ರೋಗ ನಿರೋಧಕ ಶಕ್ತಿ ಇಲ್ಲದವರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ನಿಗಾ ವಹಿಸಬೇಕು ಎಂದು ಸಭೆಯಲ್ಲಿ ಸೂಚನೆ ನೀಡಿದ್ದಾರೆ.-----ಪರಿಶೀಲಿಸಿ ಕ್ರಮ ಕೈಗೊಳ್ಳಲು ತಿಳಿಸಿದ್ದೇನೆ: ದಿನೇಶ್ನಾನು ತೆಲಂಗಾಣ ಚುನಾವಣಾ ಪ್ರಚಾರದಲ್ಲಿದ್ದೇನೆ. ಇನ್‌ಫ್ಲ್ಯೂಯೆಂಜಾ ಪ್ರಕರಣಗಳು ಹೆಚ್ಚಾಗಿರುವ ಬಗ್ಗೆ ನನ್ನ ಗಮನಕ್ಕೆ ಬಂದ ಕೂಡಲೇ ಅಧಿಕಾರಿಗಳಿಗೆ ಪರಿಶೀಲನೆ ನಡೆಸಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ.- ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ