ಸಾರಾಂಶ
ಹೂವಿನಹಡಗಲಿ: ತಾಲೂಕಿನಲ್ಲಿರುವ 500 ಎಕರೆ ಕೃಷಿ ಭೂಮಿಯಲ್ಲಿ ಸೋಲಾರ್ ಅಳವಡಿಸಲು ಖಾಸಗಿ ಕಂಪನಿಗಳು ಹುನ್ನಾರ ನಡೆಸಿದ್ದು, ಇದರ ವಿರುದ್ಧ ಜನಜಾಗೃತಿ ಮೂಡಿಸುವುದು ಅಗತ್ಯವಿದೆ ಎಂದು ಹಿಂದುಳಿದ ಜಾತಿಗಳ ಜಿಲ್ಲಾಧ್ಯಕ್ಷ ಬುಡ್ಡಿ ಬಸವರಾಜ ಹೇಳಿದರು.
ಪಟ್ಟಣದ ಜಿಪಿಜಿ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ಸಾರ್ವಜನಿಕ ಸೇವಾ ಸಂಘ ಆಯೋಜಿಸಿದ್ದ ಅಕ್ಷರ, ಅನ್ನ. ಆರೋಗ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಹಾರ ಉತ್ಪಾದನೆ ಕ್ಷೀಣಿಸುತ್ತಿದೆ. ಕೃಷಿಗೆ ಉತ್ತೇಜನ ನೀಡುವಂಥ ಕಾರ್ಯಕ್ರಮಗಳನ್ನು ಯೋಚಿಸುತ್ತಿರುವ ಈ ಸಂದರ್ಭದಲ್ಲಿ ತಾಲೂಕಿನಲ್ಲಿ 500 ಎಕರೆ ಭೂ ಪ್ರದೇಶದಲ್ಲಿ ವಿದ್ಯುತ್ ಉತ್ಪಾದನೆಗೆ ಬಳಸಿಕೊಳ್ಳಲು ಅವಕಾಶ ಮಾಡಿಕೊಟ್ಟರೆ, ತಾಲೂಕಿನ ಕೃಷಿ ಉತ್ಪಾದನೆಗೆ ದೊಡ್ಡ ಪೆಟ್ಟು ಬೀಳಲಿದೆ. ಇದಕ್ಕೆ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಅವಕಾಶ ನೀಡಬಾರದು ಎಂದರು.ಪಟ್ಟಣ, ನಗರ ಪ್ರದೇಶಗಳ ಸ್ವಚ್ಛತೆ ಕಾಪಾಡುವಲ್ಲಿ ತಮ್ಮದೇ ಕೊಡುಗೆ ನೀಡುವ ಎಲ್ಲ ಪೌರ ಕಾರ್ಮಿಕರನ್ನು ಗೌರವಿಸುತ್ತಿರುವ, ಕಾರ್ಯ ಶ್ಲಾಘನೀಯ. ಹಳ್ಳಿಯ ಜನತೆ ತಮ್ಮ ಹಳ್ಳಿಗಳಲ್ಲಿ ದೇವರ ಗುಡಿ ಅಭಿವೃದ್ಧಿ ಬಗ್ಗೆ ಯೋಚಿಸದೇ ಶಾಲೆ ಗುಡಿ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸಬೇಕು. ಜ್ಞಾನಾರ್ಜನೆಗೆ ಅವಕಾಶ ಕಲ್ಪಿಸಿಕೊಟ್ಟರೆ ಮುಂದಿನ ಪೀಳಿಗೆ ಸದೃಢಗೊಳ್ಳುತ್ತದೆ ಎಂದರು.
ಸಾನಿಧ್ಯ ವಹಿಸಿದ್ದ ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ ಮಾತನಾಡಿ, ಎಲ್ಲರೂ ನಿದ್ದೆಯಿಂದ ಎಚ್ಚರಗೊಳ್ಳುವ ಮೊದಲೇ ಪಟ್ಟಣವನ್ನು ಸ್ವಚ್ಛಗೊಳಿಸುವ ಪೌರ ಕಾರ್ಮಿಕರು, ಜನರ ಆರೋಗ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಪೌರ ಕಾರ್ಮಿಕರನ್ನು ಸನ್ಮಾನಿಸುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.ಚೌಕಿಮಠದ ಸದ್ಗುರು ಗಾಡಿತಾತಾ ಮಾತನಾಡಿ, ದೇವಸ್ಥಾನಕ್ಕೆ ಕಳಸ ಆಗುವುದಕ್ಕಿಂತ ಕಸಬರಿಗೆ ಆಗುವುದು ಮುಖ್ಯ. ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಮಠ, ಮಾನ್ಯಗಳು ಮಾಡುವ ಕೆಲಸವನ್ನು ಈ ಸಂಸ್ಥೆ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.
ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಪಿಡಿಒ ಮಹ್ಮದ್ ಬಿಲ್ಲುಖಾನ್, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಆರ್.ಮಂಜುನಾಥ, ಗ್ರಾಪಂ ಸದಸ್ಯ ಜಿ.ಶರಣಗೌಡ, ಅಂಗನವಾಡಿ ಫೆಡರೇಷನ್ ಅಧ್ಯಕ್ಷೆ ಬಿ.ಜಯಲಕ್ಷ್ಮೀ ಮಾತನಾಡಿದರು.ಸಾರ್ವಜನಿಕ ಸೇವಾ ಸಂಘದ ಅಧ್ಯಕ್ಷ ಎಚ್.ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು. ರೈತ ಸಂಘದ ಎಂ.ಶಿವರಾಜ್, ಗೌರವ ಅಧ್ಯಕ್ಷ ಎಚ್.ಸಿದ್ದಪ್ಪ, ಪಾಂಡುರಂಗ, ಅಂಜಿನಪ್ಪ, ಸುಭಾನ್ ಸಾಬ್ ಇದ್ದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ 120ಕ್ಕೂ ಹೆಚ್ಚು ಸಾಧಕರನ್ನು ಸನ್ಮಾನಿಸಲಾಯಿತು.