ಅಂಡರ್ ಪಾಸ್ ನಿರ್ಮಾಣ, ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಲು ಕರ್ನಾಟಕ ಪ್ರಾಂತ ರೈತ ಸಂಘ ಪ್ರತಿಭಟನೆ ಆಗ್ರಹ

| Published : Feb 01 2025, 12:01 AM IST

ಅಂಡರ್ ಪಾಸ್ ನಿರ್ಮಾಣ, ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಲು ಕರ್ನಾಟಕ ಪ್ರಾಂತ ರೈತ ಸಂಘ ಪ್ರತಿಭಟನೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಮುತ್ತತ್ತಿಗೆ ಹೋಗುವ ರಸ್ತೆಯಲ್ಲಿ ಚಿಕ್ಕಕೆರೆ ಬಳಿ ಐದಾರು ವರ್ಷಗಳಿಂದ ಸೇತುವೆ ಕಾಮಗಾರಿ ಪೂರ್ಣಗೊಳ್ಳದೆ ಸಾರ್ವಜನಿಕರಿಗೆ ತೊಂದರೆಯಾಗಿದೆ. ಎನ್.ಕೊಡಹಳ್ಳಿ ಮತ್ತು ಮಾರಗೌಡನಹಳ್ಳಿ ಬಳಿ ಶಾಲಾ ವಿದ್ಯಾರ್ಥಿಗಳು ಹೆಚ್ಚಾಗಿ ಪ್ರಯಾಣಿಸುವುದರಿಂದ ಅಲ್ಲಿ ರಸ್ತೆ ಉಬ್ಬನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಹಲಗೂರು

ರಾಷ್ಟ್ರೀಯ ಹೆದ್ದಾರಿ 209ರ ಗೊಲ್ಲರಹಳ್ಳಿ ಮತ್ತು ಎಚ್.ಬಸಾಪುರ ಗೇಟ್ ಬಳಿ ಅಂಡರ್ ಪಾಸ್ ನಿರ್ಮಾಣ, ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸುವಂತೆ ಕರ್ನಾಟಕ ಪ್ರಾಂತ ರೈತ ಸಂಘಟನೆಯ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಹಲಗೂರು ಸರ್ಕಲ್ ನಲ್ಲಿ ಪ್ರಾಂತ ರೈತ ಸಂಘದ ಅಧ್ಯಕ್ಷ ಎನ್.ಎಲ್. ಭರತ್ ರಾಜ್ ಮಾತನಾಡಿ, ರಸ್ತೆಗಳು ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮವಾಗಿ ಕಡಿಮೆ ಅವಧಿಯಲ್ಲಿ ಮನೆ ತಲುಪುವಂತೆ ಇರಬೇಕು.

ಆದರೆ, ಗೊಲ್ಲರಹಳ್ಳಿ ಮತ್ತು ಎಚ್.ಬಸಾಪುರ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಗಳಿಂದ ಹಲವು ತಿಂಗಳುಗಳಿಂದ 20ಕ್ಕೂ ಹೆಚ್ಚು ಮಂದಿ ಅಪಘಾತದಿಂದ ಮೃತಪಟ್ಟಿದ್ದಾರೆ. ಇದಕ್ಕೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳೇ ಕಾರಣ ಎಂದು ಆರೋಪಿಸಿದರು.

ಹಲಗೂರು ಪಟ್ಟಣ ವೇಗವಾಗಿ ಬೆಳೆಯುತ್ತಿದೆ. ಜನಸಂಖ್ಯೆ ಹೆಚ್ಚಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕ ಇರುವುದರಿಂದ ಅಪಘಾತಗಳ ಸರಣಿಗಳೂ ಹೆಚ್ಚಾಗಿವೆ. ಆದ್ದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ದಿನದ 24 ಗಂಟೆಯೂ ವೈದ್ಯರ ಸೇವೆ ಕಲ್ಪಿಸಬೇಕು.

ಔಷಧಿ ವ್ಯವಸ್ಥೆ, ಲ್ಯಾಬ್ ಗಳು ಮತ್ತು ದಾದಿಯರು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಬೇಕು. ಅಲ್ಲದೆ ಕನಿಷ್ಠ ನೂರು ಬೆಡ್ ಗಳ ಹಾಸಿಗೆಯನ್ನಾಗಿ ಮೇಲ್ದರ್ಜೆಗೇರಿಸಬೇಕು ಎಂದು ಒತ್ತಾಯಿಸಿದರು‌.

ನಾಡ ಕಚೇರಿಯಲ್ಲಿ ರೆಕಾರ್ಡ್ ನೀಡಲು ವಿಳಂಬ ಮಾಡುತ್ತಿದ್ದಾರೆ. ಅಸಮರ್ಪಕ ಕಾರ್ಯ ನಿರ್ವಹಣೆ, ದಾಖಲಾತಿಗಳನ್ನು ಪಡೆಯಲು ಜೆರಾಕ್ಸ್ ಯಂತ್ರಗಳು ಇಲ್ಲದೆ ಸಿಬ್ಬಂದಿ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸದೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಗಮನ ನೀಡುವಂತೆ ತಹಸೀಲ್ದಾರ್ ಅವರನ್ನು ಒತ್ತಾಯಿಸಿದರು.

ಸೆಂಟ್ರಲ್ ಬ್ಯಾಂಕಿನ ಸಿಬ್ಬಂದಿಯು ನಾಗರಿಕರ ಜೊತೆ ಸೌಜನ್ಯವಾಗಿ ವರ್ತಿಸಬೇಕು. ಕೆಲವರು 10 ವರ್ಷಗಳು ಕಳೆದರೂ ಇದೇ ಬ್ಯಾಂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಾ ಸ್ಥಳೀಯರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಅವರನ್ನು ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದರು.

ಮುತ್ತತ್ತಿಗೆ ಹೋಗುವ ರಸ್ತೆಯಲ್ಲಿ ಚಿಕ್ಕಕೆರೆ ಬಳಿ ಐದಾರು ವರ್ಷಗಳಿಂದ ಸೇತುವೆ ಕಾಮಗಾರಿ ಪೂರ್ಣಗೊಳ್ಳದೆ ಸಾರ್ವಜನಿಕರಿಗೆ ತೊಂದರೆಯಾಗಿದೆ. ಎನ್.ಕೊಡಹಳ್ಳಿ ಮತ್ತು ಮಾರಗೌಡನಹಳ್ಳಿ ಬಳಿ ಶಾಲಾ ವಿದ್ಯಾರ್ಥಿಗಳು ಹೆಚ್ಚಾಗಿ ಪ್ರಯಾಣಿಸುವುದರಿಂದ ಅಲ್ಲಿ ರಸ್ತೆ ಉಬ್ಬನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ತಾಲೂಕು ವೈದ್ಯಾಧಿಕಾರಿ ಡಾ.ವೀರಭದ್ರಪ್ಪ, ನಾಡಕಚೇರಿ ಉಪ ತಹಸೀಲ್ದಾರ್, ರಾಷ್ಟ್ರೀಯ ಹೆದ್ದಾರಿ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಲೀಡ್ ಬ್ಯಾಂಕ್ ಮ್ಯಾನೇಜರ್ ಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಪ್ರಾಂತ ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಎನ್.ಲಿಂಗರಾಜಮೂರ್ತಿ, ಹಲಗೂರು ಹೋಬಳಿ ಅಧ್ಯಕ್ಷ ಎಂ.ಇ.ಮಹದೇವು, ಕಾರ್ಯದರ್ಶಿ ಮಹೇಶ್ ಕುಮಾರ್, ಸಾಗ್ಯ ಶಿವಕುಮಾರ್, ರಾಜು, ಎ.ಎಲ್.ಶಿವಕುಮಾರ್, ಪ್ರಮೀಳಾ, ಶಾಂಭವಿ, ಗುರುಸ್ವಾಮಿ, ಸಣ್ಣಶೆಟ್ಟಿ, ಶಿವಪ್ಪ, ಮಹದೇವು, ಗೋಪಿ, ಗಣೇಶ್, ನಾರಾಯಣಗೌಡ, ಬೋರಯ್ಯ, ವಿಷಕಂಠಮೂರ್ತಿ, ಚಿಕ್ಕರಾಜು, ದೇವರಾಜು, ಶ್ರೀನಿವಾಸ್, ಭಾಸ್ಕರ್, ಕೆ.ಎಂ.ಗುರುಪ್ರಸಾದ್, ರಾಜೇಗೌಡ, ಪಟೇಲ್ ಬಸವರಾಜು, ಡೈರಿಬಾಬು. ಶೇಖರ್, ಚನ್ನಬಸಪ್ಪ ಸೇರಿ ಹಲವರು ಭಾಗವಹಿಸಿದ್ದರು.