ವಿದ್ಯಾರ್ಥಿಗಳು ಸೃಜನಶೀಲರಾದಾಗ ದೇಶ ಬಲಿಷ್ಠ: ಖಾದರ್‌

| Published : Jan 15 2024, 01:48 AM IST

ಸಾರಾಂಶ

ಕುಂದಾಪುರದ ಕೋಡಿಯ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಭಾನುವಾರ ನಡೆದ ಸಂಸ್ಥಾಪಕರ ದಿನಾಚರಣೆ, ವಾರ್ಷಿಕೋತ್ಸವ ಹಾಗೂ ಬ್ಯಾರೀಸ್ ನಾಲೆಡ್ಜೆ ಕ್ಯಾಂಪಸ್ ಉದ್ಘಾಟನಾ ಸಮಾರಂಭದಲ್ಲಿ ಸ್ಪೀಕರ್‌ ಯು.ಟಿ. ಖಾದರ್‌ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕುಂದಾಪುರ

ಶಾಸಕರು, ಸಂಸದರು, ಮಂತ್ರಿಗಳು, ವ್ಯಾಪಾರಸ್ಥರು, ಉದ್ಯಮಿಗಳು, ಅಧಿಕಾರಿಗಳು ಬಲಿಷ್ಠರಾಗೋದರಿಂದ ದೇಶ ಬಲಿಷ್ಠವಾಗೋದಿಲ್ಲ. ಭವಿಷ್ಯದ ಕನಸಿನ ಗುರಿ ಸಾಧನೆಗಾಗಿ ತರಗತಿ ಹಾಗೂ ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳು ಸೃಜನಶೀಲರಾದಾಗ ದೇಶ ಬಲಿಷ್ಠವಾಗುತ್ತದೆ ಎಂದು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.ಇಲ್ಲಿನ ಕೋಡಿಯ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಭಾನುವಾರ ನಡೆದ ಸಂಸ್ಥಾಪಕರ ದಿನಾಚರಣೆ, ವಾರ್ಷಿಕೋತ್ಸವ ಹಾಗೂ ಬ್ಯಾರೀಸ್ ನಾಲೆಡ್ಜೆ ಕ್ಯಾಂಪಸ್ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಜನರ ಎಲ್ಲ ಕಷ್ಟಗಳು ಸರ್ಕಾರದಿಂದ ಪರಿಹಾರವಾಗುವುದಿಲ್ಲ, ಮಕ್ಕಳಲ್ಲಿ ಇಚ್ಛಾ ಶಕ್ತಿ ಇದ್ದಾಗ ಮಾತ್ರ ಪೋಷಕರ ಸಂಕಷ್ಟಗಳು ಪರಿಹಾರವಾಗುತ್ತದೆ. ಸ್ವಾಭಿಮಾನದ ಬದುಕು, ತಾಳ್ಮೆ, ಸಹೋದರತೆಯ ಭಾವನೆಗಳನ್ನು ಒಳಗೊಂಡ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣಗಳು ಮಾತ್ರ ಕ್ರಾಂತಿಕಾರಿ ಬದಲಾವಣೆಗಳಿಗೆ ಕಾರಣವಾಗುತ್ತದೆ. ಅಪಮಾನ, ನಿಂದನೆ, ಟೀಕೆಗಳನ್ನು ಸಹಿಸಿಕೊಂಡಾಗ ಮಾತ್ರ ಸಮಾಜಮುಖಿಯಾಗಿ ಎತ್ತರದ ಸ್ಥಾನ ಪಡೆಯಲು ಸಾಧ್ಯ ಎಂದರು.ಬ್ಯಾರೀಸ್ ಎಜುಕೇಶನ್ ಲೋಗೋ ಅನಾವರಣ ಮಾಡಿದರು. ಶಾಸಕ ಎ.ಕಿರಣ್‌ ಕುಮಾರ ಕೊಡ್ಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಅಬ್ದುಲ್ ರೆಹಮಾನ್ ಬ್ಯಾರಿ ಅಧ್ಯಕ್ಷತೆ ವಹಿಸಿದ್ದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ತುಳಸಿ ಗೌಡ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೂಸಬ್ಬ ಪಿ. ಬ್ಯಾರಿ ಅವರನ್ನು ಗೌರವಿಸಲಾಯಿತು. ಪಂದ್ಯಾಟದಲ್ಲಿ ವಿಜೇತರಾದವರಿಗೆ ಹಾಗೂ ಶೈಕ್ಷಣಿಕ ಸಾಧನೆ ಮಾಡಿದವರನ್ನು ಅಭಿನಂದಿಸಲಾಯಿತು.ಬ್ಯಾರೀಸ್ ಸೀಸೈಡ್ ಪಬ್ಲಿಕ್ ಸ್ಕೂಲ್‌ ಮುಖ್ಯಶಿಕ್ಷಕಿ ಅಶ್ವಿನಿ ಶೆಟ್ಟಿ ಸ್ವಾಗತಿಸಿದರು. ಕೆ.ಮೊಹ್ದೀನ್ ಬ್ಯಾರಿ ಎಜುಕೇಶನ್ ಟ್ರಸ್ಟ್‌ನ ಆಡಳಿತ ಟ್ರಸ್ಟಿ ಸೈಯದ್ ಮೊಹಮ್ಮದ್ ಬ್ಯಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ಯಾರೀಸ್ ಅನುದಾನಿತ ಪ್ರೌಢಶಾಲೆಯ ಮುಖ್ಯಶಿಕ್ಷಕ ಜಯಶೀಲ ಶೆಟ್ಟಿ ಹಾಗೂ ಬ್ಯಾರೀಸ್ ಶಿಕ್ಷಕರ ತರಬೇತಿ ಕಾಲೇಜಿನ ಪ್ರಾಂಶುಪಾಲೆ ಡಾ.ಫಿರ್ದೋಸ್ ವರದಿ ಮಂಡಿಸಿದರು. ಬ್ಯಾರೀಸ್ ಪಿ.ಯು ಕಾಲೇಜಿನ ಉಪನ್ಯಾಸಕಿ ಝಿಯಾನ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಶಮೀರ್ ವಂದಿಸಿದರು, ಉಪನ್ಯಾಸಕರಾದ ಪ್ರೊ.ಹಯವದನ ಹಾಗೂ ಸಂದೀಪ್‌ ಶೆಟ್ಟಿ ನಿರೂಪಿಸಿದರು.