ಇಂದು ಜಿಲ್ಲೆಗೆ ‘ಕರ್ನಾಟಕ ಪುಸ್ತಕ ಪರಿಕ್ರಮ’ ಬಸ್‌

| Published : Jul 08 2024, 12:45 AM IST

ಸಾರಾಂಶ

ಕರ್ನಾಟಕ ಪುಸ್ತಕ ಪರಿಕ್ರಮದ ಬಸ್‌ ಜು. 8ರಂದು ಕೊಡಗು ಜಿಲ್ಲೆಗೆ ಆಗಮಿಸಲಿದೆ. ರಾಜ್ಯದ ಸುಮಾರು 14 ಜಿಲ್ಲೆಗಳಲ್ಲಿ ಈ ಪುಸ್ತಕ ಭಂಡಾರ ವಾಹನ ಸಂಚರಿಸಲಿದೆ.

ಕನ್ನಡಪ್ರಭ ವಾರ್ತೆ ಕುಶಾಲನಗರಭಾರತ ಸರ್ಕಾರದ ಶಿಕ್ಷಣ ಮಂತ್ರಾಲಯ ವತಿಯಿಂದ ಆಯೋಜಿಸಲಾದ ಕರ್ನಾಟಕ ಪುಸ್ತಕ ಪರಿಕ್ರಮದ ಬಸ್‌ ಜು.8ರಂದು ಕೊಡಗು ಜಿಲ್ಲೆಗೆ ಆಗಮಿಸಲಿದೆ.ಸಂಚಾರಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಾಡುವ ಕಾರ್ಯಕ್ರಮದ ಅಡಿಯಲ್ಲಿ ಬಸ್ ಮೂಲಕ ಜೂ.24ರಿಂದ ಆ.8ರ ತನಕ ರಾಜ್ಯದ ಸುಮಾರು 14 ಜಿಲ್ಲೆಗಳಲ್ಲಿ ಈ ಪುಸ್ತಕ ಭಂಡಾರ ವಾಹನ ಸಂಚರಿಸಲಿದೆ. ಬೆಂಗಳೂರಿನಿಂದ ಪ್ರಾರಂಭವಾದ ಸಂಚಾರಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳ, ರಾಮನಗರ, ಮಂಡ್ಯ, ಮೈಸೂರು ಜಿಲ್ಲೆ ನಂತರ ಕುಶಾಲನಗರ ಮೂಲಕ ಕೊಡಗು ಜಿಲ್ಲೆಗೆ ಆಗಮಿಸಲಿದೆ.

ಸಂಚಾರಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ವಾಹನದಲ್ಲಿ ಸುಮಾರು 2000ಕ್ಕೂ ಅಧಿಕ ಪುಸ್ತಕಗಳು ಲಭ್ಯವಿದೆ. ಸಾಮಾನ್ಯ ಜ್ಞಾನ ಹಾಗೂ ಮಕ್ಕಳಿಗೆ, ಹಿರಿಯರಿಗೆ ಎಲ್ಲರಿಗೂ ಅಗತ್ಯವಿರುವ ಹಿಂದಿ, ಕನ್ನಡ, ಆಂಗ್ಲ ಭಾಷೆಯ ಪುಸ್ತಕಗಳು ಸಂಚಾರಿ ಪುಸ್ತಕಗಳ ಭಂಡಾರದಲ್ಲಿ ಕಾಣಬಹುದು. ಕೇಂದ್ರೀಯ ವಿದ್ಯಾಲಯ ಜವಾಹರ್ ನವೋದಯ ವಿದ್ಯಾರ್ಥಿಗಳು, ಐಎಎಸ್, ಐಪಿಎಸ್ ಪರೀಕ್ಷಾ ಅಭ್ಯರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಉಪಯುಕ್ತವಾದ ಪುಸ್ತಕಗಳು ಈ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆಯಲ್ಲಿ ಲಭ್ಯವಿದೆ.

ರಜಾದಿನದಂದು ಸಾರ್ವಜನಿಕ ಸ್ಥಳಗಳಲ್ಲಿ ಈ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ ಎಂದು ಉಸ್ತುವಾರಿ ಅಧಿಕಾರಿ ಸತ್ಯನಾರಾಯಣ ತಿಳಿಸಿದ್ದಾರೆ. ಓದುವ ಹವ್ಯಾಸ ಹೆಚ್ಚು ಮಾಡುವ ನಿಟ್ಟಿನಲ್ಲಿ ಪುಸ್ತಕ ಭಂಡಾರವೇ ಜನರ ಬಳಿ ತೆರಳುವ ಕಾರ್ಯಕ್ರಮವನ್ನು ಸರ್ಕಾರ ಶಿಕ್ಷಣ ಇಲಾಖೆಯ ಮೂಲಕ ಹಮ್ಮಿಕೊಂಡಿದೆ ಎಂದು ಅವರು ಹೇಳಿದರು.