ನಮ್ಮ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳಿಂದಾಗಿ ತಲಾ ಆದಾಯದಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನ ತಲುಪಿದ್ದು, ರಾಜ್ಯದ ತಲಾದಾಯ ಸರಾಸರಿ 3.39 ಲಕ್ಷ ರು.ಗೆ ತಲುಪಿದೆ. ದೇಶದ ಆರ್ಥಿಕತೆ ಕುಸಿಯುತ್ತಿರುವಾಗ, ಗ್ಯಾರಂಟಿಗಳಿಂದಾಗಿ ರಾಜ್ಯದ ಆರ್ಥಿಕತೆ ವೃದ್ಧಿಯಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.

- ಯೋಜನೆ ಫಲವಾಗಿ ಜನತೆ ತಲಾದಾಯ ಜಂಪ್‌- ರಾಜ್ಯದ ಸರಾಸರಿ ಆದಾಯ ₹3.39 ಲಕ್ಷಕ್ಕೇರಿಕೆ- ದೇಶದ ಆರ್ಥಿಕತೆ ಕುಸಿದರೂ ರಾಜ್ಯದ್ದು ಹೆಚ್ಚಳ

---

ಪ್ರಾದೇಶಿಕ ಅಸಮತೋಲನ

ನಿವಾರಣೆಗೆ ಸರ್ಕಾರ ಬದ್ಧ:

ಸಿದ್ದರಾಮಯ್ಯ ಭರವಸೆಪ್ರಾದೇಶಿಕ ಅಸಮತೋಲನ ನಿವಾರಣೆಗೆ ಹಾಗೂ ಹಿಂದುಳಿದ ತಾಲೂಕುಗಳ ಅಧ್ಯಯನ ನಡೆಸಿ ವರದಿ ನೀಡಲು ರಚಿಸಲಾಗಿರುವ ಪ್ರೊ.ಗೋವಿಂದರಾವ್‌ ಸಮಿತಿ ಜನವರಿಯಲ್ಲಿ ವರದಿ ನೀಡಲಿದ್ದು, ಅದರ ಆಧಾರದಲ್ಲಿ ಹಿಂದುಳಿದ ತಾಲೂಕುಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಶುಕ್ರವಾರ ಉತ್ತರ ಕರ್ನಾಟಕ ಸಮಸ್ಯೆ ಕುರಿತಂತೆ ನಡೆದ ಚರ್ಚೆ ಮೇಲೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸರ್ಕಾರದಿಂದ ರಾಜ್ಯಕ್ಕಾಗುತ್ತಿರುವ ಅನ್ಯಾಯ ಪ್ರಶ್ನಿಸಲು ರಾಜ್ಯ ಸರ್ಕಾರದಿಂದ ಸರ್ವಪಕ್ಷ ನಿಯೋಗ ಕೊಂಡೊಯ್ಯುತ್ತೇವೆ, ಆಗ ವಿಪಕ್ಷ ಸದಸ್ಯರೂ ಜತೆಯಲ್ಲಿ ಬನ್ನಿ ಎಂದೂ ಅವರು ಆಹ್ವಾನಿಸಿದ್ದಾರೆ.

==

ಕನ್ನಡಪ್ರಭ ವಾರ್ತೆ ಸುವರ್ಣ ವಿಧಾನಸೌಧ

ನಮ್ಮ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳಿಂದಾಗಿ ತಲಾ ಆದಾಯದಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನ ತಲುಪಿದ್ದು, ರಾಜ್ಯದ ತಲಾದಾಯ ಸರಾಸರಿ 3.39 ಲಕ್ಷ ರು.ಗೆ ತಲುಪಿದೆ. ದೇಶದ ಆರ್ಥಿಕತೆ ಕುಸಿಯುತ್ತಿರುವಾಗ, ಗ್ಯಾರಂಟಿಗಳಿಂದಾಗಿ ರಾಜ್ಯದ ಆರ್ಥಿಕತೆ ವೃದ್ಧಿಯಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.

ಶುಕ್ರವಾರ ಉತ್ತರ ಕರ್ನಾಟಕ ಸಮಸ್ಯೆ ಕುರಿತ ಚರ್ಚೆ ಮೇಲೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿರೋಧ ಪಕ್ಷದವರು ಪದೇ ಪದೆ ಗ್ಯಾರಂಟಿ ಯೋಜನೆಗಳ ಬಗ್ಗೆ ನಕಾರಾತ್ಮಕವಾಗಿ ಮಾತನಾಡುತ್ತಿದ್ದಾರೆ. ಆದರೆ, ಆ ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿನ ಆರ್ಥಿಕ ಅಸಮಾನತೆ ಕಡಿಮೆಯಾಗುವಂತೆ ಮಾಡಿದೆ. ತಲಾ ಆದಾಯದಲ್ಲಿ ಕರ್ನಾಟಕವು ದೇಶಕ್ಕೇ ಮೊದಲ ಸ್ಥಾನ ಪಡೆಯುವಂತಾಗಿದೆ. ಆದರೂ ಇನ್ನೂ ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ನಡುವಿನ ಅಸಮಾನತೆ ಕಡಿಮೆಯಾಗಿಲ್ಲ. ಗ್ಯಾರಂಟಿ ಯೋಜನೆಗಳಿಗಾಗಿ ಸರ್ಕಾರ 1.06 ಲಕ್ಷ ಕೋಟಿ ರು. ವೆಚ್ಚ ಮಾಡಿದ್ದು, ಅದರಲ್ಲಿ ಉತ್ತರ ಕರ್ನಾಟಕಕ್ಕಾಗಿಯೇ 46,276 ಕೋಟಿ ರು. ವ್ಯಯಿಸಲಾಗಿದೆ. ಗ್ಯಾರಂಟಿ ಯೋಜನೆಗಳ ಒಟ್ಟು ವೆಚ್ಚದಲ್ಲಿ ಶೇ.43.63ರಷ್ಟನ್ನು ಉತ್ತರ ಕರ್ನಾಟಕ ಭಾಗಕ್ಕೆ ಖರ್ಚು ಮಾಡಲಾಗಿದೆ. ಇನ್ನಾದರೂ ವಿಪಕ್ಷಗಳು ಗ್ಯಾರಂಟಿ ಟೀಕಿಸುವುದನ್ನು ಬಿಡಬೇಕು ಎಂದು ಹೇಳಿದರು.

ಉ.ಕ. ಭಾಗದ ಜಿಲ್ಲೆಗಳಲ್ಲಿ ಕಡಿಮೆ ತಲಾದಾಯ:

ರಾಜ್ಯದ ತಲಾ ಆದಾಯ ಹೆಚ್ಚಾಗಿದ್ದರೂ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿನ ತಲಾ ಆದಾಯ ಕಡಿಮೆಯಿದೆ. ಬೆಂಗಳೂರು ನಗರ 7.38 ಲಕ್ಷ ರು. ಅತಿಹೆಚ್ಚಿನ ತಲಾ ಆದಾಯ ಹೊಂದಿದೆ. ಉಳಿದಂತೆ ಕಡಿಮೆ ತಲಾ ಆದಾಯ ಹೊಂದಿರುವ ಕೊನೆಯ 10 ಜಿಲ್ಲೆಗಳಲ್ಲಿ ಎಲ್ಲವೂ ಉತ್ತರ ಕರ್ನಾಟಕ ಭಾಗದ್ದಾಗಿದೆ. ಕಲಬುರಗಿ 1.43 ಲಕ್ಷ ತಲಾ ಆದಾಯ ಹೊಂದುವ ಮೂಲಕ ರಾಜ್ಯದಲ್ಲಿ ಅತಿ ಕಡಿಮೆ ತಲಾ ಆದಾಯ ಹೊಂದಿದ ಜಿಲ್ಲೆಯಾಗಿದೆ. ಈ ಅಸಮಾನತೆ ತೊಡಗಿಸಲು ಸರ್ಕಾರ ಬದ್ಧವಾಗಿದೆ ಎಂದು ಸಿದ್ದರಾಮಯ್ಯ ವಿವರಿಸಿದರು.

==

ಗ್ಯಾರಂಟಿ ಯೋಜನೆ ವಿವರ

ಯೋಜನೆಒಟ್ಟು ಫಲಾನುಭವಿಗಳು ಒಟ್ಟು ಹಣ ವರ್ಗಾವಣೆಉತ್ತರ ಕರ್ನಾಟಕ ಪಾಲು

ಗೃಹ ಲಕ್ಷ್ಮೀ1.24 ಕೋಟಿ52,416 ಕೋಟಿ ರು.24,638 ಕೋಟಿ ರು.

ಗೃಹಜ್ಯೋತಿ1.65 ಕೋಟಿ20,439 ಕೋಟಿ ರು.6,308 ಕೋಟಿ ರು.

ಅನ್ನಭಾಗ್ಯ16,475 ಕೋಟಿ ರು.7,848 ಕೋಟಿ ರು.

ಶಕ್ತಿ617 ಟ್ರಿಪ್‌ಗಳು15,887 ಕೋಟಿ ರು.7,027 ಕೋಟಿ ರು.

ಯುವನಿಧಿ2.84 ಲಕ್ಷ757 ಕೋಟಿ ರು.456 ಕೋಟಿ ರು.

ಒಟ್ಟು--1.06 ಲಕ್ಷ ಕೋಟಿ ರು.46,277 ಕೋಟಿ ರು.

==