ಸಾರಾಂಶ
ನವದೆಹಲಿ: ತೆರಿಗೆ ಸಂಗ್ರಹದಲ್ಲಿ ದೇಶದಲ್ಲೇ 2ನೇ ಸ್ಥಾನದಲ್ಲಿರುವ ಕರ್ನಾಟಕ, ಕಳೆದೊಂದು ದಶಕದಲ್ಲಿ ತಲಾದಾಯ ಹೆಚ್ಚಳ ಪ್ರಮಾಣದಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಕೇಂದ್ರ ಸರ್ಕಾರದ ಅಂಕಿ ಅಂಶಗಳು ಹೇಳಿವೆ.
ಕಳೆದ ಒಂದು ದಶಕದ ಅವಧಿಯಲ್ಲಿ ರಾಜ್ಯದ ಜನತೆಯ ತಲಾದಾಯ ಪ್ರಮಾಣದಲ್ಲಿ ಶೇ.93.6ರಷ್ಟು ಏರಿಕೆ ಕಂಡುಬಂದಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಲೋಕಸಭೆಗೆ ನೀಡಿದ ಮಾಹಿತಿಯಲ್ಲಿ ತಿಳಿಸಿದೆ.
ನಂ.1 ರಾಜ್ಯ:
ಕೇಂದ್ರ ಹಣಕಾಸು ಸಚಿವಾಲಯವು ಮಂಗಳವಾರ ಮಂಡಿಸಿದ ವರದಿ ಅನ್ವಯ, 2014-15ರಲ್ಲಿ 1,05,697 ರು. ಇದ್ದ ಕರ್ನಾಟಕದ ಜನತೆಯ ತಲಾ ಆದಾಯ, 10 ವರ್ಷಗಳಲ್ಲಿ (2024-25) ಶೇ.93.6ರಷ್ಟು ಬೆಳವಣಿಗೆಯೊಂದಿಗೆ 2,04,605 ರು.ಗೆ ತಲುಪಿದೆ. ಮತ್ತೊಂದೆಡೆ ಇದೇ ಅವಧಿಯಲ್ಲಿ ದೇಶದ ಸರಾಸರಿಯಲ್ಲಿ ಶೇ. 57.6ರಷ್ಟು ಬೆಳವಣಿಗೆ ದಾಖಲಾಗಿದೆ. 10 ವರ್ಷಗಳ ಹಿಂದೆ 72,805 ರು. ಇದ್ದ ದೇಶದ ಜನತೆಯ ತಲಾ ಆದಾಯವೀಗ 1,14,710 ರು.ಗೆ ಹೆಚ್ಚಳವಾಗಿದೆ. ಅಂದರೆ ರಾಷ್ಟ್ರೀಯ ಸರಾಸರಿಗಿಂತಲೂ ದ್ವಿಗುಣ ಪ್ರಮಾಣದಲ್ಲಿ ಕರ್ನಾಟಕದ ಜನರ ತಲಾದಾಯ ಹೆಚ್ಚಾಗಿದೆ. ಉಳಿದಂತೆ, 1,96,309 ರು. ತಲಾ ಆದಾಯದೊಂದಿಗೆ ತಮಿಳುನಾಡು 2ನೇ ಸ್ಥಾನ ಪಡೆದಿದೆ.
ರಾಜ್ಯದ ಒಟ್ಟು ಆದಾಯವನ್ನು ಒಟ್ಟು ಜನಸಂಖ್ಯೆಯಿಂದ ಭಾಗಿಸಿ ತಲಾ ಆದಾಯವನ್ನು ಲೆಕ್ಕ ಹಾಕಬಹುದು.
ರಾಜ್ಯದಲ್ಲಿ ತಲಾದಾಯ ಏರಿಕೆ2014-151.05 ಲಕ್ಷ ರು.2024-252.04 ಲಕ್ಷ ರು.
ತಲಾದಾಯ ಬೆಳವಣಿಗೆ ರಾಷ್ಟ್ರೀಯ ಸರಾಸರಿಶೇ.57.6ರಾಜ್ಯದ ಸರಾಸರಿಶೇ.93.6
- 2014-15ರಲ್ಲಿ ಕರ್ನಾಟಕದ ಜನತೆಯ ತಲಾ ಆದಾಯ 1,05,697 ರು.
- 2024-25ರಲ್ಲಿ ಶೇ.93.6 ಬೆಳವಣಿಗೆಯೊಂದಿಗೆ 2,04,605 ರು.ಗೆ ವೃದ್ಧಿ
- ರಾಷ್ಟ್ರೀಯ ಸರಾಸರಿಗಿಂತ ದುಪ್ಪಟ್ಟು ಪ್ರಮಾಣದಲ್ಲಿ ತಲಾದಾಯ ಹೆಚ್ಚಳ
- 1,96,309 ರು. ತಲಾ ಆದಾಯದೊಂದಿಗೆ ತಮಿಳುನಾಡು 2ನೇ ಸ್ಥಾನ